Advertisement

ಆಪತ್ಕಾಲದಲ್ಲಿ ಸಿಂಗ್‌ ಈಸ್‌ಕಿಂಗ್‌

04:00 AM Jun 17, 2017 | |

ಯುವ ಬ್ಯಾಟ್ಸ್‌ಮನ್‌ ಆಗಿ 18ರ ಹರೆಯದಲ್ಲಿಯೇ ಭಾರತ ಕ್ರಿಕೆಟ್‌ ತಂಡಕ್ಕೆ ಕಾಲಿಟ್ಟ ಯುವರಾಜ್‌ ಸಿಂಗ್‌ ಇಂದಿಗೂ ಭಾರತ ತಂಡದ ಆಪತ್ಬಾಂಧವ ಅನ್ನೋದರಲ್ಲಿ ನೋ ಡೌಟ್‌. ಇದನ್ನು ಸದ್ಯ ಇಂಗ್ಲೆಂಡ್‌ನ‌ಲ್ಲಿ ನಡೆಯುತ್ತಿರುವ ಐಸಿಸಿ ಚಾಂಪಿಯನ್ಸ್‌ ಟ್ರೋಫಿಯಲ್ಲಿಯೂ ಸಾಬೀತು ಪಡಿಸಿದ್ದಾರೆ. ಯುವಿ ಕ್ರೀಸ್‌ನಲ್ಲಿರುವಷ್ಟು ಹೊತ್ತು ಎಂತಹ ಪಂದ್ಯವಾದರೂ ಎದುರಾಳಿಗಳಿಗೆ ಗೆಲುವಿನ ಭರವಸೆ ಇರುವುದಿಲ್ಲ. ಅದೇ ರೀತಿ ಭಾರತ ತಂಡಕ್ಕೆ ಯುವಿ ಕ್ರೀಸ್‌ನಲ್ಲಿದ್ದಾರೆ ಅಂದರೆ ಗೆಲುವಿಗಾಗಿ ಎಸೆತಕ್ಕೂ ರನ್‌ಗೂ ಎಷ್ಟೇ ಅಂತರವಿದ್ದರೂ ಯಾವುದೇ ಭಯವಿರುವುದಿಲ್ಲ. ಅದೇ ಯುವಿ ಪವರ್‌.
ಕಳೆದ 17 ವರ್ಷದಲ್ಲಿ ಏಕದಿನ ಮತ್ತು ಟಿ20 ಮಾದರಿಯಲ್ಲಿ ಯುವಿ ಭರ್ಜರಿಯಾಗಿ ಅಬ್ಬರಿಸಿದ್ದಾರೆ. ಆದರೆ ಟೆಸ್ಟ್‌ನಲ್ಲಿ ಮಾತ್ರ ಸರಿಯಾಗಿ ನೆಲೆಕಂಡುಕೊಳ್ಳಲು ಸಾಧ್ಯವಾಗಿಲ್ಲ. ಹಲವು ಏಳು ಬೀಳುಗಳ ನಡುವೆ 300ಕ್ಕೂ ಅಧಿಕ ಏಕದಿನ ಪಂದ್ಯವನ್ನು ಆಡಿದ ಖ್ಯಾತಿಯನ್ನು ಯುವಿ ಹೊಂದಿದ್ದಾರೆ. ಭಾರತದ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನಕ್ಕೆ ಹಲವು ಪಂದ್ಯಗಳಲ್ಲಿ ನೀರು ಕುಡಿಸಿದ್ದಾರೆ. ದಿಗ್ಗಜರು ಎಂದೆ ಎನಿಸಿಕೊಂಡ ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ, ಇಂಗ್ಲೆಂಡ್‌, ಪಾಕಿಸ್ತಾನ, ವೆಸ್ಟ್‌ ಇಂಡೀಸ್‌, ನ್ಯೂಜಿಲೆಂಡ್‌…ಬೌಲರ್‌ಗಳನ್ನು ಚೆಂಡಾಡಿದ್ದಾರೆ. ಭಾರತ 2011ರ ಏಕದಿನ ಮತ್ತು 2007ರ ಟಿ20 ವಿಶ್ವಕಪ್‌ನಲ್ಲಿ ಜಯಸಾಧಿಸಿದೆ. ಅದರಲ್ಲಿ ಯುವಿ ಕೊಡುಗೆಯನ್ನು ಮರೆಯಲಾಗದು. ಕ್ಯಾನ್ಸರ್‌ ನಂತಹ ಮಾರಕ ರೋಗದ ವಿರುದ್ಧ ಹೋರಾಡಿ ಗೆದ್ದು, ಮತ್ತೆ ಭಾರತ ತಂಡದಲ್ಲಿ ಮಿಂಚುತ್ತಿರುವುದು ಪ್ರತಿಯೊಬ್ಬರಿಗೂ ಸ್ಫೂರ್ತಿಯಾಗಿದೆ. ಈ ನಿಟ್ಟಿನಲ್ಲಿ ಭಾರತ ತಂಡಕ್ಕೆ ಯುವಿ ಅಕ್ಷರಶಃ ಆಪತಾºಂಧವರಾಗಿದ್ದಾರೆ.

Advertisement

 ಪಾಕ್‌ ಬೌಲರ್‌ಗಳಿಗೆ ದುಃಸ್ವಪ್ನ
ಇಮ್ರಾನ್‌ ಖಾನ್‌, ವಾಸಿಂ ಅಕ್ರಮ್‌ ಕಾಲದಿಂದಲೂ ಪಾಕಿಸ್ತಾನ ತಂಡ ವಿಶ್ವ ಶ್ರೇಷ್ಠ ಬೌಲಿಂಗ್‌ ಪಡೆಯನ್ನು ಹೊಂದಿದೆ. ಇಂದಿಗೂ ಕೂಡ ಪಾಕಿಸ್ತಾನದಲ್ಲಿ ಅದ್ಭುತ ವೇಗಿಗಳಿದ್ದಾರೆ. ಬೌಲರ್‌ಗಳೇ ಪಾಕ್‌ ತಂಡದ ಶಕ್ತಿ. ಎದುರಾಳಿಗಳನ್ನು ತಮ್ಮ ವೇಗದಿಂದಲೇ ನಿಯಂತ್ರಿಸುವ ಪವರ್‌ ಅವರಲ್ಲಿದೆ. ಆದರೆ ಪಾಕ್‌ನ ಶ್ರೇಷ್ಠ ಬೌಲಿಂಗ್‌ ಪಡೆಯನ್ನು ಚೆಂಡಾಡಿದ ಕೆಲವೇ ಕೆಲವು ಬ್ಯಾಟ್ಸ್‌ಮನ್‌ಗಳಲ್ಲಿ ಯುವಿ ಕೂಡ ಒಬ್ಬರು. ವಿಶ್ವಕಪ್‌, ಟಿ20 ವಿಶ್ವಕಪ್‌, ಚಾಂಪಿಯನ್ಸ್‌ ಟ್ರೋಫಿ, ಎರಡೂ ರಾಷ್ಟ್ರಗಳ ದ್ವಿಪಕ್ಷೀಯ ಸರಣಿ…ಹೀಗೆ ಭಾರತ ಮತ್ತು ಪಾಕ್‌ ಮುಖಾಮುಖೀಯಲ್ಲಿ ಯುವಿ ಪಾಕ್‌ ಬೌಲರ್‌ಗಳಿಗೆ ದುಃಸ್ವಪ್ನವಾಗಿ ಕಾಡಿದ್ದಾರೆ. 2012ರಲ್ಲಿ ಕ್ಯಾನ್ಸರ್‌ನಿಂದ ಚೇತರಿಸಿಕೊಂಡು ಮತ್ತೆ ಅಂಕಣಕ್ಕೆ ಬಂದು ಪಾಕ್‌ ವಿರುದ್ಧ 36 ಎಸೆತದಲ್ಲಿ 72 ರನ್‌ ಬಾರಿಸಿರುವ ಪಂದ್ಯವನ್ನು ಎಂದಿಗೂ ಮರೆಯಲಾಗದು. ಕೆಲವು ಪಂದ್ಯಗಳಲ್ಲಿ ಬ್ಯಾಟಿಂಗ್‌ನಲ್ಲಿ ವೈಫ‌ಲ್ಯ ಕಂಡುಬಂದರೂ ಬೌಲಿಂಗ್‌ ಮತ್ತು ಕ್ಷೇತ್ರ ರಕ್ಷಣೆಯಲ್ಲಿ ಕೈಚಳಕ ತೋರಿಸಿದ್ದಾರೆ. ಹೀಗಾಗಿ ಭಾರತೀಯ ಕ್ರಿಕೆಟ್‌ ಅಭಿಮಾನಿಗಳ ಪಾಲಿಗೆ ಯುವಿ ಎಂದಿಗೂ ಹೀರೋ ಆಗಿಯೇ ಉಳಿಯಲಿದ್ದಾರೆ.

 ಮಹತ್ವದ ಪಂದ್ಯದಲ್ಲಿಯೇ ಸ್ಫೋಟಕ ಆಟ 
ಯುವರಾಜ್‌ ಸಿಂಗ್‌ ಅವರ ಮತ್ತೂಂದು ವೈಶಿಷ್ಟé ಅಂದರೆ ಅದು ಭಾರತಕ್ಕೆ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿಯೇ ಅಬ್ಬರಿಸುವ ಗುಣ. ಎಂ.ಎಸ್‌.ಧೋನಿಯಂತೆಯೇ ಯುವರಾಜ್‌ ಸಿಂಗ್‌ ಕೂಡ ಒಬ್ಬ ಗ್ರೇಟ್‌ ಫಿನಿಷರ್‌ ಅನ್ನುವುದನ್ನು ನಾವು ನೋಡಿದ್ದೇವೆ. ಮೊಹಮ್ಮದ್‌ ಕೈಫ್, ಧೋನಿ, ಕೊಹ್ಲಿ, ದ್ರಾವಿಡ್‌….ಹೀಗೆ ಹಲವು ಜತೆಗಾರರ ಜತೆ ಸೇರಿ ಭರ್ಜರಿ ಇನಿಂಗ್ಸ್‌ ನಿರ್ಮಿಸಿ ಭಾರತಕ್ಕೆ ಗೆಲುವು ತಂದಿದ್ದಾರೆ. 2007ರ ಟಿ20 ವಿಶ್ವಕಪ್‌ನಲ್ಲಿ ಒಂದೇ ಓವರ್‌ನಲ್ಲಿ 6 ಸಿಕ್ಸರ್‌ ಬಾರಿಸಿ ಇತಿಹಾಸ ನಿರ್ಮಿಸಿದ್ದಾರೆ. 12 ಎಸೆತದಲ್ಲಿಯೇ ಅರ್ಧಶತಕ ಸಿಡಿಸಿ ಸ್ಫೋಟಕ ಅರ್ಧಶತಕದ ದಾಖಲೆಯನ್ನು ಹೊಂದಿದ್ದಾರೆ.

 ಏಕದಿನದಲ್ಲಿ 300 ಪಂದ್ಯ ಆಡಿದ ಖ್ಯಾತಿ
2000ದಲ್ಲಿ ಕೀನ್ಯಾ ವಿರುದ್ಧ ಏಕದಿನ ಪಂದ್ಯಕ್ಕೆ ಪದಾರ್ಪಣೆ ಮಾಡಿರುವ ಯುವರಾಜ್‌ ಇದುವರೆಗೂ ತಿರುಗಿ ನೋಡಿರುವುದೇ ಇಲ್ಲ. ಕೆಲವು ಬಾರಿ ತಾತ್ಕಾಲಿಕವಾಗಿ ತಂಡದಲ್ಲಿ ಸ್ಥಾನ ಕಳೆದುಕೊಂಡರೂ ಮತ್ತೆ ದೇಶಿ ಟೂರ್ನಿಗಳಲ್ಲಿ ಭರ್ಜರಿ ಬ್ಯಾಟಿಂಗ್‌ ಪ್ರದರ್ಶಿಸಿ ರಾಷ್ಟ್ರೀಯ ತಂಡಕ್ಕೆ ವಾಪಸ್‌ ಆಗಿದ್ದಾರೆ. ಹೀಗಾಗಿಯೇ 17 ವರ್ಷದ ಅವಧಿಯಲ್ಲಿ 300 ಏಕದಿನ ಪಂದ್ಯವನ್ನು ಆಡಿದ ಸಾಧನೆ ಮಾಡಿದ್ದಾರೆ. ಭಾರತದ ಪರ ಇಲ್ಲಿಯವರೆಗೂ ದಿಗ್ಗಜರಾದ ಸಚಿನ್‌ ತೆಂಡುಲ್ಕರ್‌ 463, ರಾಹುಲ್‌ ದ್ರಾವಿಡ್‌ 340, ಮೊಹಮ್ಮದ್‌ ಅಜರುದ್ದೀನ್‌ 334, ಸೌರವ್‌ ಗಂಗೂಲಿ 308 ಪಂದ್ಯಗಳನ್ನು ಆಡಿದ ಇತಿಹಾಸ ಹೊಂದಿದ್ದಾರೆ. ಇದೀಗ ಈ ಸಾಲಿಗೆ ಯುವಿ ಕೂಡ ಸೇರ್ಪಡೆಯಾಗಿದ್ದಾರೆ. ವಿಶ್ವ ಮಟ್ಟದಲ್ಲಿ ಈ ಸಾಧನೆ ಮಾಡಿದ 19ನೇ ಆಟಗಾರ ಎಂಬ ಪ್ರಶಂಸೆ ಯುವಿದು.

ಆಕರ್ಷಕ ವ್ಯಕ್ತಿತ್ವ
ಸ್ಫೋಟಕ ಬ್ಯಾಟ್ಸ್‌ಮನ್‌ ಯುವರಾಜ್‌ ಸಿಂಗ್‌ ಅವರದು ಆಕರ್ಷಕ ವ್ಯಕ್ತಿತ್ವ. ಬ್ಯಾಟಿಂಗ್‌, ಬೌಲಿಂಗ್‌, ಕ್ಷೇತ್ರ ರಕ್ಷಣೆಯಲ್ಲಿಯೂ ಒಂದು ಸ್ಟೈಲ್‌ ಇದೆ. ಆ ಸ್ಟೈಲೀಶ್‌ ವ್ಯಕ್ತಿತ್ವವನ್ನು ಇಂದಿಗೂ ಕಾಯ್ದುಕೊಂಡಿದ್ದಾರೆ. ಹೀಗಾಗಿ ಯುವತಿಯರು ಕೂಡ ಯುವಿ ವ್ಯಕ್ತಿತ್ವಕ್ಕೆ ಮಾರುಹೋದ ಘಟನೆಗಳು ನಡೆದಿವೆ. ಮದುವೆಗೂ ಮುನ್ನ ಬಾಲಿವುಡ್‌ ನಟಿಯರಾದ ದೀಪಿಕಾ ಪಡುಕೋಣೆ, ಪ್ರೀತಿ ಜಿಂಟಾ…ಹೀಗೆ ಹಲವು ನಟಿಯರ ಜತೆ ಯುವಿಯ ಹೆಸರು ತಳುಕು ಹಾಕಿಕೊಂಡಿತ್ತು. ಅಂತಿಮವಾಗಿ ಮಾಡೆಲ್‌ ಕಮ್‌ ನಟಿಯಾದ ಹೇಜಲ್‌ ಕೀಚ್‌ ಅವರನ್ನು ಪ್ರೀತಿಸಿ ವಿವಾಹವಾಗಿದ್ದಾರೆ.

Advertisement

ಕ್ಯಾನ್ಸರ್‌ ಗೆದ್ದ ವೀರ
2011ರಲ್ಲಿ ಯುವಿ ಶ್ವಾಸಕೋಶದ ಕ್ಯಾನ್ಸರ್‌ಗೆ ತುತ್ತಾದಾಗ ಕ್ರಿಕೆಟ್‌ನಲ್ಲಿ ಯುವಿ ಭವಿಷ್ಯ ಮುಗಿಯಿತು ಎಂದೇ ಅಂದುಕೊಳ್ಳಲಾಗಿತ್ತು. ಆದರೆ ಆದದ್ದೇ ಬೇರೆ. ಅಂತಹ ಮಾರಕ ರೋಗವನ್ನು ಗೆದ್ದು ಬಂದ ವೀರ ಯುವಿ ಮತ್ತೆ ಕ್ರಿಕೆಟ್‌ಗೆ ಧುಮಿಕಿದರು. ಮೊದಲಿನಂತೆಯೇ ಸ್ಫೋಟಕ ಬ್ಯಾಟಿಂಗ್‌ ಪ್ರದರ್ಶಿಸುವ ಮೂಲಕ ಅಭಿಮಾನಿಗಳ ಹೃದಯದಲ್ಲಿ ಭದ್ರವಾಗಿ ಉಳಿದರು. ಅವರ ಹೋರಾಟ ಎಂತಹವರಿಗೂ ಸ್ಫೂರ್ತಿಯಾಗುವಂತಹದ್ದು.

2019 ವಿಶ್ವಕಪ್‌ ಆಡುತ್ತಾರ?
ಇದು ಯುವಿ ಅಭಿಮಾನಿಗಳಲ್ಲಿ  ಸುಳಿದಾಡುತ್ತಿರುವ ಪ್ರಶ್ನೆ. ಇದಕ್ಕೆ ಏನನ್ನೂ ಹೇಳಲಾಗದು. ಏಕೆಂದರೆ ಯುವಿಗೆ ಈಗಾಗಲೇ 35 ವರ್ಷ ದಾಟಿದೆ. 2019ರ ವೇಳೆ 37 ವರ್ಷವನ್ನು ದಾಟಲಿದ್ದಾರೆ. ಸದ್ಯ ಫಾರ್ಮ್ ಕಾಯ್ದು ಕೊಂಡರೂ ಕೂಡ ವಯಸ್ಸಿನ ಪರಿಣಾಮ ಪ್ರದರ್ಶನದ ಮಟ್ಟ ಕುಗ್ಗಬಹುದು. ಆದರೆ ಇದೇ ಫಾರ್ಮ್ ಕಾಯ್ದುಕೊಂಡರೆ ವಿಶ್ವಕಪ್‌ ಆಡುವುದು ಖಚಿತ ಅನ್ನುವುದು ಕ್ರಿಕೆಟ್‌ ಪಂಡಿತರ ಲೆಕ್ಕಾಚಾರ.

Advertisement

Udayavani is now on Telegram. Click here to join our channel and stay updated with the latest news.

Next