Advertisement

ಯತ್ನಾಳ್,ಕಾಶಪ್ಪನವರ್ ಹೇಳಿಕೆ ಖಂಡನೀಯ : ಬಣಜಿಗರ ಕ್ಷಮೆ ಕೇಳಲು ಆಗ್ರಹ

08:06 PM Oct 23, 2022 | Team Udayavani |

ಕುಷ್ಟಗಿ:ಬಣಜಿಗ ಸಮಾಜದ ಬಗ್ಗೆ ಪಂಚಮಸಾಲಿ ಸಮಾಜದ ಮುಖಂಡರಾದ ವಿಜಯಪುರ ಶಾಸಕ ಬಸನಗೌಡ ಯತ್ನಾಳ್ ಹಾಗೂ ಹುನಗುಂದ ಮಾಜಿ ಶಾಸಕ ವಿಜಯಾನಂದ್ ಕಾಶಪ್ಪನವರ್ ಹುಕ್ಕೇರಿ ಸಮಾವೇಶದಲ್ಲಿ ನಾಲಿಗೆ ಹರಿಬಿಟ್ಟಿರುವುದು ಖಂಡನೀಯ. ಕೂಡಲೇ ಬಣಜಿಗ ಸಮಾಜದ ಕ್ಷಮೆ ಕೇಳದೇ ಇದ್ದಲ್ಲಿ ಹೋರಾಟ ತೀವ್ರಗೊಳಿಸುವುದಾಗಿ ಕುಷ್ಟಗಿ ತಾಲೂಕಾ ಬಣಜಿಗ ಸಮಾಜ ಎಚ್ಚರಿಸಿದೆ.

Advertisement

ಭಾನುವಾರ ಸಂಜೆ ಕುಷ್ಟಗಿಯ ಎಪಿಎಂಸಿ ಗಂಜ್ ಯಾರ್ಡಿನ ಮುದಕಪ್ಪ ಜಿಗಜಿನ್ನಿ ಅವರ ಅಡತಿ ಅಂಗಡಿಯಲ್ಲಿ ಕುಷ್ಟಗಿ ತಾಲೂಕಾ ಬಣಜಿಗ ಸಮಾಜದ ಅಧ್ಯಕ್ಷ ವಿಶ್ವನಾಥ ಕನ್ನೂರು ನೇತೃತ್ವದಲ್ಲಿ ತುರ್ತು ಸಭೆ ನಡೆಯಿತು. ಸಭೆಯಲ್ಲಿ ಹುಕ್ಕೇರಿಯಲ್ಲಿ ನಡೆದ ಪಂಚಮಸಾಲಿ ಸಮಾಜ 2-ಎ ಮೀಸಲಾತಿಗಾಗಿ ಹೋರಾಟದ ಸಮಾವೇಶದಲ್ಲಿ ವಿಜಯಪುರ ಗ್ರಾಮೀಣ ಶಾಸಕ ಬಸನಗೌಡ ಯತ್ನಾಳ್ , ಹುನಗುಂದ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್ ಅವರು ಬಣಜಿಗ ಸಮಾಜದ ಬಗ್ಗೆ ಹಗುರವಾಗಿ ಮಾತನಾಡಿರುವುದು ಬಣಜಿಗ ಸಮಾಜದ ಮನಸ್ಸುಗಳಿಗೆ ನೋವಾಗಿದೆ. ಬಣಜಿಗ ಸಮಾಜವು ಮಠ ಮಾನ್ಯಗಳು, ಶಿಕ್ಷಣ, ಆರೋಗ್ಯ ಸೇವೆಯಲ್ಲಿ ಸಾಮಾಜಿಕ ಜವಾಬ್ದಾರಿ ನಿರ್ವಹಿಸಿದ್ದು, ಈ ಸಮಾಜದ ಬಗ್ಗೆ ಮಾತನಾಡುವಷ್ಟು ನೈತಿಕತೆ ಇವರಿಗೆ ಇಲ್ಲ. ಬಣಜಿಗ ಹಾಗೂ ಪಂಚಮಸಾಲಿ ಸಮಾಜದಲ್ಲಿ ಭಿನ್ನ ಬೇಧ ಎಂದೂ ಮಾಡಿಲ್ಲ. ಅಣ್ಣ ತಮ್ಮಂದಿರಂತೆ ಜೀವನ ನಡೆಸುವ ಸಮಾಜದಲ್ಲಿ ಇಂತವರ ಹೇಳಿಕೆಗಳು ಅವರ ನೀಚ ಮನಃಸ್ಥಿತಿ ತೆರೆದಿಟ್ಟಿದೆ. ಕೂಡಲೇ ಈ ಇಬ್ಬರು ನಾಯಕರು ಬಣಜಿಗ ಸಮಾಜದ ಕ್ಷಮೆ ಕೇಳಲೇಬೇಕು ಇಲ್ಲವಾದರೆ ಉಗ್ರ ಹೋರಾಟ ಅನಿವಾರ್ಯವಾಗಲಿದೆ ಎಂದು ಬಣಜಿಗ ಸಮಾಜ ಅಧ್ಯಕ್ಷ ವಿಶ್ವನಾಥ ಕನ್ನೂರು ಎಚ್ಚರಿಸಿದರು.

ಈ ವೇಳೆ ಬಣಜಿಗ ಸಮಾಜ ರಾಜ್ಯ ಕಾರ್ಯಕಾರಿ ಮಂಡಳಿ ಸದಸ್ಯ ಬಸವರಾಜ್ ಕುದರಿಮೋತಿ, ನಿಕಟಪೂರ್ವ ಅಧ್ಯಕ್ಷ ಬಸೆಟೆಪ್ಪ ಕುಂಬಳಾವತಿ, ತಾಲೂಕಾ ಘಟಕದ ಉಪಾಧ್ಯಕ್ಷ ಉಮೇಶ ಅಕ್ಕಿ, ಶರಣಪ್ಪ ಲಿಂಗಶೆಟ್ಟರ್, ಮುದಕಪ್ಪ ಜಿಗಜಿನ್ನಿ, ಅಜ್ಜಪ್ಪ ಕಲಕಬಂಡಿ, ದೊಡ್ಡಪ್ಪ ಕುಡತಿನಿ, ರಾಜಶೇಖರ ವಕ್ರಾಣಿ, ರಾಜು ಜಿಗಜಿನ್ನಿ, ಮಹೇಶ ಓತಗೇರಿ, ಬಸವರಾಜ್ ಪಡಿ, ಶಶಿಧರ ಶೆಟ್ಟರ್, ಶರಣಪ್ಪ ಹೊಸವಕ್ಕಲ್, ವೀರೇಶ ಕರಡಿ ಮತ್ತಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next