ಹೈದರಾಬಾದ್: ವೈಎಸ್‌ಆರ್ ತೆಲಂಗಾಣ ಪಕ್ಷದ ಅಧ್ಯಕ್ಷೆ ವೈಎಸ್ ಶರ್ಮಿಳಾ ಅವರನ್ನು ನಿವಾಸದ ಮುಂದೆ ಪೊಲೀಸ್ ಸಿಬಂದಿಯೊಂದಿಗೆ ವಾಗ್ವಾದ ನಡೆಸಿ ಹಲ್ಲೆ ಮಾಡಿದ ಆರೋಪದ ಮೇಲೆ ಸೋಮವಾರ ಬಂಧಿಸಲಾಗಿದೆ.
ಪೊಲೀಸ್ ಸಿಬಂದಿಯ ದೂರಿನ ಆಧಾರದ ಮೇಲೆ, ಶರ್ಮಿಳಾ ವಿರುದ್ಧ ಒಬ್ಬ ಸಬ್ ಇನ್ಸ್‌ಪೆಕ್ಟರ್ ಮೇಲೆ ಹಲ್ಲೆ ಮಾಡಿದ ಆರೋಪ, ಪೊಲೀಸ್ ಪೇದೆಯ ಮೇಲೆ ತನ್ನ ವಾಹನ ಢಿಕ್ಕಿ ಹೊಡೆದು ಅವರ ಕಾಲಿಗೆ ಗಾಯ ಮಾಡಿದ ಮತ್ತು ಪೊಲೀಸ್ ಅಧಿಕಾರಿಗಳನ್ನು ನಿಂದಿಸಿದ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿದೆ.
ಬಂಧಿತ ಶರ್ಮಿಳಾ ಅವರನ್ನು ಭೇಟಿಯಾಗಲು ತೆರಳಿದ್ದ ಜುಬಿಲಿ ಹಿಲ್ಸ್ ಪೊಲೀಸ್ ಠಾಣೆ ಬಳಿ ನಡೆದ ಗಲಾಟೆಯಲ್ಲಿ ಶರ್ಮಿಳಾ ಅವರ ತಾಯಿ ವೈ ಎಸ್ ವಿಜಯಮ್ಮ ಅವರು ಮಹಿಳಾ ಪೇದೆಯೊಬ್ಬರಿಗೆ ಕಪಾಳಮೋಕ್ಷ ಮಾಡುತ್ತಿರುವ ದೃಶ್ಯಾವಳಿಗಳನ್ನು ಕೂಡ ವಿಶ್ಲೇಷಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಟಿವಿ ದೃಶ್ಯಗಳಲ್ಲಿ, ಶರ್ಮಿಳಾ ಅವರು ಅನುಮತಿ ಪಡೆದಿಲ್ಲದ ಪ್ರತಿಭಟನೆಯನ್ನು ಮುಂದುವರಿಸದಂತೆ ತಡೆಯಲು ಪ್ರಯತ್ನಿಸಿದ ಪೊಲೀಸ್ ಅಧಿಕಾರಿಗಳನ್ನು ಮ್ಯಾನ್ ಹ್ಯಾಂಡ್ ಮಾಡುತ್ತಿರುವುದು ಕಂಡುಬಂದಿದೆ.