Advertisement

Dakshina Kannada; ಆರು ತಿಂಗಳ ಅಂತರದಲ್ಲಿ ಮತ್ತೊಂದು ದೊಡ್ಡ ದರೋಡೆ

12:33 AM Jan 05, 2025 | Team Udayavani |

ಮಂಗಳೂರು: ವಿಟ್ಲ ಪೊಲೀಸ್‌ ಠಾಣಾ ವ್ಯಾಪ್ತಿಯ ಬೋಳಂತೂರಿನಲ್ಲಿ ಶುಕ್ರವಾರ ರಾತ್ರಿ ನಡೆದ ದರೋಡೆ ಪ್ರಕರಣವು ಜಿಲ್ಲೆಯಲ್ಲಿ ಕಳೆದ ಆರು ತಿಂಗಳ ಅವಧಿಯಲ್ಲಿ ನಡೆದಿರುವ ಮತ್ತೊಂದು ದೊಡ್ಡ ರೀತಿಯ ದರೋಡೆ ಪ್ರಕರಣ ಎನ್ನಲಾಗಿದೆ.

Advertisement

ಕಳೆದ ವರ್ಷ ಜೂ. 21ರಂದು ನಗರದ ಹೊರವಲಯದ ಉಳಾಯಿಬೆಟ್ಟು ಪೆರ್ಮಂಕಿಯಲ್ಲಿ ಉದ್ಯಮಿ ಪದ್ಮನಾಭ ಕೋಟ್ಯಾನ್‌ ಅವರ ಮನೆಗೆ ರಾತ್ರಿ 7.45ರ ಸುಮಾರಿಗೆ ನುಗ್ಗಿದ್ದ ದರೋಡೆಕೋರರು ಲಕ್ಷಾಂತರ ರೂ. ನಗದು ಹಾಗೂ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣಗಳನ್ನು ದರೋಡೆ ಮಾಡಿದ್ದರು. ಇನ್ನೋವಾ ಕಾರಿನಲ್ಲಿ ಬಂದಿದ್ದ ದರೋಡೆ ಕೋರರು ಕೋಟ್ಯಂತರ ರೂ. ದೋಚುವ ಯೋಜನೆಯಲ್ಲಿ ಹಲವು ಗೋಣಿಚೀಲಗಳನ್ನು ತಂದಿದ್ದರು. ಈ ಸಂಬಂಧ ಸ್ಥಳೀಯ ನಾಲ್ವರು ಮತ್ತು ಕೇರಳದ 6 ಮಂದಿಯನ್ನು ಪೊಲೀಸರು ಬಂಧಿಸಿದ್ದರು. ಕೋಟ್ಯಾನ್‌ ಅವರ ಲಾರಿಯ ಚಾಲಕನಾಗಿದ್ದ ಸ್ಥಳೀಯನೋರ್ವನೇ ದರೋ ಡೆಯ ಸಂಚು ರೂಪಿಸಿದ್ದು ಬಯಲಾಗಿತ್ತು.

ಭೀತಿ ಮೂಡಿಸಿದ್ದ ‘ಚಡ್ಡಿಗ್ಯಾಂಗ್‌’
ಕಳೆದ ಜುಲೈಯಲ್ಲಿ ಮಧ್ಯಪ್ರದೇಶದ ಕುಖ್ಯಾತ ‘ಚಡ್ಡಿಗ್ಯಾಂಗ್‌’ ಮಂಗಳೂರು ನಗರದ ಹಲವೆಡೆ ಮನೆಗಳಲ್ಲಿ ಕಳ್ಳತನ ನಡೆಸಿತ್ತು. ತಡರಾತ್ರಿ ನಗರದ ಕೋಟೆಕಣಿಯ ಮನೆಯೊಂದರ ಕಿಟಕಿ ಸರಳುಗಳನ್ನು ಮುರಿದು ಒಳಗೆ ನುಗ್ಗಿ ಮನೆ ಮಂದಿಗೆ ಹಲ್ಲೆ ನಡೆಸಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ, ಮೊಬೈಲ್‌ ದೋಚಿ ಪರಾರಿಯಾಗಿತ್ತು. ಪೊಲೀಸರು ಕ್ಷಿಪ್ರ ಕಾರ್ಯಾ ಚರಣೆ ನಡೆಸಿ ಚಡ್ಡಿಗ್ಯಾಂಗ್‌ನ ನಾಲ್ವರನ್ನು ಬಂಧಿಸಿದ್ದರು.

ಮಣೂರಿನಲ್ಲೂ ಇಂಥ ಕೃತ್ಯಕ್ಕೆ ಯತ್ನ ನಡೆದಿತ್ತು
ಕುಂದಾಪುರ: ಕೆಲವು ತಿಂಗಳುಗಳ ಹಿಂದೆ ಕುಂದಾಪುರ ಸಮೀಪದ ಮಣೂರಿನ ಉದ್ಯಮಿಯೊಬ್ಬರ ಮನೆಯಲ್ಲೂ ಅಪರಿಚಿತರ ತಂಡ ಇದೇ ರೀತಿಯ ಕೃತ್ಯಕ್ಕೆ ಪ್ರಯತ್ನಿಸಿತ್ತು. ಬೆಳ್ಳಂಬೆಳಗ್ಗೆ ಎರಡು ಕಾರುಗಳಲ್ಲಿ ಪೊಲೀಸ್‌ ಹಾಗೂ ಅಧಿಕಾರಿಗಳ ಸೋಗಿನಲ್ಲಿ ಬಂದಿದ್ದ ತಂಡ ಆತಂಕದ ವಾತಾವರಣ ಉಂಟು ಮಾಡಿತ್ತು. ಮಣೂರು ಗ್ರಾಮದ ಕವಿತಾ (34) ಅವರು ಜು. 25ರಂದು ಬೆಳಗ್ಗೆ 8.30 ಗಂಟೆಗೆ ಮನೆಯಲ್ಲಿದ್ದಾಗ ಯಾರೋ ಬಾಗಿಲು ಬಡಿದ ಶಬ್ದವಾಗಿತ್ತು. ಆಗ ಆಕೆ ನಿರ್ಲಕ್ಷಿಸಿದ್ದು, 9 ಗಂಟೆಗೆ ಹೊರಗೆ ಬಂದು ನೋಡಿದಾಗ ಯಾರೂ ಇರಲಿಲ್ಲ. ಈ ನಡುವೆ ಮನೆಯ ಸಿಸಿಟಿವಿ ಮೇಲೆ ನಿಗಾ ಇಡುತ್ತಿರುವ ಕುಂದಾಪುರದ ಸೈನ್‌ ಇನ್‌ ಸೆಕ್ಯುರಿಟಿ ಸಂಸ್ಥೆಯವರು ಕರೆ ಮಾಡಿ, ನಿಮ್ಮ ಮನೆಗೆ ಸ್ವಿಫ್ಟ್‌ ಮತ್ತು ಇನ್ನೋವಾ ಕಾರಿನಲ್ಲಿ 6-8 ಜನ ಮಂದಿ ಆಗಮಿಸಿ ಗೇಟು ತೆರೆಯಲು ಯತ್ನಿಸಿದ್ದರು. ಸಾಧ್ಯವಾಗದಿದ್ದಾಗ ಕಾಂಪೌಂಡ್‌ ಹಾರಿ ಮನೆಗೆ ಬಂದು ಬಾಗಿಲು ಹಾಗೂ ಕಿಟಕಿಯನ್ನು ಬಲಾತ್ಕಾರವಾಗಿ ತೆಗೆಯಲು ಪ್ರಯತ್ನಿಸಿರುವುದಾಗಿ ತಿಳಿಸಿದ್ದರು. ಅಪರಿಚಿತರು ಮನೆಗೆ ಅಕ್ರಮ ಪ್ರವೇಶ ಮಾಡಿ, ಮನೆಯ ಬಾಗಿಲು ತೆರೆಯಲು ಯತ್ನಿಸಿ, ಗೇಟಿಗೆ ಹಾನಿ ಮಾಡಿ ಹೋಗಿರುವುದಾಗಿ ತಿಳಿಸಿದ್ದಾರೆ ಎಂದು ದೂರಿತ್ತಿದ್ದರು. ಈ ಪ್ರಕರಣದಲ್ಲಿ ಆರೋಪಿಗಳ ಬಂಧನವಾಗಿದೆ.

ಆನ್‌ಲೈನ್‌, ಆಫ್ಲೈನ್‌ನಲ್ಲೂ ನಕಲಿ ಅಧಿಕಾರಿಗಳಿಂದ ಲೂಟಿ !
ಸಿಬಿಐ ಅಧಿಕಾರಿಗಳು, ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು, ಜಾರಿ ನಿರ್ದೇಶನಾಲಯದ ಅಧಿಕಾರಿಗಳು, ಕ್ರೈಂ ಬ್ರಾಂಚ್‌ನವರು… ಹೀಗೆಲ್ಲ ಹೇಳಿಕೊಂಡು ಇತ್ತೀಚೆಗೆ ಆನ್‌ಲೈನಲ್ಲಿ ನಡೆಯುತ್ತಿರುವ ಕೋಟ್ಯಂ ತರ ರೂ. ಸೈಬರ್‌ ವಂಚನೆ ಪ್ರಕರಣಗಳ ಜತೆಗೆ ಈಗ ಆಫ್ಲೈನ್‌ನಲ್ಲೂ ತನಿಖಾ ಸಂಸ್ಥೆಗಳ ಹೆಸರಿನಲ್ಲಿ ದರೋಡೆ ರೀತಿಯ ವಂಚನೆಗಳು ನಡೆಯುತ್ತಿರು ವುದಕ್ಕೆ ಬೋಳಂತೂರು ಘಟನೆ ಉದಾಹರಣೆ.

Advertisement

ನಿಮ್ಮ ಹೆಸರಿನಲ್ಲಿ ಪಾರ್ಸೆಲ್‌ ಬಂದಿದೆ, ನಿಮ್ಮ ಮಕ್ಕಳು ಅಪರಾಧ ಕೃತ್ಯದಲ್ಲಿ ಭಾಗಿಯಾಗಿದ್ದಾರೆ, ನಿಮ್ಮ ಮೊಬೈಲ್‌ನ ಸಂಖ್ಯೆ ಅಪರಾಧ ಕೃತ್ಯಗಳಲ್ಲಿ ಬಳಕೆಯಾಗಿದೆ ಎಂದೆಲ್ಲ ಹೇಳಿ ಭಯ ಹುಟ್ಟಿಸಿ ಅನಂತರ “ನಾವು ನಿಮ್ಮನ್ನು ನೀವು ಇರುವ ಸ್ಥಳದಿಂದಲೇ ವಿಚಾರಣೆ ನಡೆಸುತ್ತೇವೆ. ನಾವು ಸಿಬಿಐನವರು, ಜಾರಿ ನಿರ್ದೇಶನಾಲಯದವರು’ ಎನ್ನುವ ಸೈಬರ್‌ ವಂಚಕರು ಕೋಟ್ಯಂತರ ರೂ. ದೋಚುತ್ತಾರೆ. ಅಗತ್ಯವಾದರೆ ವೀಡಿಯೋ ಕರೆಯಲ್ಲಿ ಪೊಲೀಸ್‌ ಠಾಣೆಯ ದೃಶ್ಯವನ್ನು, ವಿಚಾರಿಸುತ್ತಿರುವವರು ಸಮವಸ್ತ್ರದಲ್ಲಿರುವುದನ್ನು ಕೂಡ ಬಿಂಬಿಸುತ್ತಾರೆ. ನಾನಾ ಒತ್ತಡ ತಂತ್ರ ಗಳನ್ನು ಬಳಸಿ ಸಂತ್ರಸ್ತರ ಖಾತೆಯಿಂದಲೇ ಹಣ ವರ್ಗಾಯಿಸಿಕೊಳ್ಳುತ್ತಾರೆ. ಇಲ್ಲಿ ಬಳಕೆಯಾಗು ವುದು ಕೂಡ ಉನ್ನತ ತನಿಖಾ ಸಂಸ್ಥೆ, ತನಿಖಾ ಅಧಿಕಾರಿಗಳ ಹೆಸರು, ಹುದ್ದೆ. ಇಂತಹುದೇ ಘಟನೆಗಳ “ಯಶಸ್ಸನ್ನು’ ಬೋಳಂತೂರು ಘಟನೆಯಲ್ಲೂ ಲೂಟಿಕೋರರು ಅನುಸರಿಸಿ ಅದನ್ನು ಆಫ್ಲೈನ್‌ನಲ್ಲಿಯೇ ಮಾಡಿದಂತಾಗಿದೆ!

ಪೊಲೀಸರ ಎಚ್ಚರಿಕೆ
ಯಾವುದೇ ಅಧಿಕಾರಿ ಅಥವಾ ತನಿಖಾ ಸಂಸ್ಥೆಗಳ ಹೆಸರಿನಲ್ಲಿ ಯಾರಾದರೂ ಬಂದರೆ ಸಾರ್ವಜನಿಕರು ಕೂಡಲೇ ಪೊಲೀಸರಿಗೆ ತಿಳಿಸಬೇಕು. ಆಗ ಅವರು ಅಧಿಕೃತ ವ್ಯಕ್ತಿಗಳು ಹೌದೇ ಅಲ್ಲವೆ ಎಂಬುದನ್ನು ಖಚಿತಪಡಿಸಿಕೊಳ್ಳಬಹುದು ಎಂದು ಪೊಲೀಸಧಿಕಾರಿಗಳು ತಿಳಿಸಿದ್ದಾರೆ.

ಶೀಘ್ರ ಬಂಧನ: ಎಸ್‌ಪಿ
ಬೋಳಂತೂರು ಘಟನೆಯ ತನಿಖೆ ನಡೆಯುತ್ತಿದೆ. ಆದಷ್ಟು ಬೇಗ ಆರೋಪಿಗಳನ್ನು ಬಂಧಿಸುವ ಭರವಸೆ ಇದೆ. ಆರೋಪಿಗಳು ನಗದು ಕೊಂಡೊಯ್ದಿದ್ದಾರೆ. ಸುಲೈಮಾನ್‌ ಅವರಿಗೆ ಬೀಡಿ ಫ್ಯಾಕ್ಟರಿ ಇದೆ. ಸುಮಾರು 80 ಎಕ್ರೆ ಅಡಿಕೆ ತೋಟವಿದೆ. ಅದರ ವ್ಯವಹಾರದಿಂದ ಬಂದ ದುಡ್ಡು ಎಂದಿದ್ದಾರೆ. ಮರು ದಿನ ಶನಿವಾರವಾಗಿದ್ದರಿಂದ ಕಾರ್ಮಿಕ‌ರಿಗೆ ನೀಡಲು ಮನೆಯಲ್ಲಿ ಹಣ ತಂದಿಟ್ಟಿರುವುದಾಗಿ ಹೇಳಿದ್ದಾರೆ. ಆರೋಪಿಗಳು ಮನೆಯನ್ನು ಹೇಗೆ ಆಯ್ಕೆ ಮಾಡಿಕೊಂಡಿದ್ದಾರೆ. ಅವರಿಗೆ ಮಾಹಿತಿ ನೀಡಿದವರು ಯಾರು ಎಂಬ ಬಗ್ಗೆಯೂ ವಿವರ ಸಂಗ್ರಹಿಸಲಾಗುತ್ತಿದೆ.
ಯತೀಶ್‌ ಎನ್‌. ಎಸ್‌ಪಿ, ದ.ಕ

Advertisement

Udayavani is now on Telegram. Click here to join our channel and stay updated with the latest news.

Next