Advertisement

ಅರಸುರವರ ಬೆನ್ನಿಗೆ ಚೂರಿ ಹಾಕಿದವರು ನೀವು : ಎಚ್.ವಿಶ್ವನಾಥ್ ವಿರುದ್ದ ಶ್ರೀನಿವಾಸ ಪ್ರಸಾದ್ ಕಿಡಿ

02:02 PM Dec 16, 2022 | Team Udayavani |

ಮೈಸೂರು : ”ನಿಮ್ಮನ್ನು ಬೆಳೆಸಿದ್ದು ದೇವರಾಜ ಅರಸರು.ಆದರೆ ರಾತ್ರೋರಾತ್ರಿ ನೀವು, ಮಲ್ಲಿಕಾರ್ಜುನ ಖರ್ಗೆಯವರು, ದೇವರಾಜ ಅರಸರನ್ನು ತೊರೆದು ಇಂದಿರಾ ಕಾಂಗ್ರೆಸ್ ಗೆ ಸೇರಿದ್ರೀ. ಆ ಮೂಲಕ ನಿಮ್ಮನ್ನು ಬೆಳೆಸಿದ ದೇವರಾಜ ಅರಸುರವರ ಬೆನ್ನಿಗೆ ಚೂರಿ ಹಾಕಿದಿರಿ, ವಿಶ್ವನಾಥ್ ಅವರೇ ಎಂದು ಗತಕಾಲದ ರಾಜಕೀಯವನ್ನು ನೆನಪಿಸಿಕೊಳ್ಳಿ” ಎಂದು ಚಾಮರಾಜನಗರ ಸಂಸದ ವಿ. ಶ್ರೀನಿವಾಸಪ್ರಸಾದ್ ಅವರು ಬಿಜೆಪಿ ಎಂಎಲ್ ಸಿ ಎಚ್.ವಿಶ್ವನಾಥ್ ವಿರುದ್ದ ಕಿಡಿ ಕಾರಿದ್ದಾರೆ.

Advertisement

ಮೈಸೂರಿನ ಖಾಸಗಿ ಹೋಟೆಲ್ ನಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಬಿಜೆಪಿ ಎಂಎಲ್ ಸಿ ಎಚ್.ವಿಶ್ವನಾಥ್ ನಿನ್ನೆ ನಡೆಸಿದ ಸುದ್ದಿಗೋಷ್ಠಿಯಲ್ಲಿ ತಮ್ಮ ವಿರುದ್ಧ ನೀಡಿರುವ ಹೇಳಿಕೆಗೆ ವಿ.ಶ್ರೀನಿವಾಸಪ್ರಸಾದ್ ತಿರುಗೇಟು ನೀಡಿದರು.

”ನಾನು ವಿಶ್ವನಾಥ್ ಅವರೊಬ್ಬರನ್ನು ಅಲೆಮಾರಿ ಎಂದು ಹೇಳಿಲ್ಲ.ನಾನು ಸಿದ್ದರಾಮಯ್ಯನವರನ್ನು ಅಲೆಮಾರಿ ಎಂದು ಹೇಳಿದ್ದೇನೆ. ಶಾಸಕ, ಸಚಿವ, ವಿಪಕ್ಷ ನಾಯಕ, ಮುಖ್ಯಮಂತ್ರಿ ಆಗಿದ್ದ ಸಿದ್ದರಾಮಯ್ಯನವರು ಚುನಾವಣೆಯಲ್ಲಿ ಸ್ಪರ್ಧಿಸಲು ಕ್ಷೇತ್ರದಿಂದ ಕ್ಷೇತ್ರಕ್ಕೆ ಅಲೆದಾಡುತ್ತಿರುವುದಕ್ಕೆ ಅಲೆಮಾರಿ ಎಂದು ಹೇಳಿದ್ದೇನೆ. ನನ್ನ ಸಂಸತ್ ಸ್ಥಾನದ ಅವಧಿ ಒಂದೂವರೆ ವರ್ಷ ಬಾಕಿಯಿದೆ. ನನ್ನ ಅವಧಿ ಮುಗಿಯುವ ವೇಳೆಗೆ ನಾನು ರಾಜಕೀಯಕ್ಕೆ ಬಂದು 50 ವರ್ಷವಾಗಲಿದೆ.ನಾನು ಇದುವರೆಗೂ 14 ಚುನಾವಣೆಗಳನ್ನು ಎದುರಿಸಿದ್ದೇನೆ. ರಾಜಕೀಯವಾಗಿ ಹಲವಾರು ರೀತಿ ಏಳು ಬೀಳುಗಳನ್ನು ಕಂಡಿದ್ದೇನೆ” ಎಂದು ಹೇಳುತ್ತಾ, ತಮ್ಮ ರಾಜಕೀಯ ಜೀವನದ ಸುದೀರ್ಘ ಅವಧಿಯನ್ನು ಎಳೆ ಎಳೆಯಾಗಿ ಮುಂದಿಟ್ಟರು.

ನಾನು ಬೇಕಂತ ಪಕ್ಷಾಂತರ ಮಾಡಿಲ್ಲ,ಅನಿವಾರ್ಯ ಕಾರಣಗಳಿಂದಾಗಿ ಬೇರೆ ಪಕ್ಷಗಳಿಗೆ ಹೋಗ ಬೇಕಾಯಿತು.ರಾಜಕೀಯ ಬೆಳವಣಿಗೆಗೆ ತಕ್ಕಂತೆ ಪಕ್ಷಾಂತರ ಮಾಡಬೇಕಾಯಿತು ಎಂದು ಸಮರ್ಥಿಸಿಕೊಂಡರು.

ನಿನ್ನನ್ನು ರಾಜಕೀಯವಾಗಿ ಮೇಲೆತ್ತಲು ಏನೆಲ್ಲಾ ನೆರವು ನೀಡಿದೆ ಎಂದು ನಿನಗೆ ಗೊತ್ತಿಲ್ಲವೇ ವಿಶ್ವನಾಥ್? 1983ರ ಚುನಾವಣೆಯಲ್ಲಿ ನೀನು ಸೋತಾಗ ನಿನ್ನ ಸ್ಥಿತಿ ಏನಾಗಿತ್ತು ವಿಶ್ವನಾಥ್? 1989ರ ಚುನಾವಣೆಯಲ್ಲಿ ಮತ್ತೆ ನೀನು ಗೆದ್ದಾಗ ನಿನ್ನನ್ನು ಮಂತ್ರಿ ಮಾಡುವಂತೆ ಕೇಳಿಕೊಂಡಿದ್ದು‌ ‌ನಿನಗೆ ನೆನಪಿಲ್ಲವೇ ವಿಶ್ವನಾಥ್? ಆಗ ನಿನ್ನನ್ನು ಮಂತ್ರಿ ಮಾಡಿದ್ದು ಯಾರು ವಿಶ್ವನಾಥ್? ಎಂದು ಪ್ರಶ್ನೆಗಳ ಸುರಿಮಳೆಗರೆದರು.

Advertisement

”ನಾನು ಅಲೆಮಾರಿಯಲ್ಲ ಸ್ವಾಭಿಮಾನಿ.ನನ್ನನ್ನು ಜನ ಅಲೆಮಾರಿ ಎನ್ನುವುದಿಲ್ಲ ಸ್ವಾಭಿಮಾನಿ, ರಾಜಕೀಯ ಮುತ್ಸದ್ದಿ ಎನ್ನುತ್ತಾರೆ. ಎಚ್ ವಿಶ್ವನಾಥ್ ಅವರದು ಅತ್ಯಂತ ಕೊಳಕು ರಾಜಕಾರಣ.ವಿಶ್ವನಾಥ್ ಕಾಂಗ್ರೆಸ್ ಬಿಟ್ಟಿದ್ದು ಹಣಕ್ಕಾಗಿ.ಸಿದ್ದರಾಮಯ್ಯ ಬಳಿ ವಿಶ್ವನಾಥ್ ಹಣ ಅಧಿಕಾರ ಕೇಳಿದಾಗ ಕೊಡಲಿಲ್ಲ ಎಂಬ ಕಾರಣಕ್ಕೆ ಕಾಂಗ್ರೆಸ್ ಬಿಟ್ಟರು. ಜೆಡಿಎಸ್ ಗೆ ಹೋದಾಗ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಟಿಕೆಟ್ ಕೊಡಿಸಲಾಗದೇ ಅಸಹಾಯಕರಾಗಿದ್ದರು. ಹಾಗಾಗಿ ಬಿಜೆಪಿಗೆ ಬರುತ್ತೇನೆಂದು ನನ್ನ ಮನೆಗೆ ಬಂದು ವಿಶ್ವನಾಥ್ ದುಂಬಾಲು ಬಿದ್ದಿದ್ದ.
ಯಡಿಯೂರಪ್ಪ ‌ನೀವು ಕುಳಿತು ಮಾತನಾಡಿಕೊಳ್ಳಿ ಎಂದು ಹೇಳಿದ್ದೆ.ನನ್ನ ಸಮ್ಮುಖದಲ್ಲಿ ವಿಶ್ವನಾಥ್ ಗೆ ಯಾರೂ ಕೂಡ ಹಣ ಕೊಟ್ಟಿಲ್ಲ. ಆದರೆ ಬಿಜೆಪಿ ಸೇರ್ಪಡೆ ಆದ ಬಳಿಕವೂ ಚುನಾವಣೆಗೆ ನಿಲ್ಲಬೇಡಿ ನಿಮ್ಮನ್ನು ಎಂಎಲ್ ಸಿ ಮಾಡುತ್ತೇವೆ ಎಂದು ಹೇಳಿದರೂ ಕೇಳಲಿಲ್ಲ. 15 ಕೋಟಿ ಹಣ ಪಡೆದು ಚುನಾವಣೆಗೆ ನಿಂತರು. ಆದರೆ 5 ಕೋಟಿ ಖರ್ಚು ಮಾಡಿ 10 ಕೋಟಿ ಹಾಗೇ ಇಟ್ಟುಕೊಂಡರು, ಚುನಾವಣೆಯಲ್ಲಿ ಸೋತರು” ಎಂದು ಕಿಡಿ ಕಾರಿದರು.

”ಸಂಸದನಾಗಿದ್ದಾಗಲೂ ಪ್ರತಿದಿನ ಬಂದು ಸಹಿಹಾಕಿ ಹೋಗುತ್ತಿದ್ದನೇ ಹೊರತು, ಒಂದು ದಿನವೂ ಒಂದು ಪ್ರಶ್ನೆ ಕೇಳಲಿಲ್ಲ.ಸಂಜೆಯಾದರೆ ಪಾರ್ಟಿ ಮಾಡಿಕೊಂಡು ಕಾಲ‌ಕಳೀತಿದ್ದ ವಿಶ್ವನಾಥ್ ನಂತಹ ಮೂರ್ಖ ಮತ್ತೊಬ್ಬನಿಲ್ಲ.ನಿನಗೆ ನಾನು ಮಾಡಿದ ಸಹಾಯ ಮರೆತು ಹೋಯಿತಾ ವಿಶ್ವನಾಥ್? ಚಾಮುಂಡೇಶ್ವರಿ ಉಪ ಚುನಾವಣೆಯಲ್ಲಿ ಸಿದ್ದರಾಮಯ್ಯ ಗೆಲುವಿಗೆ ನಾನು ಶ್ರಮಿಸಲಿಲ್ಲವೇ? 2013 ಚುನಾವಣೆಯಲ್ಲಿ ನನಗೆ ನಂಜನಗೂಡು ಟಿಕೆಟ್ ಕೊಡಿ ಎಂದು ನಾನು ದುಂಬಾಲು ಬಿದ್ದಿರಲಿಲ್ಲ. ಆದರೂ ನನಗೆ ಟಿಕೆಟ್ ಕೊಟ್ಟರು, ಚಾಮರಾಜನಗರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಎಂಟು ಕ್ಷೇತ್ರಗಳಲ್ಲಿ ನಾನು ಕಾಂಗ್ರೆಸ್ ಗೆಲ್ಲಿಸಲಿಲ್ಲವೇ?.ಆದರೆ ನನಗೆ ಆಮೇಲೆ ಏನು ಮಾಡಿದರು” ಎಂದು ಹರಿಹಾಯ್ದರು.

Advertisement

Udayavani is now on Telegram. Click here to join our channel and stay updated with the latest news.

Next