ಬೆಂಗಳೂರು: ಕೆಲಸ ಬಿಟ್ಟಿದ್ದ ತನ್ನ ಕಂಪೆನಿಯ ಮಾಜಿ ಸ್ವಾಗತಕಾರಿಣಿಯನ್ನು ಬಲವಂತವಾಗಿ ತನ್ನ ಮನೆಗೆ ಎಳೆದೊಯ್ದಿದ್ದ ಸಂಘಟನೆಯೊಂದರ ರಾಜ್ಯಾಧ್ಯಕ್ಷ ವೀರೇಶ್ ಎಂಬಾತನಿಗೆ ಮಹಿಳೆಯ ಪತಿ, ಸಂಬಂಧಿಕರು ಥಳಿಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಈ ಸಂಬಂಧ ಮಹಿಳೆಯೊಬ್ಬರು ಮಾರ್ಚ್ 1ರಂದು ಎಚ್‌ಎಸ್‌ಆರ್ ಲೇಔಟ್‌ನ ಠಾಣೆಯಲ್ಲಿ ದಾಖಲಿಸಿದ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ವೀರೇಶ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿ ವೀರೇಶ್, ಜಾಮೀನು ಪಡೆದು ಹೊರಬಂದಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವೀರೇಶ್, “ಎ1 ಇನ್ಫೋಟೆಕ್’ ಎಂಬ ಕಂಪೆನಿಯ ಮಾಲೀಕ. ದೂರುದಾರ ಮಹಿಳೆ ಈ ಸಂಸ್ಥೆಯಲ್ಲಿ ಸ್ವಾಗತಕಾರಿಣಿಯಾಗಿ ಕೆಲಸ ಮಾಡುತ್ತಿದ್ದರು. ಮೂರು ತಿಂಗಳ ಹಿಂದೆ ಮಹಿಳೆ ಕೆಲಸ ತೊರೆದಿದ್ದರು. ಆದರೂ, ವೀರೇಶ್ ಆಕೆಗೆ ಕರೆ ಮಾಡಿ ಕೆಲಸಕ್ಕೆ ಮರಳಿ ಬರುವಂತೆ ಪೀಡಿಸುತ್ತಿದ್ದ ಎನ್ನಲಾಗಿದೆ.
ಮಾರ್ಚ್ 1ರಂದು ಮಹಿಳೆ ತನ್ನ ಪತಿ ಜತೆ ಎಚ್‌ಎಸ್‌ಆರ್ ಲೇಔಟ್‌ನ ಬಿಡಿಎ ಕಾಂಪ್ಲೆಕ್ಸ್‌ಗೆ ಶಾಪಿಂಗ್‌ಗೆಂದು ತೆರಳಿದ್ದರು. ಈ ವೇಳೆ ಅಲ್ಲಿದ್ದ ವೀರೇಶ್ ಪತಿಯ ಎದುರೇ ಬಲವಂತವಾಗಿ ಆಕೆಯನ್ನು ತನ್ನ ಮನೆಗೆ ಎಳೆದೊಯ್ದಿದ್ದ. ಬಳಿಕ ಮಹಿಳೆಯ ಪತಿ ತನ್ನ ಪೋಷಕರು ಹಾಗೂ ಸ್ನೇಹಿತರ ಜತೆ ವೀರೇಶ್ ಮನೆಗೆ ತೆರಳಿ ಆತನ್ನು ಮನಬಂದಂತೆ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದರು.
ಬಳಿಕ ಮಹಿಳೆ ನೀಡಿದ ದೂರಿನ ಮೇಲೆ ಆರೋಪಿ ವೀರೇಶ್‌ನನ್ನು ಬಂಧಿಸಲಾಗಿತ್ತು. ನಂತರ ವೀರೇಶ್ ಜಾಮೀನು ಪಡೆದು ಹೊರಬಂದಿದ್ದಾನೆ. ಅಲ್ಲದೆ, ಮಹಿಳೆಯ ಪತಿ ವಿರುದ್ಧ ಹಲ್ಲೆ ದೂರು ದಾಖಲಿಸಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
ವೀರೇಶ್ ಚಿತ್ರ ನಿರ್ಮಾಪಕ?: ಸಿನಿಮಾದಲ್ಲಿ ಅವಕಾಶ ಕೊಡಿಸುವುದಾಗಿ ವಂಚಿಸಿದ್ದ ಎಂಬ ಆರೋಪಗಳು ವೀರೇಶ್ ವಿರುದ್ಧ ಕೇಳಿಬಂದಿದ್ದವು. ಆದರೆ, ಇದ್ನನು ನಿರಾಕರಿಸಿರುವ ಪೊಲೀಸರು, ವಿಚಾರಣೆ ವೇಳೆ ತಾನು ಕರುನಾಡು ಸುವರ್ಣ ವೇದಿಕೆ ಸಂಘಟನೆ ರಾಜ್ಯಾಧ್ಯಕ್ಷ ಎಂದು ವೀರೇಶ್ ತಿಳಿಸಿದ್ದಾನೆ ಎಂದು ಹೇಳಿದ್ದಾರೆ.