Advertisement

Belagavi; ಕಾಂಗ್ರೆಸ್‌ ಅಧಿವೇಶನ ಶತಮಾನೋತ್ಸವ: ಮಾಜಿ ಪ್ರಧಾನಿ ನಿಧನದಿಂದ ಆಘಾತ

01:14 AM Dec 28, 2024 | Team Udayavani |

ಬೆಳಗಾವಿ: ಒಂದು ದಿನದ ಹಿಂದಷ್ಟೇ ಕಾಂಗ್ರೆಸ್‌ ಅಧಿವೇಶನದ ಶತಮಾನೋತ್ಸವ ಸಂಭ್ರಮಾಚರಣೆಗೆ ಅದ್ದೂರಿಯಾಗಿ ಕಳೆಗಟ್ಟಿದ್ದ ವೇದಿಕೆಯು ಪಕ್ಷದ ಮುಖಂಡ, ಮಾಜಿ ಪ್ರಧಾನಿ ಡಾ| ಮನಮೋಹನ್‌ ಸಿಂಗ್‌ ಅವರನ್ನು ಕಳೆದುಕೊಂಡ ಆಘಾತದಿಂದ ಕಳೆಗುಂದಿ ಶುಕ್ರವಾರ ಶ್ರದ್ಧಾಂಜಲಿ ಕಾರ್ಯಕ್ರಮಕ್ಕೆ ಸೀಮಿತವಾಯಿತು. ಹರ್ಷೋದ್ಗಾರಗಳು ಮೊಳಗಬೇಕಿದ್ದ ಐತಿಹಾಸಿಕ ವೇದಿಕೆಯು ಅಶ್ರುತರ್ಪಣಕ್ಕೆ ಸಾಕ್ಷಿಯಾಯಿತು.

Advertisement

ಸಿಪಿಎಡ್‌ ಮೈದಾನದಲ್ಲಿ ವಿಶಾಲ ಪೆಂಡಾಲ್‌, ವಿದ್ಯುದ್ದೀಪಗಳು ಮತ್ತು ಪುಷ್ಪಾಲಂಕಾರಗಳಿಂದ ಇಡೀ ವೇದಿಕೆ ಮದುವಣಗಿತ್ತಿಯಂತೆ ಸಿಂಗಾರಗೊಂಡಿತ್ತು. ಆದರೆ ಕುಟುಂಬದ ಸದಸ್ಯನ ಅಗಲಿಕೆಯಿಂದ ಏಕಾಏಕಿ ಅಲ್ಲಿ ಸೂತಕದ ಛಾಯೆ ಆವರಿಸಿತು.

ಶ್ರದ್ಧಾಂಜಲಿ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ಡಾ| ಮನಮೋಹನ ಸಿಂಗ್‌ ಅವರ ಜ್ಞಾನ ದೇಶದ ಅನೇಕ ಸಮಸ್ಯೆಗಳಿಗೆ ಪರಿಹಾರ ನೀಡಿತು. ಅತ್ಯಂತ ವಿನಯಶೀಲವಾಗಿದ್ದ ಅವರು ಮೃದುಭಾಷೆಯಲ್ಲೇ ಅನೇಕರ ಮನಸ್ಸು ಗೆದ್ದಿದ್ದರು. ಅವರ ಅಗಲಿಕೆಯು ದೇಶಕ್ಕಾದ ದೊಡ್ಡ ನಷ್ಟ ಎಂದರು.
ಅವರ ಬದುಕೇ ಒಂದು ಪವಾಡ. ಗ್ರಾಮೀಣ ಪ್ರದೇಶದ ಬಡಕುಟುಂಬದಿಂದ ಬಂದವರು, ದೇಶದ ಶ್ರೇಷ್ಠ ಆರ್ಥಿಕ ತಜ್ಞರಾಗಿ ಹೊರಹೊಮ್ಮಿದರು. ಅವರ ಅವಧಿಯಲ್ಲೇ ಭಾರತ ಜಾಗತಿಕ ಆರ್ಥಿಕತೆಗೆ ಮುಕ್ತವಾಯಿತು. ಆರ್‌ಟಿಐ, ಆಹಾರ ಭದ್ರತೆ, ನರೇಗಾ ಸೇರಿ ಅನೇಕ ಜನಪರ ಕಾಯ್ದೆಗಳನ್ನು ತರುವ ಮೂಲಕ ಅವುಗಳನ್ನು ಮೂಲಭೂತ ಹಕ್ಕುಗಳನ್ನಾಗಿ ಮಾಡಿದರು ಎಂದು ಸ್ಮರಿಸಿದರು.

ಎಲ್ಲ ವರ್ಗಗಳ ರಕ್ಷಣೆ
ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಮಾತನಾಡಿ, ರೈತರ ಜಮೀನುಗಳಿಗೆ ಉತ್ತಮ ಬೆಲೆ ತಂದುಕೊಟ್ಟರು. ಅರಣ್ಯಹಕ್ಕು ಕಾಯ್ದೆ ಮೂಲಕ ಸಂವಿಧಾನದ ಹಕ್ಕು ಕೊಟ್ಟದ್ದು, ಉದ್ಯೋಗ ಖಾತ್ರಿ ನೀಡಿದ್ದು ಐತಿಹಾಸಿಕ ನಿರ್ಣಯಗಳಾಗಿವೆ. ಕಾರ್ಪೊರೇಟ್‌ ಸಾಮಾಜಿಕ ಹೊಣೆಗಾರಿಕೆ (ಸಿಎಸ್‌ಆರ್‌) ಯೋಜನೆ ಆರಂಭಿಸಿದ್ದೇ ಡಾ| ಸಿಂಗ್‌. ದೇಶಾದ್ಯಂತ 72 ಸಾವಿರ ಕೋ.ರೂ. ರೈತರ ಸಾಲಮನ್ನಾ ಮಾಡಿದರು.ಹೀಗೆ ಎಲ್ಲ ವರ್ಗಗಳನ್ನು ರಕ್ಷಣೆ ಮಾಡುವ ಕೆಲಸ ಮಾಡಿದರು ಎಂದರು.

ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪ ಮೊಯ್ಲಿ ಮಾತನಾಡಿ, ಡಾ| ಮನಮೋಹನ ಸಿಂಗ್‌ ಇಡೀ ಜಗತ್ತಿನ ಆರ್ಥಿಕ ಸೂರ್ಯ. ಪ್ರಥಮ ಹಂತ ಆರ್ಥಿಕ ತಜ್ಞ. ಆಡಳಿತ ಮತ್ತು ಆರ್ಥಿಕ ಕ್ಷೇತ್ರದಲ್ಲಿ ದೊಡ್ಡ ಕ್ರಾಂತಿ ಮಾಡಿದವರು. ಅವರ ಆಡಳಿತಾವಧಿಯಲ್ಲಿ ಜಿಡಿಪಿ ಶೇ. 7.6 ಇತ್ತು. ಅದು ವಿಶ್ವದ ದಾಖಲೆ. ಆ ವೇಗದಲ್ಲಿ ಸಾಗಿದ್ದರೆ ರಾಷ್ಟ್ರದಲ್ಲಿ ಆರ್ಥಿಕತೆಯಲ್ಲಿ ಪ್ರಥಮ ಸ್ಥಾನದಲ್ಲಿ ಇರುತ್ತಿದ್ದೆವು. ರಾಜ್ಯದ ಆಲಮಟ್ಟಿ ಜಲಾಶಯ ಎರಡು ವರ್ಷಗಳಲ್ಲಿ 518 ಮೀಟರ್‌ ನಿರ್ಮಿಸಲಾಯಿತು ಎಂದು ಸ್ಮರಿಸಿದರು.

Advertisement

ಬೆಂ.ವಿವಿಯಲ್ಲಿ ಡಾ| ಸಿಂಗ್‌ ಸಂಶೋಧನ ಕೇಂದ್ರ ಸ್ಥಾಪ ನೆಗೆ ಡಿಸಿಎಂ ಡಿಕೆಶಿ ಸೂಚನೆ
ಡಾ| ಮನಮೋಹನ ಸಿಂಗ್‌ ಒಬ್ಬ ಶ್ರೇಷ್ಠ ಆರ್ಥಿಕ ತಜ್ಞ. ಅವರ ಜ್ಞಾನ, ಚಿಂತನೆಗಳು, ಕೊಡುಗೆಗಳು ಮುಂದಿನ ಪೀಳಿಗೆಗೆ ತಲುಪಬೇಕು. ಈ ನಿಟ್ಟಿನಲ್ಲಿ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಡಾ| ಮನಮೋಹನ ಸಿಂಗ್‌ ಸಂಶೋಧನ ಕೇಂದ್ರ ಸ್ಥಾಪಿಸಬೇಕು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌, ಉನ್ನತ ಶಿಕ್ಷಣ ಸಚಿವ ಡಾ| ಎಂ.ಸಿ. ಸುಧಾಕರ್‌ ಸೂಚನೆ ನೀಡಿದರು.

ಮುಂಬರುವ ದಿನಗಳಲ್ಲಿ ಪಕ್ಷ ಮತ್ತು ಸರಕಾರದಿಂದ ಮನಮೋಹನ ಸಿಂಗ್‌ ಹೆಸರಿನಲ್ಲಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಆಲೋಚನೆಯಿದೆ. ಆ ಮೂಲಕ ಮನಮೋಹನ ಸಿಂಗ್‌ ಅವರನ್ನು ಯುವಪೀಳಿಗೆಗೆ ಪರಿಚಯಿಸುವ ಕೆಲಸ ಆಗಲಿದೆ ಎಂದರು.

ಮನಮೋಹನ್‌ ಸಿಂಗ್‌ ಆರ್ಥಿಕ ಕ್ಷೇತ್ರದಲ್ಲಿ ಬಹಳಷ್ಟು ಜ್ಞಾನ ಹೊಂದಿದ್ದರು. ಅವರ ಅನುಭವ ಆರ್ಥಿಕ ಸುಧಾರಣೆಗೆ ಸಹಕಾರಿಯಾಗಿತ್ತು. ಆಧುನಿಕ ಭಾರತ ನಿರ್ಮಾಣಕ್ಕೆ ಅವರ ಕೊಡುಗೆ ಬಹಳಷ್ಟಿದೆ.
– ದಿನೇಶ್‌ ಗುಂಡೂರಾವ್‌, ಆರೋಗ್ಯ ಸಚಿವ

ಸಿಂಗ್‌ ನಿಧನದಿಂದ ಕಾಂಗ್ರೆಸ್‌ಗೆ ಮಾತ್ರವಲ್ಲ ಇಡೀ ವಿಶ್ವಕ್ಕೆ ತುಂಬಲಾರದ ನಷ್ಟವಾಗಿದೆ. ಭಾರತವು ಆರ್ಥಿಕ ಸಂಕಷ್ಟದಲ್ಲಿದ್ದಾಗ ಹಲವು ಮಹತ್ವದ ನೀತಿಗಳನ್ನು ರೂಪಿಸಿ ದೇಶವನ್ನು ಅಭಿವೃದ್ಧಿಯತ್ತ ಕೊಂಡೊಯ್ದ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ.
– ಈಶ್ವರ ಖಂಡ್ರೆ, ಅರಣ್ಯ ಸಚಿವ

ಸಿಂಗ್‌ ಪ್ರಧಾನಿಯಾಗಿದ್ದ ಸಮಯದಲ್ಲಿ ನನಗೆ ಅವರ ಕ್ಯಾಬಿನೆಟ್‌ನಲ್ಲಿ ಕೆಲಸ ಮಾಡುವ ಅವಕಾಶ ಸಿಕ್ಕಿತ್ತು. ಬ್ಯಾಂಕ್‌ಗಳಿಂದ ಸಾಲ ಸೌಲಭ್ಯ ಒದಗಿಸಿ ಗ್ರಾಮೀಣ ಭಾಗದಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಒತ್ತು ನೀಡಿದ್ದರು.
– ಕೆ.ಎಚ್‌.ಮುನಿಯಪ್ಪ, ಆಹಾರ, ನಾಗರಿಕ ಸರಬರಾಜು ಸಚಿವ

ಹಲವು ವರ್ಷಗಳಿಂದ ಮನಮೋಹನ್‌ ಸಿಂಗ್‌ ಅವರೊಂದಿಗೆ ಒಡನಾಟವಿತ್ತು. ಪ್ರಧಾನಿಯಾದ ಬಳಿಕ ಸಂಪರ್ಕ ಇನ್ನಷ್ಟು ಹತ್ತಿರವಾಗಿತ್ತು. ದೇಶದ ಆರ್ಥಿಕ ವ್ಯವಸ್ಥೆಗೆ ಹೊಸ ರೂಪ ನೀಡಿದ್ದರು.
– ಶಶಿ ತರೂರ್‌, ಸಂಸದ

ಬೆಳಗಾವಿಗೆ ಬಂದಿದ್ದ ರಾಜಸ್ಥಾನ ಸಂಸದ ಆಸ್ಪತ್ರೆಗೆ ದಾಖಲು
ಕಾಂಗ್ರೆಸ್‌ ಅಧಿ ವೇಶನಕ್ಕೆ ಬೆಳಗಾವಿಗೆ ಬಂದಿದ್ದ ರಾಜಸ್ಥಾನದ ರಾಜ್ಯಸಭಾ ಸದಸ್ಯ ನೀರಜ್‌ ಡಾಂಗೆ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವರು ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next