Advertisement

Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು

01:25 PM Dec 20, 2024 | Team Udayavani |

ಹೊಸದೇನೋ ಮಾಡಬೇಕು ಎಂಬ ಆಸೆಯಿಂದಲೇ ಪ್ರತಿ ಸಿನಿಮಾವನ್ನು ಒಪ್ಪಿಕೊಳ್ಳುತ್ತೇನೆ. ಹಾಗಾಗಿ, ಪ್ರತಿ ಸಿನಿಮಾವೂ ನನಗೆ ಪಾಠವಿದ್ದಂತೆ. ಹೊಸದನ್ನು ಕಲಿಯುತ್ತಲೇ ಇರುತ್ತೇನೆ… – ಹೀಗೆ ಹೇಳಿ ನಕ್ಕರು ಧ್ರುವ ಸರ್ಜಾ.

Advertisement

ಧ್ರುವ ಸರ್ಜಾ ನಟನೆಯ “ಮಾರ್ಟಿನ್‌’ ಕೆಲವು ತಿಂಗಳ ಹಿಂದೆ ತೆರೆಕಂಡು ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿತು. ಈ ಕುರಿತು ಏನಾದರೂ ಬೇಸರವಿದೆಯೇ ಎಂಬ ಪ್ರಶ್ನೆ ಧ್ರುವ ಮುಂದೆ ಇಟ್ಟಾಗ ಅವರ ಕಡೆಯಿಂದ ಬಂದ ಉತ್ತರವಿದು. “ಮೊದಲಿನಿಂದಲೂ ವಿಭಿನ್ನವಾಗಿ ಏನಾದರೂ ಪ್ರಯತ್ನ ಮಾಡಬೇಕು ಎಂಬ ಆಸೆ ನನ್ನದು. ಅದೇ ಕಾರಣಕ್ಕೆ ಮಾರ್ಟಿನ್‌ ಮಾಡಿದ್ದು. ಪ್ರತಿ ಚಿತ್ರದಲ್ಲೂ ಕಲಿಯುವುದಿರುತ್ತದೆ. ಅದೇ ರೀತಿ ಮಾರ್ಟಿನ್‌ನಲ್ಲಿ ಜನರಿಗೆ ಏನು ಇಷ್ಟವಾಯಿತು? ಏನು ಇಷ್ಟವಾಗಲಿಲ್ಲ? ಎರಡನ್ನೂ ಹೇಳಿದ್ದಾರೆ’ ಎಂದರು ಧ್ರುವ.

ಇನ್ನು, ಧ್ರುವ ಸರ್ಜಾ ಸಿನಿಮಾ ಎಂದರೆ ಮೂರು ವರ್ಷ ಫಿಕ್ಸ್‌ ಎಂಬ ಮಾತು ಚಿತ್ರರಂಗದಲ್ಲಿದೆ. ಅದಕ್ಕೆ ಸರಿಯಾಗಿ ಅವರ ಸಿನಿಮಾಗಳು ತಡವಾಗುತ್ತಲೇ ಬಂದಿವೆ. “ಪೊಗರು’, “ಮಾರ್ಟಿನ್‌’ ಸಿನಿಮಾಗಳು ರಿಲೀಸ್‌ ವಿಚಾರದಲ್ಲಿ ಸಾಕಷ್ಟು ತಡವಾಗಿಯೇ ಬಿಡುಗಡೆ ಕಂಡವು. ಆದರೆ, ಈಗ ಧ್ರುವ ಎಚ್ಚೆತ್ತುಕೊಂಡಿದ್ದಾರೆ. ತಡ ಮಾಡದೇ ಒಂದರ ಹಿಂದೊಂದರಂತೆ ಸಿನಿಮಾ ಮಾಡಲು ಮುಂದಾಗಿದ್ದಾರೆ. ಇದೇ ಕಾರಣದಿಂದ ಅವರು “ಮುಂದಿನ ವರ್ಷ ನನ್ನ ಮೂರು ಸಿನಿಮಾ ರಿಲೀಸ್‌ ಆದರೂ ಆಶ್ಚರ್ಯವಿಲ್ಲ…’ ಎನ್ನುತ್ತಾರೆ.

ಈ ಕುರಿತು ಮಾತನಾಡುವ ಧ್ರುವ ಸರ್ಜಾ, “ನನ್ನ ಸಿನಿಮಾಗಳು ತಡವಾಗುತ್ತಿವೆ ಎಂಬ ಮಾತಿದೆ ನಿಜ. ಹಾಗಂತ ನಾನು ಅದಕ್ಕೆ ಅವರು, ಇವರು ಕಾರಣ ಅಂತ ಹೇಳಲು ಇಷ್ಟಪಡಲ್ಲ. ಒಳ್ಳೆ ಸಿನಿಮಾ ಮಾಡುತ್ತೇನೆ ಅಂತ ಮಾತ್ರ ಪ್ರಾಮಿಸ್‌ ಮಾಡಬಲ್ಲೆ. ಬ್ಯಾಕ್‌ ಟು ಬ್ಯಾಕ್‌ ಸಿನಿಮಾ ಮಾಡುತ್ತಿದ್ದೇನೆ. ಆದರೆ, ಹೊಸ ವರ್ಷದಲ್ಲಿ “ಕೆಡಿ’ ಸೇರಿ ಎರಡು ಚಿತ್ರಗಳ ಬಿಡುಗಡೆ ಪಕ್ಕಾ’ ಎಂದು ತುಂಬು ವಿಶ್ವಾಸದಿಂದ ಹೇಳುತ್ತಾರೆ ಧ್ರುವ.

ಅಭಿಮಾನಿಗಳು ಇಷ್ಟಪಡುವುದು ಬೇರೆ ವಿಚಾರ. ಆದರೆ ಒಬ್ಬ ನಟನನ್ನು ಇಷ್ಟಪಡದವರು ಕೂಡಾ ಇಷ್ಟಪಡುವಂತಹ ಕೆಲಸ ಮಾಡಬೇಕು ಎಂಬ ಆಸೆ ಧ್ರುವ ಅವರದು. “ಜನರಿಗೆ ಏನಿಷ್ಟವೋ ಅದನ್ನು ಕೊಡುವುದು ನನ್ನ ಕರ್ತವ್ಯ. ಮುಂದೆ ಅವರು ನಿರೀಕ್ಷಿಸುವಂತಹ ಕಥೆಯನ್ನು ಆಯ್ಕೆ ಮಾಡಿಕೊಳ್ಳುತ್ತೇನೆ. ಇಷ್ಟಪಡದವರೂ ನನ್ನನ್ನು ಇಷ್ಟಪಡಬೇಕು, ಅಂತಹ ಪಾತ್ರ ಗಳನ್ನು ಮಾಡಬೇಕು’ ಎನ್ನುವ ನಿರ್ಧಾರಕ್ಕೆ ಬಂದಿದ್ದಾರೆ ಧ್ರುವ.

Advertisement

ಸಿನಿಮಾದ ಕಥೆ ಚೆನ್ನಾಗಿದ್ದರೆ ಮಿಕ್ಕಿದ್ದೆಲ್ಲವೂ ಕೂಡಿ ಬರುತ್ತದೆ ಎನ್ನುವುದು ಸಿನಿಮಾದವರ ನಂಬಿಕೆ. ಅದೇ ಕಾರಣದಿಂದ ಸಿಕ್ಕಾಪಟ್ಟೆ ತಲೆಕೆಡಿಸಿಕೊಂಡು ಕಥೆ ಆಯ್ಕೆ ಮಾಡುತ್ತಾರೆ. ಈ ವಿಚಾರದಲ್ಲಿ ಧ್ರುವ ಕೂಡಾ ತುಂಬಾ ಚೂಸಿ. ಈ ಕುರಿತು ಮಾತನಾಡುವ ಧ್ರುವ ಸರ್ಜಾ, “ಪಾತ್ರಕ್ಕಿಂತ ಕಥೆ ಮುಖ್ಯ. 50ರಿಂದ 60 ಕಥೆಗಳನ್ನು ಕೇಳಿದ್ದೇನೆ. ನಿರ್ದೇಶಕರು ಹಳಬರಾಗಲಿ, ಹೊಸಬರಾಗಲಿ ಕಥೆ ಇಷ್ಟವಾದರೆ ಸಿನಿಮಾ ಮಾಡುತ್ತೇನೆ. ನನಗೆ ಕಥೆಯಷ್ಟೇ ಮುಖ್ಯ’ ಎನ್ನುತ್ತಾರೆ.

“ಮಾರ್ಟಿನ್‌’ ಸಿನಿಮಾ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ನಿರೀಕ್ಷೆ ಹುಟ್ಟಿಸಿತ್ತು. ಆದರೆ, ಚಿತ್ರ ಬಿಡುಗಡೆಯಾದ ಮೇಲೆ ನಿರೀಕ್ಷಿತ ಮಟ್ಟ ತಲುಪಲಿಲ್ಲ. ಈಗ ಧ್ರುವ ಸರ್ಜಾ ಅದೇ ನಿರ್ಮಾಪಕರಿಗೆ ಮತ್ತೂಂದು ಕಾಲ್‌ಶೀಟ್‌ ಕೊಟ್ಟಿದ್ದು, ಉದಯ್‌ ಮೆಹ್ತಾ ಸಿನಿಮಾ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಚಿತ್ರಕ್ಕೆ ರೈನೋ ಎಂಬ ಟೈಟಲ್‌ ಇಡುವ ಸಾಧ್ಯತೆ ಇದೆ. “ಸದ್ಯ ಒಪ್ಪಿಕೊಂಡಿರುವ ಕೆಲ ಚಿತ್ರಗಳನ್ನು ಪೂರ್ಣಗೊಳಿಸಿ ನಂತರ “ರೈನೋ’ ಪ್ರಾರಂಭಿಸಲಿದ್ದೇವೆ. ಸ್ವಲ್ಪ ತಡವಾಗಬಹುದಷ್ಟೇ’ ಎನ್ನುತ್ತಾರೆ.

ರವಿಪ್ರಕಾಶ್‌ ರೈ

Advertisement

Udayavani is now on Telegram. Click here to join our channel and stay updated with the latest news.

Next