Advertisement

ಚಿಕ್ಕಮ್ಯಾಗೇರಿ ಸರ್ಕಾರಿ ಪಪೂ ಕಾಲೇಜಿಗೆ ಸೌಲಭ್ಯ ಮರೀಚಿಕೆ

10:38 AM Feb 06, 2019 | |

ಯಲಬುರ್ಗಾ: ಕುಳಿತು ಪಾಠ ಆಲಿಸಲು ಕಟ್ಟಡವಿಲ್ಲ, ಖಾಲಿ ಬಿದ್ದಿವೆ ಉಪನ್ಯಾಸಕರ ಹುದ್ದೆಗಳು, ಮಳೆಗಾಲದಲ್ಲಿ ಸೋರುವ ಒಂದೇ ಕೊಠಡಿ, ಕೊಠಡಿಯಲ್ಲಿ ಇಕ್ಕಟ್ಟಿನಲ್ಲಿ ಅಭ್ಯಾಸ ಮಾಡುವ ವಿದ್ಯಾರ್ಥಿಗಳು.

Advertisement

ಇದು ಮೂಲ ಸೌಲಭ್ಯಗಳ ಕೊರತೆ ನಡುವೆ ನಿಂತಿರುವ ತಾಲೂಕಿನ ಚಿಕ್ಕಮ್ಯಾಗೇರಿ ಸರಕಾರಿ ಪದವಿ ಪೂರ್ವ ಕಾಲೇಜಿನ ದುಸ್ಥಿತಿ. ಗ್ರಾಮಕ್ಕೆ 2018ರಲ್ಲಿ ಹೊಸ ಪದವಿ ಪೂರ್ವ ಕಾಲೇಜು ಮಂಜೂರಾಗಿದೆ. ಮೂಲ ಸೌಲಭ್ಯಗಳಿಲ್ಲದೆ ನರಳುತ್ತಿದೆ. ಗ್ರಾಮದ ಸರಕಾರಿ ಪ್ರೌಢ ಶಾಲೆಯಲ್ಲಿ ಕಾಲೇಜು ನಡೆಯುತ್ತಿದೆ.

ಸದ್ಯ ಕಾಲೇಜಿನಲ್ಲಿ ಪ್ರಥಮ ಪಿಯುಸಿಯಲ್ಲಿ 20 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಕಾಲೇಜಿಗೆ ಒಬ್ಬರು ಕಾಯಂ ಉಪನ್ಯಾಸಕರು ಇಲ್ಲ. ತಾಲೂಕಿನ ಬಂಡಿ, ಬೇವೂರು, ಮಂಗಳೂರು ಇನ್ನಿತರ ಸ್ಥಳಗಳಿಂದ ನಿಯೋಜನೆ ಮೇಲೆ ವಾರಕ್ಕೆ ಮೂರು ದಿನ ಕರ್ತವ್ಯ ನಿರ್ವಹಿಸಲು 6 ಜನ ಉಪನ್ಯಾಸಕರು ಬರುತ್ತಾರೆ.

ಶೌಚಾಲಯವೇ ಇಲ್ಲ: ಈ ಕಾಲೇಜಿಗೆ ಶೌಚಾಲಯ ಇಲ್ಲ. ಹೀಗಾಗಿ ಉಪನ್ಯಾಸಕರು ಸೇರಿದಂತೆ ವಿದ್ಯಾರ್ಥಿಗಳಿಗೆ ಬಯಲಿಗೆ ಹೋಗಬೇಕಾದ ಅನಿವಾರ್ಯತೆ ಉಂಟಾಗಿದೆ. ಪ್ರಸಕ್ತ ಸರಕಾರದ ಆದೇಶಾನುಸಾರ ಗಣಕಯಂತ್ರವುಳ್ಳ ಬಯೋಮೆಟ್ರಿಕ್‌ ಕಡ್ಡಾಯವಾಗಿ ಹಾಕುವಂತೆ ಆದೇಶವಿದೆ. ಆದರೆ ಸ್ವಂತ ಕಟ್ಟಡವಿಲ್ಲದ ಕಾಲೇಜಿಗೆ ಇದು ತಲೆನೋವಾಗಿ ಪರಿಣಮಿಸಿದೆ.

ಸೌಲಭ್ಯಗಳ ಕೊರತೆ: ಕಾಲೇಜಿಗೆ ಕಟ್ಟಡ ಸಮಸ್ಯೆ ಒಂದಡೆಯಾದರೇ ವಿದ್ಯಾರ್ಥಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಇಲ್ಲದಂತಾಗಿದೆ. ವಿದ್ಯಾರ್ಥಿಗಳು ಕಾಲೇಜಿಗೆ ಬರುವಾಗ ಮನೆಯಿಂದ ಬಾಟಲ್‌ ತರುವ ಸ್ಥಿತಿ ನಿರ್ಮಾಣವಾಗಿದೆ. ನಮಗೆ ಕೊಠಡಿಗಳ ಸಮಸ್ಯೆ ಇದೆ. ಶೌಚಾಲಯ ಇಲ್ಲದೆ ಬಯಲಿಗೆ ತೆರಳುವುದು ಅನಿವಾರ್ಯವಾಗಿದೆ. ಆಟದ ಮೈದಾನವಿಲ್ಲ. ಇದರಿಂದ ಅಭ್ಯಾಸಕ್ಕೆ ತೊಂದರೆಯಾಗುತ್ತಿದೆ ಎನ್ನುತ್ತಾರೆ ವಿದ್ಯಾರ್ಥಿಗಳು.

Advertisement

ಕಟ್ಟಡ ಕಾಮಗಾರಿ ನನೆಗುದಿಗೆ: ಚಿಕ್ಕಮ್ಯಾಗೇರಿ ಪದವಿ ಪೂರ್ವ ಕಾಲೇಜು ಕಟ್ಟಡ ನಿರ್ಮಾಣಕ್ಕೆ ಹೈ.ಕ ಪ್ರದೇಶಾಭಿವೃದ್ಧಿ ಮಂಡಳಿ ಯೋಜನೆಯಡಿಯಲ್ಲಿ 1.40 ಕೋಟಿ ಅನುದಾನ ಬಿಡುಗಡೆಯಾಗಿದೆ. ಕಾಮಗಾರಿ ಉಸ್ತುವಾರಿ ಹೊತ್ತ ಕೆಆರ್‌ಐಡಿಎಲ್‌ ಬೇಜವಾಬ್ದಾರಿ ನಿರ್ಲಕ್ಷ್ಯದಿಂದ ಕಟ್ಟಡ ಮೇಲೆಳುವ ಯಾವ ಲಕ್ಷಣಗಳು ಗೋಚರಿಸುತ್ತಿಲ್ಲ.

ಕಾಲೇಜು ಆರಂಭವಾಗಿ ವರ್ಷ ಕಳೆದರೂ ಪದವಿ ಪೂರ್ವ ಶಿಕ್ಷಣ ಇಲಾಖೆ ವತಿಯಿಂದ ಕಾಲೇಜು ಮೇಲುಸ್ತುವರಿಗಾಗಿ ಇದುವರೆಗೂ ಅನುದಾನ ಬಿಡುಗಡೆಯಾಗಿಲ್ಲ. ಉಪನ್ಯಾಸಕರು ತಮ್ಮ ಸ್ವಂತ ಹಣದಿಂದಲೇ ಕಾಲೇಜಿಗೆ ಅವಶ್ಯವಿರುವ ವಸ್ತುಗಳನ್ನು ತಂದುಕೊಂಡಿದ್ದಾರೆ. ಅನುದಾನ ಬಿಡುಗಡೆಗೆ ಮೇಲಧಿಕಾರಿಗಳಿಗೆ ಮನವಿ ಮಾಡಿಕೊಂಡರು ಯಾವುದೇ ಪ್ರಯೋಜನ ಇಲ್ಲದಂತಾಗಿದೆ ಎನ್ನುತ್ತಾರೆ ಉಪನ್ಯಾಸಕರು.

ಪ್ರೌಢಶಾಲೆಯ ಕಟ್ಟಡದ ಕೊಠಡಿಯೊಂದರಲ್ಲಿ ಕಾಲೇಜು ನಡೆಸುತ್ತಿದ್ದೇವೆ. ಸರ್ಕಾರದಿಂದ ಅನುದಾನ ಬಿಡುಗಡೆಯಾಗಿಲ್ಲ. ಮೂಲ ಸೌಲಭ್ಯಕ್ಕೆ ಈಗಾಗಲೇ ಮೇಲಧಿಕಾರಿಗಳಿಗೆ ಮನವಿ ಮಾಡಿದ್ದೇನೆ.
• ಶರಣಪ್ಪ ತಟ್ಟಿ,
ಪ್ರಭಾರಿ ಪ್ರಾಚಾರ್ಯ, ಸರಕಾರಿ ಪಪೂ ಕಾಲೇಜು.

ಕಟ್ಟಡ ಕಾಮಗಾರಿ ವಿಳಂಬ ಮಾಡದಂತೆ ಈಗಾಗಲೇ ಜಿಲ್ಲಾಧಿಕಾರಿಗಳು ಕಾಮಗಾರಿ ಹೊಣೆ ಹೊತ್ತ ಕೆಆರ್‌ಐಡಿಎಲ್‌ ಕಂಪನಿಗೆ ಸೂಚನೆ ನೀಡಿದ್ದಾರೆ. ಹೊಸ ಕಾಲೇಜು ಆದ್ದರಿಂದ ಸರ್ಕಾರದಿಂದ ಕಾಲೇಜು ಕೋಡ್‌, ಖಜಾನೆ ಕೋಡ್‌ ಬಂದಿಲ್ಲ. ಹೀಗಾಗಿ ಕಾಲೇಜಿನ ಮೇಲುಸ್ತುವಾರಿಗಾಗಿ ಯಾವುದೇ ಅನುದಾನ ಬಿಡುಗಡೆಯಾಗಿಲ್ಲ. ಶೀಘ್ರದಲ್ಲೇ ಸರ್ಕಾರದಿಂದ ಕೋಡ್‌ ಮಂಜೂರಾತಿ ಸಿಗಲಿದೆ. ಮುಂದಿನ ಶೈಕ್ಷಣಿಕ ವರ್ಷದಿಂದ ಎಲ್ಲ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ.
• ಎಲ್‌.ಜಿ. ರಾಟಿಮನಿ,
ಪ್ರಭಾರಿ ಉಪನಿರ್ದೇಶಕರು, ಡಿಡಿಪಿಯು, ಕೊಪ್ಪಳ.

ಮಲ್ಲಪ್ಪ ಮಾಟರಂಗಿ

Advertisement

Udayavani is now on Telegram. Click here to join our channel and stay updated with the latest news.

Next