ಚಿಂಚೋಳಿ: ಸೇಡಂ ಮತಕ್ಷೇತ್ರದ ರೈತರಿಗೆ ನೀರಾವರಿ ಪ್ರಯೋಜನಕ್ಕಾಗಿ ಕಾಗಿಣಾ ನದಿಯಿಂದ ಏತ ನೀರಾವರಿ ಯೋಜನೆಗೆ 639 ಕೋಟಿ ರೂ. ಮಂಜೂರಿಯಾಗಿದ್ದು, ಶೀಘ್ರದಲ್ಲಿಯೇ ಕಾಮಗಾರಿ ಪ್ರಾರಂಭಕ್ಕೆ ಚಾಲನೆ ನೀಡಲಾಗುವುದು ಎಂದು ಸೇಡಂ ಶಾಸಕ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ರಾಜಕುಮಾರ ಪಾಟೀಲ ತೇಲ್ಕೂರ ಹೇಳಿದರು.
ತಾಲೂಕಿನ ಜಟ್ಟೂರ ಗ್ರಾಮದಲ್ಲಿ ರವಿವಾರ ಕಲಬುರಗಿ, ಯಾದಗಿರಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ ಸಹಕಾರಿ ರೈತರಿಗೆ ಬಡ್ಡಿ ರಹಿತ ಸಾಲ ವಿತರಿಸುವ ಕಾರ್ಯಕ್ರಮದಲ್ಲಿ 240 ರೈತರಿಗೆ 2.68ಕೋಟಿ ರೂ. ಸಾಲದ ಚೆಕ್ ವಿತರಿಸಿ ಅವರು ಮಾತನಾಡಿದರು.
ಡಿಸಿಸಿ ಬ್ಯಾಂಕ್ ಕಳೆದ ಅನೇಕ ವರ್ಷಗಳಿಂದ ದಿವಾಳಿಯಾಗಿ ತುಂಬಾ ನಷ್ಟದಲ್ಲಿತ್ತು. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಿಂದುಳಿದ ರೈತರ ಕಲ್ಯಾಣಕ್ಕಾಗಿ ಒಂದು ಸಾವಿರ ಕೋಟಿ ರೂ. ನೀಡಿರುವುದರಿಂದ ರೈತರಿಗೆ ಸಾಲ ವಿತರಣೆ ಮಾಡಲಾಗುತ್ತಿದೆ. ಇದರಿಂದಾಗಿ 350ಕೋಟಿ ರೂ. ಬಡ್ಡಿ ಉಳಿತಾಯ ಆಗುತ್ತಿದೆ ಎಂದರು.
ಸೇಡಂ ಮತ್ತು ಚಿಂಚೋಳಿ ಮತಕ್ಷೇತ್ರದಲ್ಲಿ ಬರುವ 100 ಹಳ್ಳಿಗಳಲ್ಲಿ ರೈತರು ಹೊಲಗದ್ದೆಗಳಿಗೆ ಹೋಗುವುದಕ್ಕಾಗಿ ರಸ್ತೆ ನಿರ್ಮಿಸಲು 100 ಕೋಟಿ ರೂ.ಮೀಸಲು ಇಡಲಾಗಿದೆ. ಅಲ್ಲದೇ ಮಹಿಳೆಯರ ಸಾಮೂಹಿಕ ಶೌಚಾಲಯಕ್ಕಾಗಿ ಹಣ ನೀಡಲಾಗಿದೆ. ಮೈಸೂರು, ಮಂಡ್ಯ, ಹಾಸನ ಭಾಗದ ರೈತರು ಕೇವಲ ಎರಡು ಎಕರೆ ಜಮೀನುಗಳಲ್ಲಿ ವ್ಯವಸಾಯ ಮಾಡಿಕೊಂಡು ಆರ್ಥಿಕವಾಗಿ ಬಲಿಷ್ಠರಾಗಿರುತ್ತಾರೆ. ಕಲ್ಯಾಣ ಕರ್ನಾಟಕ ಭಾಗದ ರೈತರು 10ರಿಂದ 20ಎಕರೆ ಜಮೀನು ಹೊಂದಿದ್ದರೂ ಸಾಲಕ್ಕಾಗಿ ಪರದಾಡುತ್ತಾರೆ. ರೈತರಿಗೆ ನೇರವಾಗಿ ಸಾಲ ಕೊಡುವುದಕ್ಕಾಗಿ 25ರಿಂದ 50ಸಾವಿರ ರೂ.ಶೂನ್ಯ ಬಡ್ಡಿರಹಿತ ಸಾಲ ನೀಡಲಾಗುತ್ತಿದೆ. ಇದರಿಂದಾಗಿ ರೈತರ ಆತ್ಮಹತ್ಯೆ ಪ್ರಕರಣಗಳು ಆಗುವುದಿಲ್ಲ. ಹೈನುಗಾರಿಕೆ ಮತ್ತು ತೋಟಗಾರಿಕೆ ಉದ್ಯೋಗ ಮಾಡಿಕೊಳ್ಳುವುದಕ್ಕಾಗಿ 10ಲಕ್ಷ ರೂ. ಸಾಲಕ್ಕೆ ಶೇ. 3ರಂತೆ ಬಡ್ಡಿಯಲ್ಲಿ ಸಾಲ ನೀಡಲಾಗುತ್ತಿದೆ ಎಂದರು.
ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಕೊರೊನಾ ತಡೆಗಟ್ಟುವುದಕ್ಕಾಗಿ ದೇಶದ ಜನರಿಗೆ ಉಚಿತ ಲಸಿಕೆ ಕೊಡಿಸಿದ್ದಾರೆ. ರೈತರು ದೇಶದ ಬೆನ್ನಲುಬು ಆಗಿರುವುದರಿಂದ ಅವರ ಉದ್ಧಾರಕ್ಕಾಗಿ ಬಿಜೆಪಿ ಸರ್ಕಾರ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದೆ. ಇವುಗಳ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಹೇಳಿದರು.
ಡಿಸಿಸಿ ಬ್ಯಾಂಕ್ ನಿರ್ದೇಶಕ ಗೌತಮ ಪಾಟೀಲ, ವಿಎಸ್‌ಎಸ್‌ಎನ್ ಅಧ್ಯಕ್ಷ ಅಶೋಕಕುಮಾರ ಪಾಟೀಲ, ಉಪಾಧ್ಯಕ್ಷೆ ನಾಗಮ್ಮ ಲಚಮಾರೆಡ್ಡಿ, ಉಮೇಶರಾವ್ ಕುಲಕರ್ಣಿ, ರಮೇಶ ಬಸಲಾ, ಬಿಚ್ಚಪ್ಪ ಹಾಸಲಿ, ಶಿವನಾಗೇಂದ್ರಪ್ಪ ಹಲಕೋಡ, ಶ್ರೀನಿವಾಸ ವೆಂಕಟಾಪುರ, ಎಪಿಎಂಸಿ ನಿರ್ದೇಶಕ ಮಲ್ಲಿಕಾರ್ಜುನ ಕೊಡದೂರ, ಮುಕುಂದ ದೇಶಪಾಂಡೆ, ಶರಣು ಮೆಡಿಕಲ್, ರವೀಂದ್ರರೆಡ್ಡಿ ಮತ್ತಿತರರು ಇದ್ದರು. ಮುಕುಂದ ದೇಶಪಾಂಡೆ ಸ್ವಾಗತಿಸಿದರು, ಕಾರ್ಯದರ್ಶಿ ವೀರಭದ್ರಯ್ಯ ಮಠಪತಿ ವಂದಿಸಿದರು.