ಮೈಸೂರು: ಎಸ್‌ಎಸ್‌ಎಲ್‌ಸಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ಪತ್ರಕರ್ತರ ಮಕ್ಕಳಿಗೆ ಜಿಲ್ಲಾ ಪತ್ರಕರ್ತರ ಸಂಘದಿಂದ ಶನಿವಾರ ಪ್ರತಿಭಾ ಪುರಸ್ಕಾರ ನೀಡಿ ಅಭಿನಂದಿಸಲಾಯಿತು.
ನಗರದ ಪತ್ರಕರ್ತರ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ದ್ವಿತೀಯ ಪಿಯುಸಿಯಲ್ಲಿ ಹೆಚ್ಚು ಅಂಕಗಳಿಸಿದ ನಾಲ್ವರಿಗೆ ತಲಾ 15 ಸಾವಿರ ರೂ. ನಗದು ಹಾಗೂ ಎಸ್‌ಎಸ್‌ಎಲ್‌ಸಿಯಲ್ಲಿ ಅತಿ ಹೆಚ್ಚು ಅಂಕಗಳಿಸಿರುವ 9 ವಿದ್ಯಾರ್ಥಿಗಳಿಗೆ ತಲಾ 10 ಸಾವಿರ ರೂ. ನಗದು ಹಾಗೂ ಪ್ರಮಾಣ ಪತ್ರವನ್ನು ಶಾಸಕ ಎಂ.ಕೆ. ಸೋಮಶೇಖರ್ ವಿತರಿಸಿದರು.
ಶಾಸಕ ಎಂ.ಕೆ.ಸೋಮಶೇಖರ್ ಮಾತನಾಡಿ, ಇದು ಅತ್ಯಂತ ವಿಶೇಷ ಕಾರ್ಯಕ್ರಮವಾಗಿದ್ದು, ಪತ್ರಕರ್ತರ ಸಂಘ ತನ್ನ ಆದಾಯದಲ್ಲಿ ಶೇ.25ನ್ನು ಪತ್ರಕರ್ತರ ಮಕ್ಕಳ ಶಿಕ್ಷಣ ನಿಧಿಗಾಗಿ ಮೀಸಲಿರಿಸಿ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಆರ್ಥಿಕ ನೆರವು ನೀಡುತ್ತಿರುವುದು ರಾಜ್ಯಕ್ಕೆ ಮಾದರಿಯಾಗಿದೆ ಎಂದರು.
ಮಳೆ, ಗಾಳಿಯನ್ನು ಲೆಕ್ಕಿಸದೇ ಸದಾ ಒತ್ತಡದಲ್ಲಿ ಕೆಲಸ ಮಾಡುವ ಪತ್ರಕರ್ತರು ಬಹುತೇಕ ಸಂದರ್ಭದಲ್ಲಿ ತಮ್ಮ ಕುಟುಂಬಗಳಿಗೆ ಸಮಯ ನೀಡಲು ಸಾಧ್ಯವಾಗುವುದಿಲ್ಲ. ಇಂತಹ ಸಮಯದಲ್ಲಿ ಸಂಘದಿಂದ ಪತ್ರಕರ್ತರ ಕ್ಷೇಮಾಭಿವೃದ್ಧಿ ಕಾರ್ಯಗಳನ್ನು ನಡೆಸುತ್ತಿರುವುದು ಶ್ಲಾಘನೀಯ. ಪತ್ರಕರ್ತರ ಸಂಘದಿಂದ ಆರಂಭಿಸಲಾಗುತ್ತಿರುವ ಸಹಕಾರ ಸಂಘದ ಕಟ್ಟಡಕ್ಕೆ ಶಾಸಕರ ಕಲ್ಯಾಣ ನಿಧಿಯಿಂದ 10 ಲಕ್ಷ ರೂ.ಗಳನ್ನು ನೀಡುವುದಾಗಿ ಘೋಷಿಸಿದರು.
ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ದೀಪಕ್ ಮಾತನಾಡಿ, ಸಂಘ ಸದೃಢವಾದಾಗ ಮಾತ್ರ ಸದಸ್ಯರ ಆರ್ಥಿಕ ಸ್ಥಿತಿ ಸರಿಪಡಿಸಲು ಸಾಧ್ಯ. ಸಂಘಕ್ಕೆ ತಾವು ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಾಗ ಸಂಘದ ಠೇವಣಿ 5 ಲಕ್ಷ ರೂ. ಇದೀಗ 20 ಲಕ್ಷ ರೂ.ಗಳನ್ನು ಕ್ರೋಡಿಕರಿಸಲಾಗಿದ್ದು, ಆ ಮೂಲಕ ಸಂಘವು ಆರ್ಥಿಕವಾಗಿ ಸದೃಢವಾಗಿದೆ.
ಶೀಘ್ರದಲ್ಲೇ ಸಹಕಾರ ಸಂಘವು ಅಸ್ತಿತ್ವಕ್ಕೆ ಬರಲಿದ್ದು, ಈಗಾಗಲೇ 6.75 ಲಕ್ಷ ರೂ. ಷೇರು ಸಂಗ್ರಹವಾಗಿದೆ ಎಂದು ತಿಳಿಸಿದರು. ಮೇಯರ್ ಎಂ.ಜೆ.ರವಿಕುಮಾರ್, ಸಂಘದ ಪ್ರಧಾನ ಕಾರ್ಯದರ್ಶಿ ಕೆ.ಜೆ.ಲೋಕೇಶ್ ಬಾಬು, ಉಪಾಧ್ಯಕ್ಷ ಎಸ್.ಟಿ.ರವಿಕುಮಾರ್, ಹಿರಿಯ ಪತ್ರಕರ್ತ ಸಿ.ಕೆ.ಮಹೇಂದ್ರ ಇನ್ನಿತರರು ಹಾಜರಿದ್ದರು.