ಮುಂಬಯಿ/ಹೊಸದಿಲ್ಲಿ: ಮಹಾರಾಷ್ಟ್ರದ ರಾಯಗಢ ಜಿಲ್ಲೆಯಲ್ಲಿ 500 ಅಡಿ ಆಳದ ಕಮರಿಗೆ ಬಸ್ಸು ಉರುಳಿ 33 ಮಂದಿ ಅಸುನೀಗಿದ ಘಟನೆ ಶನಿವಾರ ನಡೆದಿದೆ. ಬಸ್ಸಿನಲ್ಲಿ 34 ಮಂದಿ ಪ್ರಯಾಣಿಸುತ್ತಿದ್ದರು, ಈ ಪೈಕಿ ಒಬ್ಬರು ಮಾತ್ರ ಹೊರಕ್ಕೆ ಜಿಗಿದು ಜೀವ ಉಳಿಸಿಕೊಂಡಿದ್ದಾರೆ. ಮೃತರು ದಾಪೋಲಿ ಡಾ| ಬಾಬಾ ಸಾಹೇಬ್ ಸಾವಂತ್ ಕೊಂಕಣ್ ಕೃಷಿ ವಿದ್ಯಾಪೀಠದ ಸಿಬಂದಿ. ಸತಾರಾ ಜಿಲ್ಲೆಯ ಮಹಾ ಬಲೇಶ್ವರಕ್ಕೆ ಪ್ರವಾಸ ತೆರಳುತ್ತಿದ್ದರು. ಅಂಬೆನಾಲಿ ಘಾಟಿ ಬಳಿ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಬಸ್ ಕಮರಿಗೆ ಬಿತ್ತು. ಬೆಳಗ್ಗೆ 10.30ಕ್ಕೆ ಸಂಭವಿಸಿದ ಈ ದುರಂತದಲ್ಲಿ 33 ಮಂದಿ ಸ್ಥಳದಲ್ಲಿಯೇ ಅಸು ನೀಗಿದ್ದಾರೆ. ಸುದ್ದಿ ತಿಳಿದ ಕೂಡಲೇ ಸ್ಥಳೀಯರು ಮತ್ತು ಪೊಲೀಸರು ಸ್ಥಳಕ್ಕೆ ಧಾವಿಸಿದರು. ಜತೆಗೆ ಪುಣೆಯಿಂದ ಎನ್‌ಡಿಆರ್‌ಎಫ್ ತುಕಡಿಯನ್ನೂ ಕರೆಸಿಕೊಳ್ಳಲಾಯಿತು.
ಪರಿಹಾರ ಪ್ರಕಟ: ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ ಮೃತರರ ಕುಟುಂಬಕ್ಕೆ ತಲಾ 4 ಲಕ್ಷ ರೂ. ಪರಿಹಾರ, ಗಾಯಾಳುಗಳ ಆಸ್ಪತ್ರೆಯ ವೈದ್ಯಕೀಯ ವೆಚ್ಚವನ್ನು ಸರಕಾರದ ವತಿಯಿಂದಲೇ ನೀಡಲಾಗುತ್ತದೆ ಎಂದಿದ್ದಾರೆ.
ಗಣ್ಯರ ಶೋಕ: ರಾಷ್ಟ್ರಪತಿ ಕೋವಿಂದ್, ಪ್ರಧಾನಿ ಮೋದಿ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸಂತಾಪ ಸೂಚಿಸಿದ್ದಾರೆ.
ಹಿಮಾಚಲ ದುರಂತ: 12 ಮಂದಿಗೆ ಗಾಯ
ಶಿಮ್ಲಾ: ಹಿಮಾಚಲದ ಕಾಂಗ್ರಾ ಜಿಲ್ಲೆಯಲ್ಲೂ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ ಸೇರಿದ ಬಸ್ 25 ಅಡಿ ಆಳದ ಕಮರಿಗೆ ಬಿದ್ದು 12 ಮಂದಿ ಗಾಯಗೊಂಡಿದ್ದಾರೆ.
ಅಂಬೆನಾಲಿ ಘಾಟಿ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಅವಘಡ
500 ಅಡಿ ಆಳದ ಕಮರಿಗೆ ಬಿದ್ದ ಬಸ್