Advertisement

Taliban; ಅಫ್ಘಾನ್‌ ಮನೆಗಳಿಗಿನ್ನು ಕಿಟಕಿ ಇರಬಾರದು!

12:07 AM Dec 31, 2024 | Team Udayavani |

ಕಾಬೂಲ್‌: ಅಫ್ಘಾನಿಸ್ಥಾನದಲ್ಲಿ 2021ರಿಂದ ಮತ್ತೆ ಆಡಳಿತವನ್ನು ಕೈವಶ ಮಾಡಿಕೊಂಡಿರುವ ತಾಲಿಬಾನ್‌ ಉಗ್ರರ ಆಡಳಿತವು ಮಹಿಳೆಯರ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳುತ್ತ ಬಂದಿದೆ. ಅದಕ್ಕೆ ಹೊಸ ಸೇರ್ಪಡೆ ಎಂಬಂತೆ ಈಗ ದೇಶದಲ್ಲಿ ಹೊಸ ಮನೆ, ಕಟ್ಟಡಗಳನ್ನು ನಿರ್ಮಿಸುವುದಿದ್ದರೆ ಅವುಗಳಿಗೆ ಕಿಟಕಿಗಳನ್ನು ಅಳವಡಿಸಬಾರದು ಎಂದು ಫ‌ರ್ಮಾನು ಹೊರಡಿಸಿದೆ.

Advertisement

ಅಂಗಳ, ಅಡುಗೆಮನೆ, ನೆರೆಹೊರೆಯ ಪ್ರಾಂಗಣ ಮತ್ತು ಸಾಮಾನ್ಯವಾಗಿ ಮಹಿಳೆ ಯರ ಇರುವಿಕೆ ಕಾಣುವಂಥ ಸ್ಥಳಗಳಲ್ಲಿ ಅವರನ್ನು ಹೊರಗಿನವರು ನೋಡದಂತೆ ತಡೆಯಲು ಆದೇಶ ಹೊರಡಿಸಿರುವುದಾಗಿ ತಾಲಿಬಾನ್‌ ಸರಕಾರ ಹೇಳಿದೆ. ಕಿಟಕಿಗಳಿದ್ದರೆ ಅವುಗಳ ಮೂಲಕ ಬಾವಿಗಳಿಂದ ಮಹಿಳೆ ಯರು ನೀರೆತ್ತುವುದನ್ನೂ ನೋಡಬಹು ದಾಗಿದ್ದು, ಇದು ಅಶ್ಲೀಲ ಕೃತ್ಯಗಳಿಗೆ ಕಾರಣ ವಾಗಬಹುದು. ಹೀಗಾಗಿ ಹೊಸ ಮನೆಗಳಿಗೆ ಕಿಟಕಿ ಬೇಡ ಎಂದು ತಾಲಿಬಾನ್‌ ಸರಕಾರ ಸೂಚಿಸಿದೆ.

ಮಹಿಳೆಯರ ನೇಮಕಕ್ಕೆ ನಿಷೇಧ
ಅಫ್ಘಾನಿಸ್ಥಾನದಲ್ಲಿ ಕಾರ್ಯ ನಿರ್ವಹಿಸುವ ಎನ್‌ಜಿಒಗಳಲ್ಲಿ ಮಹಿಳೆಯರ ನೇಮಕವನ್ನೂ ನಿಷೇಧಿಸಿ ತಾಲಿಬಾನ್‌ ಸರಕಾರ ಆದೇಶ ಹೊರಡಿಸಿದೆ. ರಾಷ್ಟ್ರೀಯ ಮತ್ತು ವಿದೇಶಿ ಎನ್‌ಜಿಒಗಳಲ್ಲಿ ಕೆಲಸ ಮಾಡುವ ಮಹಿಳೆಯರು ಇಸ್ಲಾಂ ಸಂಪ್ರದಾಯದ ಪ್ರಕಾರ ಸರಿಯಾಗಿ ಹಿಜಾಬ್‌ ಧರಿಸುತ್ತಿಲ್ಲ. ಹೀಗಾಗಿ ಮಹಿಳೆಯರನ್ನು ಕೂಡಲೇ ಕೆಲಸದಿಂದ ವಜಾ ಮಾಡಬೇಕು. ಮುಂದೆ ಅವರನ್ನು ನೇಮಿಸಿಕೊಳ್ಳಬಾರದು. ಈ ಆದೇಶ ಪಾಲಿಸುವಲ್ಲಿ ಎನ್‌ಜಿಒಗಳು ವಿಫ‌ಲವಾದರೆ ಸಂಸ್ಥೆಗಳ ಪರವಾನಿಗೆಯನ್ನೇ ರದ್ದುಪಡಿಸುವುದಾಗಿ ತಾಲಿಬಾನ್‌ ಆಡಳಿತ ತಾಕೀತು ಮಾಡಿದೆ.

ಇರುವ ಕಿಟಕಿ ಮುಚ್ಚಿ
ಈಗಾಗಲೇ ನಿರ್ಮಿಸಲಾಗಿರುವ ಮನೆ, ಕಟ್ಟಡಗಳಲ್ಲಿ ಕಿಟಕಿಗಳಿದ್ದರೆ ಕೂಡಲೇ ಮುಚ್ಚಬೇಕು ಎಂದು ತಾಲಿಬಾನ್‌ ವಕ್ತಾರ ಝಬಿಯುಲ್ಲಾ ಮುಜಾಹಿದ್‌ ಹೇಳಿದ್ದಾನೆ. ಕಟ್ಟಡಗಳಲ್ಲಿ ಈಗಾಗಲೇ ಇರುವ ಕಿಟಕಿಗಳನ್ನು ಮುಚ್ಚಲಾಗಿದೆಯೇ ಅಥವಾ ಕಿಟಕಿಗಳು ಇಲ್ಲದೆ ಹೊಸ ಕಟ್ಟಡಗಳನ್ನು ನಿರ್ಮಿಸಲಾಗಿದೆಯೇ ಎಂಬ ಬಗ್ಗೆ ಪರಿಶೀಲನೆ ನಡೆಸುವ ಹೊಣೆಯನ್ನು ಸ್ಥಳೀಯ ಆಡಳಿತ ವ್ಯವಸ್ಥೆಗೆ ವಹಿಸಲು ತೀರ್ಮಾನಿಸಿದೆ.

ಮಹಿಳೆಯರು ಉನ್ನತ ಶಿಕ್ಷಣ ಪಡೆಯಬಾರದು ಎಂಬ ಬಗ್ಗೆಯೂ ತಾಲಿಬಾನ್‌ ಆಡಳಿತ ಈ ಹಿಂದೆ ಎಚ್ಚರಿಕೆ ನೀಡಿತ್ತು. ಕೇವಲ ಪ್ರಾಥಮಿಕ ತರಗತಿಯವರೆಗೆ ಮಾತ್ರ ಶಿಕ್ಷಣ ಸಾಕು ಎಂಬ ಧೋರಣೆಯನ್ನು ಅವರು ಹೊಂದಿದ್ದಾರೆ. ಇದರ ಜತೆಗೆ ಮಹಿಳೆಯರ ಉದ್ಯೋಗಕ್ಕೂ ಅಫ್ಘಾನ್‌ನಲ್ಲಿ ನಿಷೇಧ ಹೇರಲಾಗಿದೆ. ದೊಡ್ಡ ಧ್ವನಿಯಿಂದ ಪವಿತ್ರ ಕುರಾನ್‌ ಪಠಿಸುವುದನ್ನೂ ತಾಲಿಬಾನ್‌ ಆಡಳಿತ ನಿಷೇಧಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next