ಬೆಂಗಳೂರು: ಯಶವಂತಪುರ ರೈಲು ನಿಲ್ದಾಣವನ್ನು 377 ಕೋಟಿ ರೂ.ವೆಚ್ಚದಲ್ಲಿ ವಿಶ್ವದರ್ಜೆಯ ನಿಲ್ದಾಣವನ್ನಾಗಿ ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಸೋಮವಾರ ಹೇಳಿದ್ದಾರೆ.
ಕೆಲವು ಸಿವಿಲ್ ಕಾಮಗಾರಿಗಳನ್ನು ಪರಿಶೀಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ರೈಲ್ವೆ ನಿಲ್ದಾಣವು ಮೇಲ್ಛಾವಣಿ ಪ್ಲಾಜಾವನ್ನು ಹೊಂದಿದ್ದು, ಇದು ಮಕ್ಕಳ ಆಟದ ಪ್ರದೇಶ ಮತ್ತು ಉತ್ಪನ್ನಗಳನ್ನು ಮಾರಾಟ ಮಾಡಲು ಸ್ಥಳಾವಕಾಶವನ್ನು ಹೊಂದಿರಲಿದೆ.
ಯಶವಂತಪುರ ಭಾರತದ ಪ್ರಮುಖ ರೈಲು ನಿಲ್ದಾಣಗಳಲ್ಲಿ ಒಂದಾಗಿದ್ದು, ಬೆಂಗಳೂರು ನಗರ ನಿಲ್ದಾಣ, ಹಾಸನ, ತುಮಕೂರು, ಮತ್ತು ಹುಬ್ಬಳ್ಳಿ-ಧಾರವಾಡ ಮತ್ತು ದೆಹಲಿಯಿಂದ ಬರುವ ರೈಲು ಸಂಚಾರ ಒದಗಿಸುತ್ತದೆ. ಯಶವಂತಪುರದಲ್ಲಿ ಪ್ರಮುಖ ಪುನರಾಭಿವೃದ್ಧಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದ್ದು, ವಿಶ್ವ ದರ್ಜೆಯ ರೈಲು ನಿಲ್ದಾಣವನ್ನಾಗಿ ಮಾಡಲು 377 ಕೋಟಿ ರೂಪಾಯಿ ಹೂಡಿಕೆ ಮಾಡಲಾಗುತ್ತಿದೆ ಎಂದರು.
“ನಿಲ್ದಾಣದ ಎರಡೂ ಬದಿಗಳು ಸಂಪರ್ಕಗೊಳ್ಳಲಿದ್ದು, ಎರಡೂ ಬದಿಗಳು ಪ್ರವೇಶವನ್ನು ಹೊಂದಿರಲಿದ್ದು ಛಾವಣಿಯ ಪ್ಲಾಜಾ ಇರುತ್ತದೆ, ತುಂಬಾ ವಿಶಾಲವಾದ, ದೊಡ್ಡ ಛಾವಣಿಯ ಪ್ಲಾಜಾದಲ್ಲಿ ಜನರು ತುಂಬಾ ಆರಾಮದಾಯಕವಾಗಿ ಕಾಯಬಹುದಾಗಿದ್ದು, ಮಕ್ಕಳು ಆಟವಾಡಬಹುದು, ಸ್ಥಳೀಯ ಉತ್ಪನ್ನಗಳನ್ನು ಪ್ರದರ್ಶಿಸಬಹುದು ಮತ್ತು ಮಾರಾಟ ಮಾಡಬಹುದು. ಹಾಗಾಗಿ ಪ್ರಪಂಚದಾದ್ಯಂತ ನಾವು ನೋಡಿರುವ ಆಕರ್ಷಕ ರೀತಿಯಲ್ಲಿ ಯಶವಂತಪುರ ರೈಲು ನಿಲ್ದಾಣವನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ವೈಷ್ಣವ್ ವಿವರಿಸಿದರು.
ರೈಲ್ವೆ ನಿಲ್ದಾಣವನ್ನು ಬಳಸಿಕೊಂಡು ನಗರದ ಎರಡೂ ಬದಿಗಳನ್ನು ಸಂಪರ್ಕಿಸುವ ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿಯು ಸಾಕಾರಗೊಳ್ಳುತ್ತಿದೆ ಎಂದರು.