Advertisement

ಹಳದಿ ರೋಗ: ಸೌತೆಕಾಯಿ ಇಳುವರಿ ಕುಸಿತ

10:20 AM Oct 22, 2018 | |

ಆಲಂಕಾರು: ಗ್ರಾಮೀಣ ಪ್ರದೇಶದಲ್ಲಿ ಯಥೇತ್ಛವಾಗಿ ಬೆಳೆಯುತ್ತಿದ್ದ ಸೌತೆಕಾಯಿ ಸದ್ಯ ಬಹಳಷ್ಟು ವಿರಳವಾಗಿದೆ. ಸೌತೆಕಾಯಿ ಬಳ್ಳಿಗಳು ಹಳದಿ ರೋಗಕ್ಕೆ ತುತ್ತಾಗಿ ಅಪಾರ ಪ್ರಮಾಣದ ಬೆಳೆ ನಾಶವಾಗಿದೆ. ಮಾರುಕಟ್ಟೆಯಲ್ಲಿ ಸಿಗುವ ದುಬಾರಿ ಬೆಲೆಯ ಕೀಟನಾಶದಿಂದಲೇ ಬೆಳೆದಿರುವ ತರಕಾರಿಗಳಿಂದ ಜನತೆ ಈಗ ಸಾವಯವ ಗೊಬ್ಬರದ ಮೂಲಕ ಬೆಳೆಸುವ ತರಕಾರಿಗೆ ಹೆಚ್ಚು ಮಹತ್ವ ನೀಡುತ್ತಿದ್ದಾರೆ. ಇಂತಹ ತರಕಾರಿಗಳಲ್ಲಿ ಸೌತೆಕಾಯಿ ಪ್ರಧಾನವಾಗಿದೆ. ಸೌತೆಕಾಯಿ ಬಳ್ಳಿಗೆ ಹಳದಿ ಸೊರಗು ರೋಗ ಬಂದಿರುವುದರಿಂದ ಇಳುವರಿ ಕುಸಿದಿರುವ ಜೊತೆಗೆ ಬೆಳೆ ನಾಶವಾಗಿದೆ. ಈ ಕಾರಣದಿಂದಾಗಿಯೇ ಗ್ರಾಮೀಣ ಭಾಗದ ಸೌತೆಕಾಯಿ ಬೆಲೆ ಏರಿಕೆಯಾಗಿದೆ.

Advertisement

ಕಾಡು ಪ್ರಾಣಿ ಕಾಟ
ಅನ್ಯ ಕೃಷಿಯಂತೆ ಸೌತೆ ಕೃಷಿಗೂ ಪ್ರಾಕೃತಿಕವಾಗಿ ಬಹಳ ತೊಂದರೆಗಳಿವೆ. ಕಾಡು ನಾಶವಾಗಿ ಹಕ್ಕಿ, ನವಿಲುಗಳ ಉಪಟಳವಿದೆ. ಬಿತ್ತನೆ ಮಾಡಿದ ಬೀಜವನ್ನು ಗೆದ್ದಲು, ಇರುವೆ ಮೊಳಕೆಯೊಡೆಯುವ ಮೊದಲೇ ತಿಂದು ಮುಗಿಸಿದರೆ, ಮೊಳಕೆಯಲ್ಲೇ ತಿನ್ನುವ ಆಫ್ರಿಕನ್‌ ಬಸವನಹುಳುವಿನ ಕಾಟವೂ ಇದೆ. ಬೆಳೆದು ಫ‌ಸಲು ನೀಡಲು ತಯಾರಾದ ಬಳ್ಳಿಯನ್ನು ಕಾಡು ಹಂದಿ ತಿನ್ನುತ್ತದೆ. ಸೌತೆಕಾಯಿಯನ್ನು ನರಿ, ಮುಳ್ಳುಹಂದಿಗಳು ತಿಂದರೆ, ಹಗಲಿನಲ್ಲಿ ದಾಳಿ ಮಾಡುವ ನವಿಲುಗಳೂ ಸ್ವಾಹಾ ಮಾಡುತ್ತವೆ. ಈ ನಡುವೆ ಮಾರುಕಟ್ಟೆಯಲ್ಲಿ ಮೌಲ್ಯಾಧಾರಿತ ಬೆಲೆ ನೀಡದೆ ಸತಾಯಿಸುವ ಮಧ್ಯವರ್ತಿಗಳ ಕಾಟವೂ ತಪ್ಪಿಲ್ಲ.

ಬೇರು ರೋಗದ ಲಕ್ಷಣ
ಸೌತೆಕಾಯಿಗೆ ಬೇರು ರೋಗ ಬಂದಿರುವ ಲಕ್ಷಣಗಳಿವೆ. ಬಯೋಕ್ಯೂರ್‌ ಅನ್ನು ಕಾಂಪೋಸ್ಟ್‌ ಗೊಬ್ಬರಕ್ಕೆ ಮಿಶ್ರ ಮಾಡಿ ಹಾಕಬೇಕು. ಇದಕ್ಕೆ ಪ್ರಮಾಣದ ಅಗತ್ಯವಿಲ್ಲ. ಇದು ಬೇರು ರೋಗದ ಬ್ಯಾಕ್ಟೀರಿಯಾವನ್ನು ನಾಶ ಮಾಡುವ ಗೊಬ್ಬರವಾಗಿದೆ. ಬ್ಲಿಟೋಕ್ಸ್‌ ದ್ರಾವಣವನ್ನು 1ಲೀ. ನೀರಿಗೆ 2 ಗ್ರಾಂ. ಮಿಶ್ರಣ ಮಾಡಿ ಗಿಡಗಳಿಗೆ ನೀಡಿದರೂ ಆಗುತ್ತದೆ. ಬವಿಸ್ಟಿನ್‌ ಕೀಟನಾಶಕ ಹುಡಿಯನ್ನು 1 ಲೀ. ನೀರಿಗೆ 1 ಗ್ರಾಂ. ಮಿಶ್ರಣ ಮಾಡುವುದರಿಂದಲೂ ಬೇರು ರೋಗವನ್ನು ನಿಯಂತ್ರಿಸಬಹುದು.
ತಿಮ್ಮಪ್ಪ ಗೌಡ,
  ಕಡಬ ವಲಯ ಸಹಾಯಕ ಕೃಷಿ ಅಧಿಕಾರಿ

ಸದಾನಂದ ಆಲಂಕಾರು

Advertisement

Udayavani is now on Telegram. Click here to join our channel and stay updated with the latest news.

Next