Advertisement
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸಾರಿಗೆ, ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಜಿಲ್ಲಾ ಖನಿಜ ಪ್ರತಿಷ್ಠಾನ ಗೌರ್ನಿಗ್ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು. ಜಿಲ್ಲಾ ಉಸ್ತುವಾರಿ ಸಚಿವ ಬಿ. ಶ್ರೀರಾಮುಲು ಅವರ ಪ್ರಸ್ತಾವಕ್ಕೆ ಸಭೆಯಲ್ಲಿ ಹಾಜರಿದ್ದ ಶಾಸಕರು ಹಾಗೂ ಸಂಸದರು ದನಿಗೂಡಿಸಿದರು.
Related Articles
Advertisement
ಜಿಲ್ಲಾ ಖನಿಜ ಪ್ರತಿಷ್ಠಾನ ಟ್ರಸ್ಟ್‌ನ ನಿಧಿಯನ್ನು ಹೊಸದಾಗಿ ರಚಿತವಾದ ವಿಜಯನಗರ ಜಿಲ್ಲೆಗೆ ಹಂಚಿಕೆ ಮಾಡುವುದಕ್ಕೆ ಸಂಬಂಧಿಸಿದಂತೆ ಸರ್ಕಾರ ಹೊರಡಿಸಿದ ವಿಶೇಷ ಪ್ರಕರಣದ ಆದೇಶ ವಾಪಸ್ ಪಡೆದುಕೊಳ್ಳಬೇಕು. ಈ ಕುರಿತು ಜಿಲ್ಲಾ ಖನಿಜ ಪ್ರತಿಷ್ಠಾನ ಗೌರ್ನಿಗ್ ಸಭೆಯಲ್ಲಿ ನಡುವಳಿ ಮಂಡಿಸಿ ಸರ್ಕಾರಕ್ಕೆ ಕಳುಹಿಸಿಕೊಡಬೇಕು ಎಂದು ಶಾಸಕರಾದ ಇ.ತುಕಾರಾಂ, ಬಿ.ನಾಗೇಂದ್ರ, ಸಂಸದ ಡಾ| ಸೈಯದ್ ನಾಸೀರ್ ಹುಸೇನ್ ಅವರು ಒತ್ತಾಯಿಸಿದರು.
ಈ ಆದೇಶದಿಂದ ನಮ್ಮ ಜಿಲ್ಲೆಗೆ ಅನ್ಯಾಯವಾಗಲಿದ್ದು, ಕೂಡಲೇ ಇದನ್ನು ವಾಪಸ್ ಪಡೆಯಬೇಕು ಎಂದು ಸಭೆಯ ನಡವಳಿ ಕಳುಹಿಸಿಕೊಡಿ. ಇಲ್ಲದಿದ್ದಲ್ಲಿ ಸದನದಲ್ಲಿ ಈ ವಿಷಯ ಪ್ರಸ್ತಾಪಿಸಲಾಗುವುದು ಎಂದು ಶಾಸಕ ತುಕಾರಾಂ ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ರಾಮುಲು, ತಮ್ಮ ಭಾವನೆಗಳು ನಮಗೆ ಅರ್ಥವಾಗುತ್ತವೆ. ಅದನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದು ಸರಿಪಡಿಸಲಾಗುವುದು ಎಂದರು.
ಡಿಸಿ ಪವನಕುಮಾರ ಮಾಲಪಾಟಿ ಮಾತನಾಡಿ, ಡಿಎಂಎಫ್ ನಿಧಿಯಡಿ ಸಂಗ್ರಹವಾಗಿರುವ ಮೊತ್ತದಲ್ಲಿ ಶೇ. 10ರಷ್ಟು ದತ್ತಿ ಹಾಗೂ ಶೇ. 5ರಷ್ಟು ಆಡಳಿತಾತ್ಮಕ ವೆಚ್ಚ ಹೊರತುಪಡಿಸಿ ಉಳಿದ ಶೇ. 85ರಷ್ಟು ಮೊತ್ತದಲ್ಲಿ ಹೆಚ್ಚಿನ ಆದ್ಯತಾ ವಲಯಗಳಿಗೆ ಶೇ.60ರಷ್ಟು ಹಾಗೂ ಇತರೆ ಆದ್ಯತಾ ವಲಯಗಳಿಗೆ ಶೇ.40ರಷ್ಟು ಅನುದಾನ ಹಂಚಿಕೆ ಮಾಡಲಾಗುವುದು ಎಂದರು.
2016-17ರಿಂದ 2021-22ರವರೆಗೆ 6 ಹಂತದ ಕ್ರಿಯಾಯೋಜನೆಗಳು ಮಂಜೂರಾಗಿದ್ದು, ಕ್ರಿಯಾಯೋಜನೆಗಾಗಿ ಅಂದಾಜಿಸಿದ ಮೊತ್ತ ರೂ.2677.95 ಕೋಟಿ. ದತ್ತಿ ನಿಧಿಗಾಗಿ ರೂ.320.04 ಕೋಟಿ, ಆಡಳಿತಾತ್ಮಕ ವೆಚ್ಚಕ್ಕಾಗಿ 133.90 ಕೋಟಿ ರೂ. 2533 ಕಾಮಗಾರಿಗಳು ಕೈಗೆತ್ತಿಕೊಳ್ಳಲಾಗಿದ್ದು, ಅನುಮೋದಿತ ಕ್ರಿಯಾಯೋಜನೆಗಳ ಕಾಮಗಾರಿಗಳ ಮೊತ್ತ ರೂ.2222.15 ಕೋಟಿಗಳಾಗಿದೆ ಎಂದರು.
ಇಲ್ಲಿಯವರೆಗೆ ರೂ.1973.14 ಕೋಟಿ ಸಂಗ್ರಹವಾಗಿದ್ದು (ಬಳ್ಳಾರಿ ಜಿಲ್ಲೆ: 1759.26 ಕೋಟಿ ರೂ., ವಿಜಯನಗರ ಜಿಲ್ಲೆ 214.01 ಕೋಟಿ ರೂ.) 796.61 ಕೋಟಿ ರೂ. ಬಿಡುಗಡೆ ಮಾಡಲಾಗಿದೆ ಎಂದು ಅವರು ಸಭೆಗೆ ವಿವರಿಸಿದರು. ಅವಿಭಜಿತ ಬಳ್ಳಾರಿ ಜಿಲ್ಲೆಯಲ್ಲಿ 796 ಕಾಮಗಾರಿಗಳು ಮುಕ್ತಾಯಗೊಂಡಿದ್ದು, 640 ಪ್ರಗತಿ ಹಂತದಲ್ಲಿದೆ. 157 ಕಾಮಗಾರಿಗಳು ಆಡಳಿತಾತ್ಮಕ ಮಂಜೂರಾಗಿವೆ. 157 ಕಾಮಗಾರಿಗಳು ಟೆಂಡರ್ ಹಂತದಲ್ಲಿವೆ.
362 ಸಂಪೂರ್ಣವಾಗಿ ರದ್ದುಪಡಿಸಿ ಪರಿಷ್ಕೃತ ಕಾಮಗಾರಿಗಳಿಗೆ ಅನುಮೋದನೆ ನೀಡಲಾಗಿದೆ ಎಂದರು. ಜಿಲ್ಲಾ ಖನಿಜ ನಿಧಿಯ ಅನುದಾನ ಸಮರ್ಪಕ ಬಳಕೆಗೆ ಸಂಬಂಧಿಸಿದಂತೆ ಹಾಗೂ ಇನ್ನಿತರ ಅಭಿವೃದ್ಧಿ ಕಾರ್ಯಗಳಿಗೆ ಸಂಬಂಧಿಸಿದಂತೆ ಸಭೆಯಲ್ಲಿ ಚರ್ಚೆ ನಡೆಯಿತು. ಸಭೆಯಲ್ಲಿ ಸಿರುಗುಪ್ಪ ಶಾಸಕ ಎಂ.ಎಸ್. ಸೋಮಲಿಂಗಪ್ಪ, ಜಿಪಂ ಸಿಇಒ ಜೆ.ಲಿಂಗಮೂರ್ತಿ, ಎಡಿಸಿ ಮಂಜುನಾಥ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.