ಧಾರವಾಡ : ವಿದ್ಯಾರ್ಥಿ ಜೀವನ ಅತ್ಯಮೂಲ್ಯ ಆಗಿದ್ದು, ಬದುಕಿಗೆ ಭದ್ರ ಅಡಿಪಾಯ ಹಾಕುವ ಈ ಸಮಯಕ್ಕೆ ಮಾದಕ ವಸ್ತುಗಳ ವ್ಯಸನ ಒಳ್ಳೆಯದಲ್ಲ ಎಂದು ನಟ, ನಿರ್ದೇಶಕ ಉಪೇಂದ್ರ ಹೇಳಿದರು.
ನಗರದ ಜೆಎಸ್‌ಎಸ್ ಕಾಲೇಜು ಆವರಣದಲ್ಲಿ ಹು-ಧಾ ಪೊಲೀಸ ಆಯುಕ್ತರ ಕಚೇರಿಯಿಂದ ಹಮ್ಮಿಕೊಂಡಿದ್ದ ಮಾದಕ ವಸ್ತುಗಳ ಬಗ್ಗೆ ಜಾಗೃತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಅವರು ಮಾತನಾಡಿದರು.
ಈ ಭೂಮಿ ಮೇಲೆ ಅನೇಕ ಮಾದಕ ವಸ್ತುಗಳಿವೆ. ಆದರೆ, ನಾವು ಯಾವ ರೀತಿ ಬದುಕಬೇಕು? ಜೀವನ ಕಟ್ಟಿಕೊಳ್ಳಬೇಕು ಎಂಬ ವಿಚಾರ ನಮ್ಮ ತಲೆಯಲ್ಲಿರಬೇಕು. ಯಾರು ಏನೇ ಹೇಳಿದರೂ ಎಲ್ಲವನ್ನೂ ಕೇಳಬೇಕು ಆದರೆ, ಮೊದಲು ನಮ್ಮನ್ನು ನಾವು ನಂಬಬೇಕು. ನಮಗಾಗಿ ಬದುಕಬೇಕು. ಮಾದಕ ವಸ್ತುಗಳ ಬಳಕೆ ಬೇಡ ಎಂದು ಸಲಹೆ ನೀಡಿದರು.
ಜೆಎಸ್‌ಎಸ್ ಕಾಲೇಜಿಗೆ ಬಂದ ನಟ ಉಪೇಂದ್ರ ಅವರ ಮೇಲೆ ಪುಷ್ಪಗಳನ್ನು ಹಾಕುವ ಮೂಲಕ ಬರಮಾಡಿಕೊಳ್ಳಲಾಯಿತು. ಉಪೇಂದ್ರ ಅವರು ಬರುತ್ತಿದ್ದಂತೆ ವಿದ್ಯಾರ್ಥಿಗಳು, ಶಿಳ್ಳೆ, ಕೇಕೆ ಹಾಕಿ ಸಂಭ್ರಮಿಸಿದರು. ಅಷ್ಟೇ ಅಲ್ಲದೇ ಅನೇಕರು ಅವರ ಕೈ ಕುಲುಕಿ ಸಂತಸಪಟ್ಟರು. ಈ ವೇಳೆ ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದ ನಟ ಉಪೇಂದ್ರ ಅವರು, ಯುಐ ಸಿನಿಮಾ ಸೇರಿದಂತೆ ವಿವಿಧ ಚಿತ್ರದ ಡೈಲಾಗ್ ಹೇಳಿ ರಂಜಿಸಿದರು. ಈ ಸಂದರ್ಭದಲ್ಲಿ ಡಿಸಿ ದಿವ್ಯ ಪ್ರಭು, ಪೊಲೀಸ್ ಆಯುಕ್ತ ಎನ್. ಶಶಿಕುಮಾರ, ಡಿಸಿಪಿಗಳಾದ ಮಹಾಲಿಂಗ ನಂದಗಾವಿ, ರವೀಶ್ ಸೇರಿದಂತೆ ಅನೇಕರು ಸಾಥ್ ನೀಡಿದರು.
ಇದನ್ನೂ ಓದಿ: Belagavi: ಜೀವ ವಿಮಾ ಪಾಲಿಸಿಯ ಹಣಕ್ಕಾಗಿ ಸಹೋದರನನ್ನೇ ಕೊ*ಲೆ ಮಾಡಿದ ತಮ್ಮ