ಕನ್ನಡ ಚಿತ್ರರಂಗದಲ್ಲಿ ಹಾಸ್ಯನಟನಾಗಿ, ಪೋಷಕ ನಟನಾಗಿ ಗುರುತಿಸಿಕೊಂಡಿರುವ ನಟ ವೈಜನಾಥ ಬಿರಾದಾರ್ ಈಗ ಪೂರ್ಣ ಪ್ರಮಾಣದಲ್ಲಿ ನಾಯಕ ನಟರಾಗಿ ತೆರೆಗೆ ಬರುವ ತಯಾರಿಯಲ್ಲಿದ್ದಾರೆ.
ಹೌದು, ವೈಜನಾಥ್ ಬಿರಾದಾರ್ ಹೀರೋ ಆಗಿ ಕಾಣಿಸಿಕೊಳ್ಳುತ್ತಿರುವ ಹೊಸ ಸಿನಿಮಾದ ಹೆಸರು “90 ಬಿಡಿ ಮನೀಗ್ ನಡಿ’. ಅಂದಹಾಗೆ, ಇದು ಬಿರಾದಾರ್ ಅಭಿನಯದ 500ನೇ ಸಿನಿಮಾ ಎಂಬುದು ವಿಶೇಷ. ರತ್ನಮಾಲಾ ಬಾದರದಿನ್ನಿ ನಿರ್ಮಿಸಿರುವ “90 ಬಿಡಿ ಮನೀಗ್ ನಡಿ…’ ಸಿನಿಮಾವನ್ನು ಉಮೇಶ್ ಬಾದರದಿನ್ನಿ ಮತ್ತು ನಾಗರಾಜ್ ಅರೆಹೊಳೆ ಜಂಟಿಯಾಗಿ ನಿರ್ದೇಶಿಸಿದ್ದಾರೆ.
ಈಗಾಗಲೇ ಸೆನ್ಸಾರ್ ಪಾಸಾಗಿರುವ ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದೆ. ಮೊದಲ ಹಂತವಾಗಿ ಈ ಚಿತ್ರದ ಟೈಟಲ್ ಟ್ರ್ಯಾಕ್ ಇಂದು ಬಿಡುಗಡೆಯಾಗುತ್ತಿದೆ. ವಿ.ನಾಗೇಂದ್ರ ಪ್ರಸಾದ್ ಬರೆದಿರುವ ಹಾಡಿಗೆ ರಾಜೇಶ್ ಕೃಷ್ಣನ್ ಧ್ವನಿಯಾಗಿದ್ದಾರೆ.
ಚಿತ್ರದ ಬಗ್ಗೆ ಮಾತನಾಡುವ ನಿರ್ದೇಶಕರಲ್ಲೊಬ್ಬರಾದ ನಾಗರಾಜ್ ಅರೆಹೊಳೆ, “ಇದೊಂದು ಕಾಮಿಡಿ ಮತ್ತು ಸಸ್ಪೆನ್ಸ್-ಥ್ರಿಲ್ಲರ್ ಕಥಾಹಂದರದ ಸಿನಿಮಾ. ಇಡೀ ಸಿನಿಮಾದ ಶೇಕಡಾ 80ರಷ್ಟು ಭಾಗ ಉತ್ತರ ಕರ್ನಾಟಕದ ಸೊಗಡಿನಲ್ಲಿ ನಡೆಯುತ್ತದೆ. ಇಂಥದ್ದೊಂದು ಪಾತ್ರವನ್ನು ಉತ್ತರ ಕರ್ನಾ ಟಕದ ಮೂಲದ ಕಲಾವಿದರು ಮಾಡಿದರೆ ಹೆಚ್ಚು ಪರಿಣಾಮಕಾರಿಯಾಗಿರುತ್ತದೆ ಎಂಬ ಯೋಚನೆ ನಮ್ಮಲ್ಲಿತ್ತು. ಕೊನೆಗೆ ಈ ಕಥೆಗೆ ಮತ್ತು ಪಾತ್ರಕ್ಕೆ ಬಿರಾದಾರ್ ಅವರೇ ಸೂಕ್ತ ಎನಿಸಿ, ಅವರನ್ನೇ ಹೀರೋ ಆಗಿ ಆಯ್ಕೆ ಮಾಡಿಕೊಂಡೆವು. ಸಂಪೂರ್ಣ ಹಾಸ್ಯಭರಿತವಾಗಿರುವ ಜೊತೆಗೆ ಸಸ್ಪೆನ್ಸ್ ಇರುವಂಥ ಸಿನಿಮಾ ಇದು’ ಎನ್ನುತ್ತಾರೆ.
ಚಿತ್ರದಲ್ಲಿ ವೈಜನಾಥ್ ಬಿರಾದಾರ್ ಅವರೊಂದಿಗೆ ಕರಿಸುಬ್ಬು, ನೀತಾ, ಪ್ರೀತು ಪೂಜಾ, ಧರ್ಮ, ಪ್ರಶಾಂತ್ ಸಿದ್ಧಿ ಮೊದಲಾದವರು ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಶೀಘ್ರದಲ್ಲೇ ಟ್ರೇಲರ್ ಬಿಡುಗಡೆ ಮಾಡುವ ಯೋಚನೆ ಚಿತ್ರತಂಡಕ್ಕಿದೆ.