Advertisement

ಯೋಗರಾಜ್‌ ಭಟ್‌ ಈಗ ದರೋಡೆಕೋರ

11:26 AM Apr 09, 2018 | Team Udayavani |

ನಿರ್ದೇಶಕ ಯೋಗರಾಜ್‌ ಭಟ್‌ ಈ ಹಿಂದೆ ಗಡ್ಡವಿಜಿ ನಿರ್ದೇಶನದ “ದ್ಯಾವ್ರೆ’ ಚಿತ್ರದಲ್ಲಿ ಜೈಲರ್‌ ಆಗಿ ಕಾಣಿಸಿಕೊಂಡಿದ್ದರು. ಆ ನಂತರ ನಟನೆಗೆ ಬೇರೆ ಬೇರೆ ಸಿನಿಮಾಗಳಿಂದ ಅವರಿಗೆ ಸಾಕಷ್ಟು ಅವಕಾಶಗಳು ಬಂದರೂ ಭಟ್ರು ಮಾತ್ರ ಒಪ್ಪಿರಲಿಲ್ಲ. ಈಗ ಭಟ್ರು ಸಿನಿಮಾವೊಂದರಲ್ಲಿ ನಟಿಸುತ್ತಿದ್ದಾರೆ. ಅದು “ಬೆಲ್‌ ಬಾಟಮ್‌’ ಸಿನಿಮಾದಲ್ಲಿ. ಜಯತೀರ್ಥ ನಿರ್ದೇಶನದ “ಬೆಲ್‌ ಬಾಟಮ್‌’ ಸಿನಿಮಾದಲ್ಲಿ ಯೋಗರಾಜ್‌ ಭಟ್‌ ಅವರು ಅತಿಥಿ ಪಾತ್ರ ಮಾಡುತ್ತಿದ್ದಾರೆ.

Advertisement

ಅಷ್ಟಕ್ಕೂ ಅವರ ಪಾತ್ರ ಏನು ಎಂದರೆ ದರೋಡೆಕೋರ ಪಾತ್ರ. ಇಲ್ಲಿ ಭಟ್ರು ಮಾಜಿ ದರೋಡೆಕೋರನಾಗಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರದಲ್ಲಿ ಅವರ ಗೆಟಪ್‌ ಕೂಡಾ ಸಂಪೂರ್ಣ ವಿಭಿನ್ನವಾಗಿರುತ್ತದೆಯಂತೆ. ಈ ಬಗ್ಗೆ ಮಾತನಾಡುವ ನಿರ್ದೇಶಕ ಜಯತೀರ್ಥ, “ಕಥೆಗೆ ಯೋಗರಾಜ ಭಟ್ರ ಪಾತ್ರ ಟ್ವಿಸ್ಟ್‌ ಕೊಡುತ್ತದೆ. ಇಲ್ಲಿ ಅವರು ರಿಟೈರ್ಡ್ ದರೋಡೆಕೋರನಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ನಮ್ಮ ಚಿತ್ರ 80ರ ದಶಕದ ಕಥೆಯನ್ನು ಹೊಂದಿದ್ದು, ಅದಕ್ಕೆ ಪೂರಕವಾಗಿ ಪಾತ್ರದ ಗೆಟಪ್‌ ಇರಲಿದೆ. ಈಗಾಗಲೇ ಶೇ 80 ರಷ್ಟು ಚಿತ್ರೀಕರಣ ಮುಗಿದಿದ್ದು, ಹಾಡುಗಳು ಬಾಕಿ ಇವೆ. ಸದ್ಯ ಭಟ್ರು ಅವರ ಸಿನಿಮಾ ಕೆಲಸದಲ್ಲಿ ಬಿಝಿ ಇದ್ದಾರೆ. ಸದ್ಯದಲ್ಲೇ ನಮ್ಮ ತಂಡ ಸೇರಿಕೊಳ್ಳಲಿದ್ದಾರೆ’ ಎನ್ನುತ್ತಾರೆ ಜಯತೀರ್ಥ. ಅಂದಹಾಗೆ, “ಬೆಲ್‌ ಬಾಟಮ್‌’ ಚಿತ್ರದಲ್ಲಿ ರಿಷಭ್‌ ಶೆಟ್ಟಿ ಹಾಗೂ ಹರಿಪ್ರಿಯಾ ಪ್ರಮುಖ ಪಾತ್ರ ಮಾಡುತ್ತಿದ್ದು,

80ರ ದಶಕದ ಕಾಲಘಟ್ಟದಲ್ಲಿನ ದಿವಾಕರ ಎಂಬ ಕಾಲ್ಪನಿಕ ಪತ್ತೇದಾರನೊಬ್ಬನ ಕಥೆಯನ್ನು ಈ ಸಿನಿಮಾ ಹೊಂದಿದೆ. ಮೊಬೈಲ್‌-ಟಿವಿ-ಸಿಸಿಟಿವಿ ಇಲ್ಲದ ಕಾಲಘಟ್ಟ, ಪೊಲೀಸರ ತನಿಖೆ, ಪತ್ತೇದಾರಿ ತಂತ್ರಗಳು …. ಇವೆಲ್ಲಾ ಇಟ್ಟುಕೊಂಡು ಈ ಚಿತ್ರ ಮಾಡಲಾಗುತ್ತಿದೆ. ಇನ್ನು ನಟ-ನಿರ್ದೇಶಕ ಶಿವಮಣಿ ಇಲ್ಲೊಂದು ಪ್ರಮುಖ ಪಾತ್ರ ಮಾಡಿದ್ದಾರೆ.

ವಿಶೇಷವೆಂದರೆ, ಚಿತ್ರದಲ್ಲಿ ಒಬ್ಬೊಬ್ಬರದ್ದು ಒಂದೊಂದು ವಿಭಿನ್ನ ಹೆಸರುಗಳು. ಜೋಡಿ ನಂಜಪ್ಪ, ಗೂಬೆ ಖಾನ್‌, ಸಗಣಿ ಪಿಂಟೋ, ರೇಡಿಯೋ ರಾಜ, ಮರಕುಟುಕ … ಹೀಗೆ ಒಂದೊಂದು ಪಾತ್ರಕ್ಕೂ ಒಂದೊಂದು ವಿಭಿನ್ನ ಹೆಸರಿಡಲಾಗಿದೆಯಂತೆ. ಈ ಚಿತ್ರವನ್ನು ಗೋಲ್ಡನ್‌ ಹಾರ್ಸ್‌ ಸಿನಿಮಾಸ್‌ನಡಿ ಸಂತೋಷ್‌ ಕುಮಾರ್‌ ಎನ್ನುವವರು ನಿರ್ಮಿಸುತ್ತಿದ್ದಾರೆ. ಈ ಚಿತ್ರಕ್ಕೆ ಅಜನೀಶ್‌ ಲೋಕನಾಥ್‌ ಸಂಗೀತ, ಅರವಿಂದ್‌ ಕಶ್ಯಪ್‌ ಛಾಯಾಗ್ರಹಣವಿದೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next