Advertisement

ಯೋಗೀಶ್‌ಗೌಡ ಹತ್ಯೆ: ಸಿಬಿಐ ತನಿಖೆಗೆ ಆಗ್ರಹ

07:34 AM Nov 25, 2017 | Team Udayavani |

ಬೆಂಗಳೂರು: ಕಳೆದ ವರ್ಷದ ಜೂನ್‌ ತಿಂಗಳಲ್ಲಿ ನಡೆದ ಧಾರವಾಡ ಜಿಪಂ ಸದಸ್ಯ ಯೋಗೀಶ್‌ಗೌಡ ಹತ್ಯೆ ಪ್ರಕರಣದಲ್ಲಿ ಗಣಿ ಮತ್ತು ಭೂವಿಜ್ಞಾನ ಸಚಿವ ವಿನಯ ಕುಲಕರ್ಣಿ ಕೈವಾಡವಿರುವುದು ಬೆಳಕಿಗೆ ಬಂದಿರುವ ಹಿನ್ನೆಲೆಯಲ್ಲಿ ಅವರನ್ನು ಸಚಿವ ಸಂಪುಟದಿಂದ ವಜಾಗೊಳಿಸಬೇಕು ಮತ್ತು ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕೆಂದು ರಾಜ್ಯ ಬಿಜೆಪಿ ಸರ್ಕಾರವನ್ನು ಆಗ್ರಹಿಸಿದೆ.

Advertisement

ಜೊತೆಗೆ ಈ ಬೇಡಿಕೆಗಳನ್ನು ಮುಂದಿಟ್ಟುಕೊಂಡು ರಾಜ್ಯಾದ್ಯಂತ ಸರ್ಕಾರದ ವಿರುದ್ಧ ಹೋರಾಟ ನಡೆಸಲೂ ಮುಂದಾಗಿದ್ದು, ಶನಿವಾರ ನಡೆಯುವ ಪಕ್ಷದ ಕೋರ್‌ ಕಮಿಟಿ ಸಭೆಯಲ್ಲಿ ಚರ್ಚಿಸಿ ಹೋರಾಟದ ರೂಪುರೇಷೆಗಳನ್ನು ಸಿದ್ಧಪಡಿಸಲು ತೀರ್ಮಾನಿಸಿದೆ. ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್‌.ರವಿಕುಮಾರ್‌, ವಕ್ತಾರರಾದ ಅಶ್ವತ್ಥನಾರಾಯಣ, ಡಾ.ವಾಮನಾಚಾರ್ಯ, ರಾಜ್ಯದಲ್ಲಿ ಕೊಲೆಗಡುಕ ಸರ್ಕಾರ ಆಡಳಿತದಲ್ಲಿದೆ ಎಂಬುದಕ್ಕೆ ಯೋಗೀಶ್‌ಗೌಡ ಹತ್ಯೆಯೇ ಸಾಕ್ಷಿ. ಈ ಕೊಲೆ ಪ್ರಕರಣದಲ್ಲಿ ಸಚಿವ ವಿನಯ ಕುಲಕರ್ಣಿ ಅವರ ಪಾತ್ರವಿದ್ದು, ಈ ಕಾರಣಕ್ಕಾಗಿಯೇ ಸಾಕ್ಷಿ ನಾಶ ಮಾಡಲು ಪ್ರಯತ್ನಿಸಿದ್ದಾರೆ. ಅವರ ಕಡೆಯವರು ಯೋಗೀಶ್‌ಗೌಡನ ಮಗನನ್ನು ಅಪಹರಿಸಿ ಸಾಕ್ಷ್ಯ ನೀಡದಂತೆ ಆತನ ಪತ್ನಿಗೆ ಬೆದರಿಕೆ ಹಾಕಿದ್ದಾರೆಂದು ಆರೋಪಿಸಿದರು.

ಈ ಹತ್ಯೆ ಪ್ರಕರಣದಲ್ಲಿ ಬೆಳಗಾವಿ ವಿಭಾಗದ ಡಿವೈಎಸ್ಪಿ ಶಾಮೀಲಾಗಿ ಸಾಕ್ಷ್ಯ ಹೇಳದಂತೆ ಯೋಗೀಶ್‌ಗೌಡನ ಸಹೋದರ  ರುನಾಥ್‌ಗೌಡ ಮೇಲೆ ಒತ್ತಡ ಹೇರುತ್ತಿದ್ದಾರೆ. ಆದ್ದರಿಂದ ಅವರನ್ನು ಸೇವೆಯಿಂದ ವಜಾಗೊಳಿಸಿ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಬೇಕು ಎಂದು ಆಗ್ರಹಿಸಿದರು.

ಗೂಂಡಾ ಸಚಿವರು: ಸಚಿವ ವಿನಯ ಕುಲಕರ್ಣಿ ಅವರನ್ನು ಗೂಂಡಾ ಸಚಿವ ಎಂದು ಜರಿದ ಬಿಜೆಪಿ ಮುಖಂಡರು, ಸಚಿವರಿಗೆ ಆಪ್ತನಾದ ಮಹೇಶ್‌ ಶೆಟ್ಟಿ ಎಂಬಾತ ಗುರುನಾಥಗೌಡನನ್ನು ಮನೆಗೆ ಕರೆಸಿ ಕೊಲೆ ಪ್ರಕರಣ ಹಿಂತೆಗೆದುಕೊಳ್ಳುವಂತೆ ಒತ್ತಡ ಹೇರುತ್ತಿದ್ದಾರೆ. ಆದ್ದರಿಂದ ಈ ಪ್ರಕರಣದ ಕುರಿತು ಸ್ಥಳೀಯ ಪೊಲೀಸರು ಅಥವಾ ಸಿಐಡಿ ತನಿಖೆ ನಡೆಸಿದರೆ ಸಚಿವರು ತಮ್ಮ
ಪ್ರಭಾವ ಬೀರಿ ತನಿಖೆಯ ದಾರಿ ತಪ್ಪಿಸಲಿದ್ದಾರೆ. ಆದ್ದರಿಂದ ಸಿಬಿಐ ತನಿಖೆಯೇ ಆಗಬೇಕು ಎಂದು ಒತ್ತಾಯಿಸಿದರು. ಪ್ರಕರಣದ ತನಿಖೆ ದಾರಿತಪ್ಪಲು ಸಚಿವ ವಿನಯ ಕುಲಕರ್ಣಿ ಅವರೊಂದಿಗೆ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್‌ ಅವರೂ ಕಾರಣ. ಯೋಗೀಶ್‌ ಗೌಡ ಕೊಲೆಯಾದಾಗ ಅಂದಿನ ಗೃಹ ಸಚಿವ ಪರಮೇಶ್ವರ್‌, ಇದು ರಾಜಕೀಯ ಕೊಲೆಯಲ್ಲ, ಭೂ ವಿವಾದಕ್ಕೆ ಸಂಬಂಧಿಸಿದಂತೆ ನಡೆದ ಕೊಲೆ ಎಂದು ಹೇಳಿದ್ದರು. ತನಿಖೆ ನಡೆಸುತ್ತಿದ್ದ ಸ್ಥಳೀಯ ಸರ್ಕಲ್‌ ಇನ್ಸ್‌ಪೆಕ್ಟರ್‌ ಅವರನ್ನು ವರ್ಗಾಯಿಸಿದ್ದರಿಂದ ತನಿಖೆ ದಿಪ್ಪುತಪ್ಪಿತು ಎಂದು ಆರೋಪಿಸಿದರು. ಆದ್ದರಿಂದ ತಕ್ಷಣ ವಿನಯ ಕುಲಕರ್ಣಿ ಅವರನ್ನು ಸಂಪುಟದಿಂದ ವಜಾಗೊಳಿಸಬೇಕು. ಇಲ್ಲದಿದ್ದರೆ ಸರ್ಕಾರದ ವಿರುದ್ಧ ಹೋರಾಟ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು.  

Advertisement

Udayavani is now on Telegram. Click here to join our channel and stay updated with the latest news.

Next