ಮಧ್ಯಪ್ರದೇಶ: ಬೈಕ್ ನಲ್ಲಿ ಸಂಚರಿಸುವಾಗ ಹೆಲ್ಮೆಟ್ ಧರಿಸದಿದ್ದರೆ ದಂಡ ವಿಧಿಸುವುದು ಕೇಳಿದ್ದೇವೆ ಆದರೆ ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ ಹೆಲ್ಮೆಟ್ ಧರಿಸಿಲ್ಲ ಎಂದು ದಂಡ ವಿಧಿಸಿದ್ದು ಎಂದಾದರೂ ಕೇಳಿದ್ದೀರಾ…? ಮಧ್ಯಪ್ರದೇಶದ ಪನ್ನಾ ಜಿಲ್ಲೆಯ ಅಜಯ್ಗಢ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇಂತಹ ಒಂದು ವಿಚಿತ್ರ ಘಟನೆ ಬೆಳಕಿಗೆ ಬಂದಿದೆ.
ಇಲ್ಲಿನ ನಿವಾಸಿಯಾಗಿರುವ ಸುಶೀಲ್ ಕುಮಾರ್ ಶುಕ್ಲಾ ಅವರು ರಸ್ತೆಯಲ್ಲಿ ನಡೆದುಕೊಂಡು ಬರುತ್ತಿರಬೇಕಾದರೆ ಪೊಲೀಸ್ ಸಿಬ್ಬಂದಿಯೊರ್ವ ಹೆಲ್ಮೆಟ್ ಧರಿಸಿಲ್ಲ ಎಂದು 300 ರೂ. ದಂಡ ವಿಧಿಸಿ ಚಲನ್ ನೀಡಿದ್ದಾರೆ, ಪೊಲೀಸ್ ಸಿಬ್ಬಂದಿಯ ಕಾರ್ಯದಿಂದ ತಬ್ಬಿಬ್ಬಾದ ಸುಶೀಲ್ ಕುಮಾರ್ ನ್ಯಾಯಕ್ಕಾಗಿ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ಭೇಟಿ ನೀಡಿ ನಡೆದ ಘಟನೆ ಕುರಿತು ದೂರು ನೀಡಿದ್ದಾರೆ. ಜೊತೆಗೆ ಪೊಲೀಸ್ ಸಿಬ್ಬಂದಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಶುಕ್ಲಾ ಅವರು ಪೊಲೀಸರಿಗೆ ನೀಡಿದ ದೂರಿನಲ್ಲಿ, ‘ಅಜಯಗಢ ನಿವಾಸಿ ಸುಶೀಲ್ ಕುಮಾರ್ ಶುಕ್ಲಾ ಅವರು ಮಗಳ ಹುಟ್ಟುಹಬ್ಬಕ್ಕೆಂದು ಜನವರಿ 4 ರಂದು ಬಹದ್ದೂರ್ಗಂಜ್ ಗೆ ಬಂದಿದ್ದರು ಇದಾದ ಬಳಿಕ ರಾತ್ರಿ ಸುಮಾರು 7.30ಕ್ಕೆ ವಾಪಸ್ಸು ತಾನಂ ಊರಿಗೆ ಹೋಗಲು ನಡೆದುಕೊಂಡು ಹೋಗುವ ವೇಳೆ ಪೊಲೀಸ್ ಜೀಪಿನಲ್ಲಿ ಬಂದ ನಾಲ್ವರು ಸಿಬ್ಬಂದಿಗಳು ನನ್ನನ್ನು ಬಲವಂತವಾಗಿ ಜೀಪಿನಲ್ಲಿ ಕುಳ್ಳಿರಿಸಿ ಅಜಯ್ಗಢ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿ ಕೆಲ ಹೊತ್ತು ಇರಿಸಿದ್ದಾರೆ ಈ ವೇಳೆ ನಾನು ಮಗಳ ಹುಟ್ಟುಹಬ್ಬಕ್ಕೆ ಬಂದವನು ನನ್ನ ಊರಿಗೆ ಮರಳಬೇಕಿದೆ ಎಂದು ಹೇಳಿದರೂ ಕೇಳದೆ ರಸ್ತೆ ಬಂಡಿ ನಿಲ್ಲಿಸಿದ್ದ ಬೇರೊಬ್ಬರ ಬೈಕ್ ಸಂಖ್ಯೆ ಬರೆದು ಹೆಲ್ಮೆಟ್ ಧರಿಸದೆ ಬೈಕ್ ಸವರಿ ಮಾಡಿದ್ದಕ್ಕೆ ೩೦೦ ರೂಪಾಯಿ ದಂಡ ಕಟ್ಟಬೇಕು ಎಂದು ಚಲಂ ಬರೆದು ಕೊಟ್ಟಿದ್ದಾರೆ ಇದಕ್ಕೆ ನನ್ನ ಬಳಿ ಬೈಕ್ ಇಲ್ಲ ನಾನು ನಡೆದುಕೊಂಡು ಬಂದಿರುವುದಾಗಿ ಹೇಳಿದರೂ ಕೇಳದ ಸಿಬ್ಬಂದಿಗಳು ದಂಡ ಕಟ್ಟದಿದ್ದರೆ ಆರು ತಿಂಗಳು ಜೈಲು ವಾಸ ಅನುಭವಿಸಬೇಕಾಗುತ್ತದೆ ಎಂದು ಹೆದರಿಸಿ ಮುನ್ನೂರು ರೂಪಾಯಿ ದಂಡದ ಮೊತ್ತ ಪಡೆದುಕೊಂಡಿದ್ದಾರೆ ಎಂದು ದೂರು ನೀಡಿದ್ದಾರೆ.
ಪೊಲೀಸ್ ವರಿಷ್ಠಾಧಿಕಾರಿ ಹೇಳಿದ್ದೇನು?
ಪ್ರಕರಣಕ್ಕೆ ಸಂಬಂಧಿಸಿ ಮಾಹಿತಿ ನೀಡಿದ ಅಜಯಗಢ ಪೊಲೀಸ್ ಠಾಣೆಯ ಪ್ರಭಾರಿ ರವಿ ಜಾದೌನ್, ‘ಹೆಲ್ಮೆಟ್ ಧರಿಸದ ಪಾದಚಾರಿಗಳಿಗೆ ಚಲನ್ ಜಾರಿ ಮಾಡುವ ಸಾಧ್ಯತೆ ಕಡಿಮೆ ಆದರೂ ಶುಕ್ಲಾ ಅವರು ನೀಡಿದ ದೂರಿನ ಆಧಾರದ ಮೇಲೆ ತನಿಖೆ ನಡೆಸಿ ತಪ್ಪಾಗಿದ್ದರೆ ಸಿಬ್ಬಂದಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ಇದನ್ನೂ ಓದಿ: ಮುಧೋಳ: ಮದುವೆಯಾದ ಒಂದೇ ತಿಂಗಳಲ್ಲಿ ಪತ್ನಿ ಪರಾರಿ… ಮದುವೆ ಮಾಡಿಸಿದ ಬ್ರೋಕರ್ ಗಳೂ ನಾಪತ್ತೆ