ಲಕ್ನೋ: ಉತ್ತರ ಪ್ರದೇಶದ ಜಿಲ್ಲಾ ಪಂಚಾಯಿತಿಗಳ ಅಧ್ಯಕ್ಷ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಆಡಳಿತ ಪಕ್ಷ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಗೆದ್ದಿದ್ದಾರೆ.
ಇದುವರೆಗೆ 75 ಜಿ.ಪಂ.ಗಳ ಅಧ್ಯಕ್ಷ ಸ್ಥಾನಗಳ ಪೈಕಿ 67ರಲ್ಲಿ ಬಿಜೆಪಿ ಬೆಂಬಲಿತರು ಗೆದ್ದು, ಅಧಿಕಾರ ಪಡೆದುಕೊಂಡಿದ್ದಾರೆ. ಉ.ಪ್ರ.ಬಿಜೆಪಿ ಘಟಕದ ಅಧ್ಯಕ್ಷ ಸ್ವತಂತ್ರ ದೇವ್ ಸಿಂಗ್ ಶನಿವಾರ ಲಕ್ನೋದಲ್ಲಿ ಮಾತನಾಡಿ “ಬಿಜೆಪಿ ಮತ್ತು ಅದರ ಮಿತ್ರ ಪಕ್ಷಗಳು 75 ಜಿ.ಪಂಗಳ ಪೈಕಿ 67ರಲ್ಲಿ ನಮ್ಮ ಬೆಂಬಲಿಗರು ಜಯ ಸಾಧಿಸಿದ್ದಾರೆ’ ಎಂದು ಹೇಳಿದ್ದಾರೆ.
ಅಯೋಧ್ಯೆ, ಮಥುರಾಗಳಲ್ಲಿ ಕ್ರಮವಾಗಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಾದ ರೋಲಿ ಸಿಂಗ್ ಮತ್ತು ಕಿಸಾನ್ ಸಿಂಗ್ ಜಯ ಗಳಿಸಿದ್ದಾರೆ. ಜೂ.29ರಂದು ವಾರಣಾಸಿ ಮತ್ತು ಗೋರಖ್‌ಪುರ ಸೇರಿದಂತೆ 21 ಜಿ.ಪಂ.ಗಳ ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಬೆಂಬಲಿತರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ನಾಲ್ಕು ಹಂತಗಳಲ್ಲಿ ನಡೆದಿದ್ದ ಪಂಚಾಯಿತಿ ಚುನಾವಣೆ ಕಳೆದ ತಿಂಗಳು ಮುಕ್ತಾಯವಾಗಿತ್ತು.
ಇದನ್ನೂ ಓದಿ :ಕಾಲ್ನಡಿಗೆಯಲ್ಲೇ ಸುತ್ತಾಡಿ ಕೋವಿಡ್ ಕುರಿತು ಅರಿವು ಮೂಡಿಸಿದ ಭೂತಾನ್ ಮಹಾರಾಜ