ಅಲ್ಪಮತದ ಸರಕಾರವನ್ನೇ 5 ವರ್ಷ ಪೂರೈಸಿದ್ದ ಕಾಂಗ್ರೆಸ್ 1996ರಲ್ಲಿ ನಿರೀಕ್ಷಿತ ಸ್ಥಾನಗಳನ್ನು ಗೆಲ್ಲಲಿಲ್ಲ. ಬಿಜೆಪಿ 161 ಸ್ಥಾನಗಳನ್ನು ಗೆಲ್ಲುವುದರ ಮೂಲಕ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿತು. ಕಾಂಗ್ರೆಸ್ ಕೇವಲ 140 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತು. ಅತಂತ್ರ ಫಲಿತಾಂಶದ ಹಿನ್ನೆಲೆಯಲ್ಲಿ ಅತೀ ಹೆಚ್ಚು ಸ್ಥಾನ ಗೆದ್ದ ಬಿಜೆಪಿ ಸರಕಾರ ರಚಿಸಿತು. ಅಟಲ್ ಬಿಹಾರಿ ವಾಜಪೇಯಿ ಪ್ರಧಾನಿಯಾದರು. ಆದರೆ ಬಹುಮತ ಸಾಬೀತು ಪಡಿಸುವ ಮುನ್ನವೇ ಅವರ ಸರಕಾರ ಪತನವಾಯಿತು. ವಾಜಪೇಯಿ 13 ದಿನವಷ್ಟೇ ಪ್ರಧಾನಿಯಾದರು.
2ನೇ ಅತೀದೊಡ್ಡ ಪಕ್ಷವಾಗಿದ್ದ ಕಾಂಗ್ರೆಸ್ ಸರಕಾರ ರಚಿ ಸಲು ಒಪ್ಪಲಿಲ್ಲ. ಹಾಗಾಗಿ ಜನತಾ ದಳದ ನೇತೃತ್ವದಲ್ಲಿ ಯುನೈಟೆಡ್ ಫ್ರಂಟ್ ಅಧಿಕಾರಕ್ಕೇರಿತು. ಕರ್ನಾಟಕದ ಎಚ್.ಡಿ.ದೇವೇಗೌಡ ಅವರು ಪ್ರಧಾನಿಯಾದರು. ಈ ಹುದ್ದೆಗೇರಿದ ದಕ್ಷಿಣ ಭಾರತದ 2ನೇ ರಾಜಕಾರಣಿಯಾದರು.
ಕಾಂಗ್ರೆಸ್ ಬಾಹ್ಯ ಬೆಂಬಲದೊಂದಿಗೆ ದೇವೇಗೌಡರು ಪ್ರಧಾನಿಯಾದರೂ ಸರಕಾರ ಬಹಳ ದಿನ ಬಾಳಿಕೆ ಬರಲಿಲ್ಲ. 1991 ಎ.21ರಂದು ರಾಜೀನಾಮೆ ನೀಡಿದರು. ಬಳಿಕ ಐ.ಕೆ.ಗುಜ್ರಾಲ್ ಮತ್ತೆ ಕಾಂಗ್ರೆಸ್ ಬೆಂಬಲದೊಂದಿಗೆ ಪ್ರಧಾನಿಯಾದರು. ಆದರೆ ಕಾಂಗ್ರೆಸ್ ಜತೆಗಿನ ಭಿನ್ನಾಭಿಪ್ರಾಯದಿಂದ ಅವರೂ ರಾಜೀನಾಮೆ ನೀಡಬೇಕಾಯಿತು. ಗುಜ್ರಾಲ್ 11 ತಿಂಗಳಷ್ಟೇ ಪ್ರಧಾನಿಯಾದರು.
ರಾಜಕೀಯ ಅಸ್ಥಿರತೆ ಯಿಂದಾಗಿ 11ನೇ ಲೋಕಸಭೆ ತನ್ನ ಅವಧಿಯನ್ನು ಪೂರ್ಣಗೊಳಿಸಲಿಲ್ಲ. ಪರಿಣಾಮ ದೇಶವು ಮಧ್ಯಾಂತರ ಚುನಾವಣೆ ಎದುರಿಸಬೇಕಾಯಿತು. 11ನೇ ಲೋಕಸಭೆ ಅವಧಿಯಲ್ಲಿ ಪಿ.ಎ.ಸಂಗ್ಮಾ ಸ್ಪೀಕರ್ ಆಗಿದ್ದರು, ಸೂರಜ್ ಭಾನ್ ಡೆಪ್ಯುಟಿ ಸ್ಪೀಕರ್ ಆಗಿದ್ದರು.