ಯಾದಗಿರಿ: ಈ ಹಿಂದೆಯೇ ನಿರೀಕ್ಷೆಯಂತೆ ಯಾದಗಿರಿ ಜಿಲ್ಲೆಯಲ್ಲಿ ಕೋವಿಡ್ ಪತ್ತೆಯಾಗದೇ ಸೇಫ್ ಝೋನ್‌ನಲ್ಲಿದ್ದರೂ ಮುನ್ನೆಚ್ಚರಿಕೆಯಾಗಿ ಜಿಲ್ಲಾಡಳಿತ ತೂಗಿ ಅಳೆದು ಏ.22ರ ಮಧ್ಯರಾತ್ರಿಯಿಂದ ಅನ್ವಯವಾಗುವಂತೆ ನಿಯಮ ಸಡಿಲಿಕೆ ಮಾಡಿದೆ.
ಸರ್ಕಾರದ ಹೊಸ ಆದೇಶದಲ್ಲಿ ಕೆಲವೊಂದು ಸಡಿಲಿಕೆ ನೀಡಿದ ಪ್ರಯುಕ್ತ ಕೋವಿಡ್ ವೈರಸ್ ಸೋಂಕು ಹರಡದಂತೆ ಜಿಲ್ಲೆಯ ಎಲ್ಲ ಭಾಗಗಳಲ್ಲಿ ಏಪ್ರಿಲ್ 14ರಿಂದ ಮೇ 3ರ ವರೆಗೆ ಜಾರಿಗೊಳಿಸಿದ ಲಾಕ್ ಡೌನ್ ಆದೇಶಕ್ಕೆ ಬದಲಾವಣೆ ತರುವ ಜತೆಗೆ ನಿಗದಿಪಡಿಸಿದ ಸಮಯಗಳಲ್ಲಿ ಬದಲಾವಣೆ ಮಾಡಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.
ಕೋವಿಡ್ ರೋಗಾಣು ಹರಡುವ ಹಿನ್ನೆಲೆಯಲ್ಲಿ ಸರ್ಕಾರ ತುರ್ತು ಪರಿಸ್ಥಿತಿ ಘೋಷಿಸಿದೆ. ನೆರೆ ಜಿಲ್ಲೆ ಮತ್ತು ನೆರೆ ರಾಜ್ಯಗಳ ಜಿಲ್ಲೆಗಳಲ್ಲಿ ಸೋಂಕು ಪೀಡಿತರ ಸಂಖ್ಯೆ ಹೆಚ್ಚಳವಾಗುತ್ತಿದ್ದು, ನೆರೆ ರಾಜ್ಯಗಳ ಜಿಲ್ಲೆಗಳಿಂದ ಯಾದಗಿರಿ ಜಿಲ್ಲೆಗೆ ಪ್ರಯಾಣಿಕರ ಓಡಾಟದಿಂದಾಗಿ ವ್ಯಕ್ತಿಯಿಂದ ವ್ಯಕ್ತಿಗೆ ಈ ಸಾಂಕ್ರಾಮಿಕ ರೋಗ ಹರಡುವ ಸಾಧ್ಯತೆ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಕಠಿಣ ನಿರ್ಧಾರ ಕೈಗೊಂಡಿದೆ.
ನಿಯಮ ಸಡಿಲಿಕೆ ಮೊದಲ ದಿನವಾದ ಗುರುವಾರ ಕೃಷಿ ಹಾಗೂ ತೋಟಗಾರಿಕೆಗೆ ಸಂಬಂಧಿಸಿದ ಎಲ್ಲ ಚಟುವಟಿಕೆಗಳಿಗೆ ಬೇಕಾಗುವ ರಸಗೊಬ್ಬರ, ಕೀಟನಾಶಕಗಳು ಮತ್ತು ಬೀಜಗಳ ಉತ್ಪಾದನೆ ವಿತರಣೆ ಮತ್ತು ಚಿಲ್ಲರೆ ಅಂಗಡಿಗಳು ಯಂತ್ರೋಪಕರಣಗಳ ಹಾಗೂ ಅದರ ಬಿಡಿಭಾಗಗಳನ್ನು ಪೂರೈಕೆ, ರಿಪೇರಿ ಸೇರಿದಂತೆ ಅವಶ್ಯಕವಿರುವ ಅಂಗಡಿಗಳನ್ನು ಆರಂಭಿಸಲಾಗಿದೆ. ವ್ಯಾಪಾರ ವಹಿವಾಟು ಮಂದಗತಿಯಲ್ಲಿ ಸಾಗಿತ್ತು. ಬೆಳಗ್ಗೆ 11:00ರಿಂದ 3:00ರ ವರಗೆ ಸಮಯ ನಿಗದಿ ಮಾಡಿರುವುದು ಕೃಷಿ ಚಟುವಟಿಕೆ ಸರಕು ಮಾರಾಟ ಅಂಗಡಿಗಳಿಗೆ ಬೆಳಗ್ಗೆಯಿಂದಲೇ ತೆರೆಯಲು ಅನುಕೂಲ ಮಾಡಬೇಕು ಎನ್ನುವ ಮಾತುಗಳು ಕೇಳಿಬಂತು. ಇನ್ನು ಸಾಮಾಜಿಕ ಅಂತರವನ್ನು ಕಾಪಾಡಲು ಅಂಗಡಿಯವರು ಕ್ರಮವಹಿಸಿದ್ದು ಕಂಡು ಬಂತು. ಅಗತ್ಯ ವಸ್ತುಗಳ ಖರೀದಿಗೆ ಜನರು ಮನೆಯಿಂದ ಹೊರಬಂದರು ಈ ಹಿಂದಿನಿಂದಲೂ ನಿಷೇದಾಜ್ಞೆ ಅವಧಿಯಲ್ಲಿ ಜಿಲ್ಲಾದ್ಯಂತ ಬೆಳಗ್ಗೆ 4:00ರಿಂದ ಮಧ್ಯಾಹ್ನ 3:00ರ ವರೆಗೆ ಮಾತ್ರ ದಿನಬಳಕೆ ದಿನಸಿ, ತರಕಾರಿ, ಹಾಲು, ಹಣ್ಣು ಹಂಪಲುಗಳು ಹಾಗೂ ಅತ್ಯವಶ್ಯಕ ಇನ್ನಿತರೆ ಅಂಗಡಿಗಳಿಗೆ ಅವಕಾಶ ನೀಡಲಾಗಿದೆ. ಈ ವೇಳೆ ಸಾಮಾಜಿಕ ಅಂತರ ಕಾಪಾಡಲಾಗುತ್ತಿದೆ.
ಕೋವಿಡ್ ವೈರಸ್ ಪ್ರಕರಣ ಪತ್ತೆಯಾಗದಿದ್ದರೂ ಅದರ ಭಯ ಮಾತ್ರ ಜನರಲ್ಲಿ ಕಾಡುತ್ತಿದ್ದು ಕಡ್ಡಾಯವಾಗಿ ಮಾಸ್ಕ್ ಧರಿಸಿಯೇ ಹೊರಬರುತ್ತಿದ್ದಾರೆ. ಸರ್ಕಾರ ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದಂತೆ ನಿಯಮ ಸಡಿಲಗೊಳಿಸಲಾಗಿದೆ. ಜಿಲ್ಲೆಯಲ್ಲಿ ಎಲ್ಲ ಚಟುವಟಿಕೆಗಳಿಗೆ ಬೇಕಾಗುವ ಸಿಮೆಂಟ್, ಕಬ್ಬಿಣ, ಹಾರ್ಡ್‌ವೇರ್, ಪ್ಲಂಬರಿಂಗ್ ಹಾಗೂ ಅದಕ್ಕೆ ಸಂಬಂಧಿಸಿದ ಇನ್ನಿತರೆ ವಸ್ತುಗಳ ಅಂಗಡಿಗಳು ಸಹ ಬೆಳಗ್ಗೆ 11:00ರಿಂದ ಮಧ್ಯಾಹ್ನ 3:00ರ ವರೆಗೆ ಅವಕಾಶ ನೀಡಲಾಗಿದೆ. ಆದರೇ ಗುರುವಾರ ಅದ್ಯಾವ ಅಂಗಡಿಗಳು ತೆರೆದಿರುವುದು ಕಂಡು ಬರಲಿಲ್ಲ. ಬಹುತೇಕ ಶುಕ್ರವಾರ ಎಲ್ಲ ವ್ಯಾಪಾರ ವಹಿವಾಟು ಆರಂಭಗೊಳ್ಳುವ ನಿರೀಕ್ಷೆಯಿದೆ. ಇನ್ನು ಆಸ್ಪತ್ರೆ ಸೇವೆಗಳು, ಪಶು ಆಸ್ಪತ್ರೆಗಳು, ಔಷಧಿ ಅಂಗಡಿಗಳು ಇತ್ಯಾದಿ ತುರ್ತು ಸೇವೆಗಳಿಗೆ ಎಂದಿನಂತೆ ಜನರಿಗೆ ದೊರೆತವು.
ಸರ್ಕಾರದ ಹೊಸ ಆದೇಶದಲ್ಲಿ ಕೆಲವೊಂದು ಸಡಿಲಿಕೆ ನೀಡಿದ ಪ್ರಯುಕ್ತ ಕೊರೊನಾ ವೈರಸ್ ಸೋಂಕು ಹರಡದಂತೆ ಜಿಲ್ಲೆಯ ಎಲ್ಲ
ಭಾಗಗಳಲ್ಲಿ ಏಪ್ರಿಲ್ 14ರಿಂದ ಮೇ 3ರ ವರೆಗೆ ಜಾರಿಗೊಳಿಸಿದ ಲಾಕ್ ಡೌನ್ ಆದೇಶಕ್ಕೆ ಬದಲಾವಣೆ ತರುವ ಜತೆಗೆ ನಿಗದಿಪಡಿಸಿದ ಸಮಯಗಳಲ್ಲಿ ಬದಲಾವಣೆ ಮಾಡಿ ಏಪ್ರಿಲ್ 22ರ ಮಧ್ಯರಾತ್ರಿಯಿಂದ ಮೇ 3ರ ಮಧ್ಯರಾತ್ರಿಯವರೆಗೆ ಅನ್ವಯವಾಗುವಂತೆ ನಿಯಮ ಸಡಿಲಿಕೆ ಮಾಡಿ ಆದೇಶಿಸಲಾಗಿದೆ. ನೆರೆ ರಾಜ್ಯದ ಜಿಲ್ಲೆಗಳಲ್ಲಿ ಕೊರೊನಾ ಸೋಂಕಿತರು ಹೆಚ್ಚುತ್ತಿರುವುದರಿಂದ ಮುನ್ನೆಚ್ಚರಿಕೆಯಾಗಿ ಕಠಿಣ ಕ್ರಮಕೈಗೊಳ್ಳುವುದು ಅನಿವಾರ್ಯವಾಗಿದೆ.
ಎಂ. ಕೂರ್ಮಾರಾವ್,
ಜಿಲ್ಲಾಧಿಕಾರಿಗಳು