ಕಾಬೂಲ್: ಇಲ್ಲಿನ ಹಮೀದ್ ಕರ್ಜಾಯಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ತಾಲಿಬಾನ್ ಉಗ್ರರು ಬುಧವಾರ ಮೋರ್ಟಾರ್ ದಾಳಿ ನಡೆಸಿ ಅಟ್ಟ ಹಾಸ ಮೆರೆದಿದ್ದಾರೆ. ವಿಮಾನ ನಿಲ್ದಾಣದಲ್ಲಿ ಬಂದಿಳಿದ ಅಮೆರಿಕದ ರಕ್ಷಣಾ ಕಾರ್ಯದರ್ಶಿ ಜೇಮ್ಸ್ ಮಟ್ಟಿಸ್ ಅವರನ್ನು ಗುರಿಯಾಗಿರಿಸಿಕೊಂಡು ದಾಳಿ ನಡೆಸಲಾಗಿದೆ.
ದಾಳಿಯಿಂದ ಯಾವುದೇ ವಿಮಾನವಾಗಲಿ, ಪ್ರಾಣ ಹಾನಿಯಾಗಲಿ ಸಂಭವಿಸಿಲ್ಲ ಎಂದು ಅಫ್ಘಾನ್ ಆಂತರಿಕ ಸಚಿವಾಲಯದ ವಕ್ತಾರ ನಜೀಬ್ ದಾನಿಶ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ದಾಳಿ ನಾವೇ ನಡೆಸಿದ್ದು ಎಂದು ತಾಲಿಬಾನ್ ಮುಖಂಡ ಝಬಿಉಲ್ಲಾ ಮುಜೀದ್ ಟ್ವೀಟ್ ಮಾಡಿದ್ದಾನೆ.
ಜೇಮ್ಸ್ ಮಟ್ಟಿಸ್ ಮತ್ತು ನ್ಯಾಟೋ ಕಾರ್ಯದರ್ಶಿ ಜನರಲ್ ಜೆನ್ಸ್ ಸ್ಟೋಲನ್‌ಬರ್ಗ್ ಅವರು ಕಾಬೂಲ್‌ಗೆ ಬಂದಿಳಿಯುತ್ತಿದ್ದಂತೆ ದಾಳಿ ನಡೆಸಲಾಗಿದೆ. ದಾಳಿ ನಡೆದಿರುವುದರಿಂದ ಭದ್ರತಾ ಲೋಪ ಇರುವುದು ಎದ್ದು ತೋರಿದೆ.
6 ರಿಂದ 7 ಮೋರ್ಟಾರ್‌ಗಳು ವಿಮಾನ ನಿಲ್ದಾಣದ ಒಳಗೆ ಬಿದ್ದಿರುವುದಾಗಿ ವರದಿಯಾಗಿದ್ದು, ಎಲ್ಲಾ ವಿಮಾನ ಸಂಚಾರವನ್ನು ಸದ್ಯಕ್ಕೆ ಸ್ಥಗಿತಗೊಳಿಸಲಾಗಿದೆ.
ವಿಮಾನ ನಿಲ್ದಾಣವನ್ನು ಪೊಲೀಸರು, ನ್ಯಾಟೋ ಪಡೆಗಳು ಮತ್ತು ಅಫ್ಘಾನ್ ಭದ್ರತಾ ಪಡೆಗಳು ಸುತ್ತುವರಿದಿವೆ.