ಮಂಗಳೂರು: ಕರಾವಳಿ ಭಾಗದ ಕೆಲವು ಕಡೆಗಳಲ್ಲಿ ಮುಂದಿನ ಎರಡು ದಿನಗಳ ಕಾಲ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆಯಂತೆ ಕರಾವಳಿಯಲ್ಲಿ ಎ.7ರಂದು ಎಲ್ಲೋ ಅಲರ್ಟ್ ಘೋಷಿಸಲಾಗಿದೆ. ಜಿಲ್ಲೆಯಲ್ಲಿ ಬುಧವಾರ ಮೋಡ ಮತ್ತು ಬಿಸಿಲಿನಿಂದ ಕೂಡಿದ ವಾತಾವರಣ ಇತ್ತು. ಸೆಕೆಯ ಬೇಗೆ ಹೆಚ್ಚು ಇತ್ತು. ಮಂಗಳೂರಿನಲ್ಲಿ 32.6 ಡಿ.ಸೆ. ಗರಿಷ್ಠ ಮತ್ತು 23.5 ಡಿ.ಸೆ. ಕನಿಷ್ಠ ತಾಪಮಾನ ದಾಖಲಾಗಿತ್ತು.
ಸುಳ್ಯ, ಸುಬ್ರಹ್ಮಣ್ಯ ಪರಿಸರದ ವಿವಿಧೆಡೆ ಮಳೆ
ಸುಬ್ರಹ್ಮಣ್ಯ/ಸುಳ್ಯ: ಸುಳ್ಯ ಹಾಗೂ ಕಡಬ ತಾಲೂಕಿನ ವಿವಿಧ ಕಡೆಗಳಲ್ಲಿ ಬುಧವಾರ ಸಂಜೆ ವೇಳೆ ಧಾರಕಾರ ಮಳೆಯಾಗಿದೆ.
ಕುಕ್ಕೆ ಸುಬ್ರಹ್ಮಣ್ಯ, ಹರಿಹರ ಪಲ್ಲತ್ತಡ್ಕ, ಕೊಲ್ಲಮೊಗ್ರು, ಐನೆಕಿದು, ಕಲ್ಮಕಾರು, ಯೇನೆಕಲ್ಲು, ಸಂಪಾಜೆ ಸೇರಿದಂತೆ ಸುಳ್ಯ ಹಾಗೂ ಕಡಬ ತಾಲೂಕಿನ ವಿವಿಧ ಕಡೆಗಳಲ್ಲಿ ಸಾಧಾರಣದಿಂದ ಧಾರಕಾರ ಮಳೆಯಾಯಿತು. ಬೆಳಗ್ಗೆಯಿಂದಲೇ ಮೋಡ ಕವಿದ ವಾತಾವರಣ ಕಂಡುಬಂದಿದ್ದು, ಸಂಜೆ ವೇಳೆ ಹಲವೆಡೆ ಗುಡುಗು ಆರಂಭಗೊಂಡಿದ್ದು ಬಳಿಕ ಮಳೆಯಾಗಿದೆ. ಕಳೆದ ಕೆಲವು ದಿನಗಳಿಂದ ವಿಪರೀತ ಉರಿ ಬಿಸಿಲು ಮತ್ತು ಉರಿ ಸೆಕೆಯ ವಾತಾವರಣ ಇತ್ತು. ಇದೀಗ ವರುಣಾಗಮನದಿಂದ ಬಿಸಿಲ ಬೇಗೆಗೆ ಬೆಂದು ಬರಡಾಗಿದ್ದ ಇಳೆಗೆ ತಂಪೆರೆದಂತಾಗಿದೆ.