Advertisement

ಏಳು ತಿಂಗಳಲ್ಲಿ 288 ಶಿಶು ಸಾವು

05:46 PM Aug 26, 2017 | Team Udayavani |

ಕಲಬುರಗಿ: ಜಿಲ್ಲಾಸ್ಪತ್ರೆ ಸೇರಿದಂತೆ ಜಿಲ್ಲೆಯ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ನವಜಾತ ಶಿಶು ಹಾಗೂ ತಾಯಿ ಮರಣ ಪ್ರಮಾಣ ಕಳೆದ ವರ್ಷಕ್ಕಿಂತ ಪ್ರಸಕ್ತ ಎರಡು ಪಟ್ಟು ಹೆಚ್ಚಿರುವ ಆತಂಕಕಾರಿ ಅಂಶ ಬಯಲಿಗೆ ಬಂದಿದೆ. ಪ್ರಸಕ್ತ ಜನವರಿಯಿಂದ ಜುಲೈ ಅಂತ್ಯದ ಅವಧಿಯಲ್ಲಿ ಜಿಲ್ಲಾಸ್ಪತ್ರೆಯೊಂದರಲ್ಲೇ 288ಕ್ಕೂ ಹೆಚ್ಚು ಶಿಶುಗಳು ಮೃತಪಟ್ಟಿವೆ. ಅಲ್ಲದೇ ಕಳೆದ ನಾಲ್ಕು (ಏಪ್ರಿಲ್‌, ಮೇ, ಜೂನ್‌, ಜುಲೈ) ತಿಂಗಳಲ್ಲೇ ಜಿಲ್ಲಾಸ್ಪತ್ರೆಯಲ್ಲಿನ 10 ಸೇರಿದಂತೆ ಜಿಲ್ಲೆಯಾದ್ಯಂತ ಒಟ್ಟು 44 ತಾಯಂದಿರು ಮೃತಪಟ್ಟಿದ್ದಾರೆ. ಪ್ರಸಕ್ತ ಜಿಲ್ಲಾಸ್ಪತ್ರೆಯ 288 ಶಿಶುಗಳು ಸೇರಿದಂತೆ ಜಿಲ್ಲೆಯಾದ್ಯಂತ ಒಟ್ಟಾರೆ 485 ಶಿಶುಗಳು ಮೃತಪಟ್ಟಿವೆ. ಕಳೆದ ವರ್ಷ 2016ರ ಜನವರಿಯಿಂದ ಜುಲೈ ಅಂತ್ಯದವರೆಗೆ ಜಿಲ್ಲಾಸ್ಪತ್ರೆಯಲ್ಲಿ 195 ಶಿಶುಗಳು ಸೇರಿ ಜಿಲ್ಲೆಯಾದ್ಯಂತ ಒಟ್ಟಾರೆ 447 ಶಿಶುಗಳು ಮೃತಪಟ್ಟಿದ್ದವು. ಪ್ರಸಕ್ತ ಜಿಲ್ಲಾಸ್ಪತ್ರೆಯಲ್ಲಿ ಕಳೆದ ಜನವರಿಯಲ್ಲಿ 41, ಫೆಬ್ರುವರಿ 31, ಮಾರ್ಚ್‌ 38, ಏಪ್ರಿಲ್‌ 43, ಮೇ 41, ಜೂನ್‌ 41, ಜುಲೈ ತಿಂಗಳಲ್ಲಿ 53 ಶಿಶುಗಳು ಮೃತಪಟ್ಟಿವೆ. ಆಗಸ್ಟ್‌ ತಿಂಗಳಿನಲ್ಲಿ ಅಂದಾಜು 50 ಹಿಡಿದರೆ 335ಕ್ಕೂ ಹೆಚ್ಚಳವಾಗುತ್ತದೆ. 2016ರ ಜನವರಿಯಿಂದ ಜುಲೈ ಅಂತ್ಯದವರೆಗೆ 195 ಮಕ್ಕಳು ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟಿದ್ದರೆ ಈಗ ಅದು 335ಕ್ಕೂ ಹೆಚ್ಚಳವಾಗಿದೆ. ಇದನ್ನು ಗಮನಿಸಿದರೆ ಸಾವಿನ ಪ್ರಮಾಣ ಎರಡು ಪಟ್ಟು ಹೆಚ್ಚಳವಾದಂತಾಗಿದೆ. ಅದೇ ರೀತಿ 2016ರ ಏಪ್ರಿಲ್‌, ಮೇ, ಜೂನ್‌ ಹಾಗೂ ಜುಲೈ ಈ ನಾಲ್ಕು ತಿಂಗಳಲ್ಲಿ 17 ತಾಯಂದಿರು ಮೃತಪಟ್ಟಿದ್ದರು.ಇದು ಮೂರು ಪಟ್ಟು ಜಾಸ್ತಿ ಎನ್ನುವಂತೆ ಪ್ರಸಕ್ತವಾಗಿ 44 ತಾಯಂದಿರು ಪ್ರಸೂತಿಯಾದ ನಂತರ ಮೃತಪಟ್ಟಿದ್ದಾರೆ. ಪ್ರಸೂತಿಯಾದ ನಂತರ ಲಕ್ಷಕ್ಕೆ 133 ತಾಯಂದಿರು ಸಾಯುವ ಪ್ರಮಾಣವಿದ್ದಲ್ಲಿ ಕಲಬುರಗಿಯಲ್ಲಿ ಲಕ್ಷಕ್ಕೆ 269 ಪ್ರಮಾಣವಾದಂತಾಗಿದೆ. ಅದೇ ರೀತಿ ಶಿಶುವಿನ ಪ್ರಮಾಣ ಕಲಬುರಗಿಯಲ್ಲಿ ಶೇ.
22ರಷ್ಟು ಪ್ರಮಾಣವಿದೆ. ಪ್ರಸಕ್ತ ಏಳು ತಿಂಗಳ ಅವಧಿಯಲ್ಲಿ ಜಿಲ್ಲಾಸ್ಪತ್ರೆಯಲ್ಲಿ 13,512 ಮಹಿಳೆಯರು ಸೇರಿದಂತೆ ಜಿಲ್ಲೆಯ ಒಟ್ಟಾರೆ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಒಟ್ಟು 27,430 ಮಹಿಳೆಯರ ಬಾಣಂತನವಾಗಿದೆ. ಕಾರಣ ಏನು: ಜಿಲ್ಲಾಸ್ಪತ್ರೆ ಸೇರಿದಂತೆ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ರಾತ್ರಿ ಸಮಯದಲ್ಲಿ ಬಾಣಂತನಕ್ಕೆ ಬರುವ ಮಹಿಳೆಯರಿಗೆ ಸಂಬಂಧಿಸಿದ ವೈದ್ಯರಿಲ್ಲದೇ ಬರಿ ಶುಶ್ರೂಷಕರೇ ಪ್ರಸೂತಿ ಕಾರ್ಯ ನಿರ್ವಹಿಸುತ್ತಿರುವುದು ಹಾಗೂ ಆಸ್ಪತ್ರೆ ನವಜಾತ ಶಿಶುಗಳ ತುರ್ತು ಚಿಕಿತ್ಸಾ ಘಟಕದಲ್ಲಿ ಬೆಡ್‌ ಮೇಲೆ ಮೂರ್‍ನಾಲ್ಕು ಮಕ್ಕಳನ್ನು ಮಲಗಿಸಿ ಚಿಕಿತ್ಸೆ ಕೊಡುತ್ತಿರುವುದರಿಂದ ಒಂದು ಮಗುವಿನ ಸೋಂಕು ಮತ್ತೂಂದು ಮಗುವಿಗೆ ತಗಲುತ್ತಿರುವುದೇ ಶಿಶುಗಳ ಸಾವಿಗೆ
ಪ್ರಮುಖ ಕಾರಣ ಎನ್ನಲಾಗುತ್ತಿದೆ.

Advertisement

„ಹಣಮಂತರಾವ ಭೈರಾಮಡಗಿ 

Advertisement

Udayavani is now on Telegram. Click here to join our channel and stay updated with the latest news.

Next