ನಟ ಕಮ್ ನಿರ್ದೇಶಕ ಅನಿರುದ್ಧ ಜತಕರ ಇದೀಗ ಖುಷಿಯ ಮೂಡ್‌ನಲ್ಲಿದ್ದಾರೆ. ಅವರ ಖುಷಿಗೆ ಕಾರಣ, ಅವರ ಹೆಸರಿಗೆ ಒಂದಲ್ಲ, ಎರಡಲ್ಲ, ನಾಲ್ಕು “ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್’ ಆಗಿರೋದು. ಹೌದು. ಅವರು ಇತ್ತೀಚೆಗೆ ಕಿರುಚಿತ್ರಗಳನ್ನು ನಿರ್ದೇಶಿಸಿ, ಪ್ರದರ್ಶನ ಮಾಡಿದ್ದು ಎಲ್ಲರಿಗೂ ಗೊತ್ತು. ಆ ಕಿರುಚಿತ್ರಗಳಿಗೆ ಈ ದಾಖಲೆ ಸೇರಿಕೊಂಡಿದೆ. ಅಷ್ಟಕ್ಕೂ “ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್’ಗೆ ಕಾರಣವೇನೆಂದರೆ, ಮೊದಲನೆಯದು ಅವರು ಕೀರ್ತಿ ಇನ್ನೋವೇಶನ್ಸ್ ಬ್ಯಾನರ್‌ನಡಿ ನಿರ್ಮಾಣಗೊಂಡ ಆರು ಕಿರುಚಿತ್ರಗಳನ್ನು ರಚಿಸಿ, ನಿರ್ದೇಶಿಸಿ, ಒಂದೇ ದಿನ ಬಿಡುಗಡೆ ಮಾಡಿದ್ದು.
ಎರಡನೆಯದು ಸಾಮಾಜಿಕ ಸಮಸ್ಯೆ ಬಿಂಬಿಸುವ ಆರು ಕಿರುಚಿತ್ರಗಳನ್ನು ಒಂದೇ ದಿನ ಪ್ರದರ್ಶನ ಮಾಡಿದ್ದು. ಮೂರನೆಯದ್ದು, ಅವರು ನಿರ್ದೇಶಿಸಿದ ಆರು ಕಿರುಚಿತ್ರಗಳಲ್ಲಿ ಯಾವುದೇ ಸಂಭಾಷಣೆ ಇಲ್ಲದೆ, ಕೇವಲ ದೃಶ್ಯರೂಪವನ್ನು ತೆರೆಮೇಲೆ ಅನಾವರಣಗೊಳಿಸಿದ್ದು. ಇನ್ನು, ಒಂದೇ ದಿನ ಬೇರೆ ಬೇರೆ ಶೈಲಿಯ ಆರು ಕಿರುಚಿತ್ರಗಳನ್ನು ಚಿತ್ರೀಕರಿಸಿ, ಅವುಗಳನ್ನು ಒಂದೇ ದಿನ ಬಿಡುಗಡೆ ಮಾಡಿದ್ದರ ಹಿನ್ನೆಲೆಯಲ್ಲಿ “ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್’ಗೆ ಅನಿರುದ್ಧ ಹೆಸರು ದಾಖಲಾಗಿದೆ.
ಈ ಕುರಿತು “ಉದಯವಾಣಿ’ ಜೊತೆ ಮಾತನಾಡಿದ ಅನಿರುದ್ಧ, “ನಿಜವಾಗಿಯೂ ನಾನು ಇದನ್ನೆಲ್ಲಾ ನಿರೀಕ್ಷಿಸಿರಲಿಲ್ಲ. ನನ್ನ ಹೆಸರು “ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್’ಗೆ ಸೇರಿಕೊಂಡಿದ್ದಕ್ಕೆ ಕನ್ನಡಿಗನಾಗಿ, ಕನ್ನಡ ಕಲಾವಿದನಾಗಿ ಹೆಮ್ಮೆ ಆಗುತ್ತಿದೆ. ಡಾ.ವಿಷ್ಣುವರ್ಧನ್ ಅವರ ಆಶೀರ್ವಾದ, ಕೀರ್ತಿ ಇನ್ನೋವೇಶನ್ಸ್ ತಂಡದ ಬೆಂಬಲ ಹಾಗೂ ಕುಟುಂಬದ ಪ್ರೋತ್ಸಾಹದಿಂದ ಇದೆಲ್ಲಾ ಸಾಧ್ಯವಾಗಿದೆ.
ನಾನು ಕನ್ನಡ ಮಾತ್ರವಲ್ಲ, ಇಂಗ್ಲೀಷ್‌ನಲ್ಲೂ ಕಿರುಚಿತ್ರಗಳನ್ನು ನಿರ್ದೇಶಿಸಿದ್ದೇನೆ. ನಾನು ಮಾಡಿದ ಕಿರುಚಿತ್ರಗಳಲ್ಲಿ ಸಂಭಾಷಣೆಯ ಅಗತ್ಯ ಇರಲಿಲ್ಲ. ಎಲ್ಲವನ್ನೂ ದೃಶ್ಯರೂಪವೇ ಕಟ್ಟಿಕೊಡುವಂತಿದ್ದರಿಂದ ಮಾತುಗಳನ್ನು ಕಟ್ಟಿಕೊಡದೆ, ಚಿತ್ರೀಕರಿಸಿದ್ದೇನೆ. ಇನ್ನು, ಸಾಮಾಜಿಕ ಸಮಸ್ಯೆ ಬಿಂಬಿಸುವ ವಿಷಯ ಇಟ್ಟುಕೊಂಡು ಮಾಡಿದ್ದು ಪ್ಲಸ್ ಎನಿಸಿದೆ. ಮುಂದಿನ ದಿನಗಳಲ್ಲಿ ಸಿನಿಮಾ ನಿರ್ದೇಶನ ಮಾಡುವ ಯೋಚನೆಯೂ ಇದೆ. ಎಲ್ಲದ್ದಕ್ಕೂ ಕಾಲ ಕೂಡಿ ಬರಬೇಕಿದೆ’ ಎನ್ನುತ್ತಾರೆ ಅನಿರುದ್ಧ.