Advertisement

Fengal Effect: ದ.ಕನ್ನಡ ಜಿಲ್ಲೆಯಲ್ಲಿ ಪ್ರಕೃತಿ ವಿಕೋಪ ಎದುರಿಸಲು ಸಜ್ಜಾಗಿ: ಯು.ಟಿ.ಖಾದರ್

10:32 PM Dec 02, 2024 | Team Udayavani |

ಮಂಗಳೂರು: ಫೈಂಜಾಲ್‌ ಚಂಡಮಾರುತ ಪರಿಣಾಮ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತೀವ್ರ ಮಳೆ‌ ಸುರಿಯುತ್ತಿರುವ ಹಿನ್ನೆಲೆಯಲ್ಲಿ ವಿಧಾನ‌ಸಭಾಧ್ಯಕ್ಷ ಯು.ಟಿ. ಖಾದರ್  ಸೋಮವಾರ ರೋಮ್ ನಿಂದ ನೇರವಾಗಿ ಕಲ್ಲಿಕೋಟೆ ಮೂಲಕ ಮಂಗಳೂರಿಗೆ ಆಗಮಿಸಿ ಜಿಲ್ಲೆಯ ಪ್ರಾಕೃತಿಕ ಸ್ಥಿತಿಗತಿ ಪರಿಶೀಲನೆ ನಡೆಸಿದರು.

Advertisement

ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು ಜಿಲ್ಲೆಯ ವಿವಿಧ ತಾಲೂಕು ಅಧಿಕಾರಿಗಳಿಂದ ವೀಡಿಯೋ ಸಂವಾದ ಮೂಲಕ ಪ್ರಾಕೃತಿಕ ವಿಕೋಪದ ಮಾಹಿತಿ ಪಡೆದು ಗುಡ್ಡ ಸಮೀಪ ಮನೆಯಲ್ಲಿ ವಾಸ್ತವ್ಯದಲ್ಲಿರುವವರಿಗೆ ಮುಂದಿನ ಎರಡು ದಿನಗಳವರೆಗೆ ತಂಗದಂತೆ ತಿಳಿಸಬೇಕು, ರಸ್ತೆ, ವಿದ್ಯುತ್ ತೊಂದರೆಗಳ ಎದುರಿಸಲು ಅಗತ್ಯ ಯಂತ್ರೋಪಕರಣಗಳೊಂದಿಗೆ ಸನ್ನದ್ಧರಾಗಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಮಾಲೀಕರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ:
ಪ್ರಕೃತಿ ವಿಕೋಪ ತೀವ್ರವಾಗಿರುವುದರಿಂದ ರೆಸಾರ್ಟ್‌ಗಳಿಗೆ ಬರುವ ಪ್ರವಾಸಿಗರಿಗೆ ವಾಸ್ತವ್ಯ ಹೂಡದಂತೆ ಮನವರಿಕೆ ಮಾಡಬೇಕು. ಒಂದು ವೇಳೆ ರೆಸಾರ್ಟ್‌  ನಲ್ಲಿ ಉಳಿದುಕೊಂಡು  ಪ್ರವಾಸಿಗರಿಗೆ ಯಾವುದೇ ಜೀವಹಾನಿಯಾದರೆ ಸಂಬಂಧಪಟ್ಟ ರೆಸಾರ್ಟ್‌ ಮಾಲೀಕರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಪೊಲೀಸ್ ಕಮೀಷನರ್ ಅನುಪಮ್ ಅಗರ್ ವಾಲ್, ಜಿಲ್ಲಾ ಪಂಚಾಯಿತಿ ಸಿಇಒ ಡಾ. ಆನಂದ್, ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಮತ್ತಿತರರಿದ್ದರು.

ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್‌ ಸೂಚನೆ
ಚಂಡಮಾರುತ ಪರಿಣಾಮ ಸುರಿಯುತ್ತಿರುವ ಮಳೆ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮಗಳನ್ನ ಕೈಗೊಳ್ಳುವಂತೆ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದ್ದಾರೆ. ಹವಾಮಾನ ಇಲಾಖೆಯ ಮುನ್ಸೂಚನೆಯಂತೆ, ಬಂಗಾಳ ಕೊಲ್ಲಿಯಲ್ಲಿ ಫೈಂಜಾಲ್‌ ಚಂಡಮಾರುತ ಉಂಟಾಗಿರುವ ಪರಿಣಾಮ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಸಾಧಾರಣದಿಂದ ಭಾರೀ ಮಳೆಯಾಗುವ ಸಾಧ್ಯತೆಗಳಿವೆ. ಭಾರೀ ಮಳೆಯಿಂದ ಎದುರಾಗಬಹುದಾದ ಪರಿಸ್ಥಿತಿಗಳ ನಿರ್ವಹಿಸಲು ಎಲ್ಲ ರೀತಿಯಲ್ಲಿ ಸಜ್ಜಾಗಿರುವಂತೆ ದೂರವಾಣಿ ಮೂಲಕ ಸಚಿವ ದಿನೇಶ್ ಗುಂಡೂರಾವ್ ಜಿಲ್ಲಾಧಿಕಾರಿಯವರಿಗೆ ಸೂಚನೆ ನೀಡಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next