Advertisement

ವಿಶ್ವ ತಾಪಮಾನ ಏರಿಕೆ, ಸಾಗರದಲೆಗಳ ಅಬ್ಬರ: ಡಾ|ಎಂ. ಬಾಬು

12:58 PM Mar 18, 2017 | |

ಮೂಡಬಿದಿರೆ: “ವಿಶ್ವದ ತಾಪಮಾನ 4ರಿಂದ 5 ಶತಾಂಶದಷ್ಟು ಏರಿಕೆಯಾಗುತ್ತಿದೆ. ಅನಿರೀಕ್ಷಿತ ಪ್ರವಾಹ, ಅಕಾಲಿಕ, ಅವ್ಯವಸ್ಥಿತ, ಬಿರುಸಿನ ಮಳೆ ನಮ್ಮೆಲ್ಲ ಲೆಕ್ಕಾಚಾರಗಳನ್ನು ಬುಡಮೇಲು ಮಾಡುತ್ತಿದೆ. ಸಮುದ್ರದಲೆಗಳು ಒಂದು ಮೀಟರ್‌ನಷ್ಟು ಏರಿಕೆಯಾಗಿ ಅಬ್ಬರಿಸುವ ಸಂಭಾವ್ಯ ಅಪಾಯವಿದೆ. ನಮ್ಮ ಎಂಜಿನಿಯರಿಂಗ್‌ನಲ್ಲಿ ವಿಶೇಷವಾಗಿ ಸಿವಿಲ್‌ ಎಂಜಿನಿಯ ರಿಂಗ್‌ನಲ್ಲಿ ಇದಕ್ಕೆಲ್ಲ ಉತ್ತರವಿದೆಯೇ?’

Advertisement

ಹೀಗೆಂದು ಪ್ರಶ್ನಿಸಿದವರು ಕೇರಳ ತಿರುವನಂತಪುರದ ನ್ಯಾಶನಲ್‌ ಸೆಂಟರ್‌ ಫಾರ್‌ ಅರ್ತ್‌ ಸೈನ್ಸ್‌ ಸ್ಟಡೀಸ್‌ನ ಪೂರ್ವ ನಿರ್ದೇಶಕ ಡಾ| ಎಂ. ಬಾಬು.ಬಡಗ ಮಿಜಾರಿನಲ್ಲಿರುವ ಮಂಗಳೂರು ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ ಆ್ಯಂಡ್‌ ಎಂಜಿನಿಯರಿಂಗ್‌ನ ದಶಮಾನೋತ್ಸವದಂಗ ವಾಗಿ ಸಿವಿಲ್‌ ಎಂಜಿನಿಯರಿಂಗ್‌ ವಿಭಾಗವು “ಮೈಟ್‌’ನ ಲೋಕಲ್‌ ಕೆಫೆಟ್‌ ಇನ್ನೋವಾ ಟೆಕ್ನಿಕಲ್‌ ಸೊಸೈಟಿಯ ಆಶ್ರಯದಲ್ಲಿ ಏರ್ಪಡಿಸಲಾಗಿರುವ “ಸುಸ್ಥಿರ ಅಭಿವೃದ್ಧಿ ಮತ್ತು ಹವಾಮಾನ ಬದಲಾವಣೆ: ವಿಶ್ವ ಸಿವಿಲ್‌ ಎಂಜಿನಿಯರಿಂಗ್‌ನೆದುರಿನ ಸವಾಲುಗಳು’ ಕುರಿತಾದ ಅಂತಾರಾಷ್ಟ್ರೀಯ ದ್ವಿದಿನ ಸಮ್ಮೇಳನ (ಐಸಿಜಿಸಿಎಸ್‌ಸಿ-17)ವನ್ನು ಶುಕ್ರವಾರ ಉದ್ಘಾಟಿಸಿದರು.

ಸಮುದ್ರ ಕೊರೆತ ವಿಪರೀತ ಕಾಡುವ ಸಮಸ್ಯೆಯಾಗಿದೆ. 2 ಟನ್‌ ತೂಕದ ಕಲ್ಲುಗಳನ್ನು ಪೇರಿಸಲಾಗುವ ಈಗಿನ ತಾಂತ್ರಿಕತೆ ಏನೇನೂ ಸಾಲದು. 16 ಟನ್‌ ತೂಕದ ಕಲ್ಲುಗಳು ಖಂಡಿತ ಬೇಕಾಗುತ್ತವೆ. ಇಷ್ಟೊಂದು ಭಾರದ ಕಲ್ಲುಗಳೆಲ್ಲಿ ಲಭ್ಯ? ಲಭ್ಯವಿದ್ದರೂ ಸಾಗಿಸುವ, ಪೇರಿಸುವ ಬಗೆಯೆಂತು? ಇಂಥ ಸವಾಲು, ಸಮಸ್ಯೆಗಳು ಸಿವಿಲ್‌ ಎಂಜಿನಿಯರಿಂಗ್‌ ತಂತ್ರಜ್ಞರನ್ನು ಕಾಡುವುದು ಸಹಜವೇ ಆಗಿದೆ. ಜಲವಿದ್ಯುತ್‌, ಉಷ್ಣ ವಿದ್ಯುತ್‌ ಬದಲಿಗೆ ಸೂರ್ಯ ಶಕ್ತಿ, ಪವನ ಶಕ್ತಿಯನ್ನು ಬಳಸುವ ಬಗ್ಗೆ ಹೆಚ್ಚಿನ ಒತ್ತು ನೀಡಲಾಗುತ್ತಿರುವಂತೆಯೇ ಮರಳಿನ ವಿಪರೀತ ಬಳಕೆಯಾಗುತ್ತಿರುವ ಈ ಕಾಲದಲ್ಲಿ ಮರಳನ್ನು ಪಡೆಯುವ ವಿಧಾನದಲ್ಲೂ ಬದಲಾವಣೆ ಕಾಣಬೇಕಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

ಸುಸ್ಥಿರ ಅಭಿವೃದ್ಧಿ ಮತ್ತು ಹವಾಮಾನ ಬದಲಾವಣೆಯ ವಿಷಯದಲ್ಲಿ ಬಹಳಷ್ಟು ಮಾಹಿತಿ ಕಲೆ ಹಾಕುವ, ವೈಜ್ಞಾನಿಕವಾಗಿ ಅಧ್ಯಯನ ಮಾಡದೆ ಯಾವುದೇ ಯೋಜನೆ ಹಾಕಿಕೊಂಡರೆ ಪ್ರಯೋಜನವಿಲ್ಲ’ ಎಂದು ಡಾ| ಬಾಬು ಒತ್ತಿ ಹೇಳಿದರು.

ಸಂಸ್ಥೆಯ ಸಲಹೆಗಾರ ಪ್ರೊ| ಜಿ.ಆರ್‌. ರೈ ಅವರು ಮಾತನಾಡಿ, “ನಿರಾಶಾವಾದ ಬೇಡ, ಆಶಾವಾದಿಗಳಾಗಿ ಚಿಂತಿಸೋಣ’ ಎಂದರು.

Advertisement

ದಶಮ ಸಂಭ್ರಮ
ಸಂಸ್ಥೆಯ ಅಧ್ಯಕ್ಷ ರಾಜೇಶ್‌ ಚೌಟ ಅಧ್ಯಕ್ಷತೆ ವಹಿಸಿದ್ದರು. ದಶಮ ವರ್ಷಕ್ಕೆ ಕಾಲಿರಿಸಿರುವ “ಮೈಟ್‌’ ಅತಿ ಮಹತ್ವದ ವಿಷಯದೊಂದಿಗೆ ಅಂತಾರಾಷ್ಟ್ರೀಯ ಸಮ್ಮೇಳನವನ್ನು ಏರ್ಪಡಿಸುತ್ತಿರುವುದು ಸಂಸ್ಥೆಯ ಪ್ರಗತಿಯ ಸೂಚಕ ವಾಗಿದೆ. 189 ವಿದ್ಯಾರ್ಥಿಗಳೊಂದಿಗೆ ಪ್ರಾರಂಭವಾದ “ಮೈಟ್‌’ 7 ಪದವಿ, 7 ಸ್ನಾತಕೋತ್ತರ ಎಂಜಿನಿಯರಿಂಗ್‌ ಪದವಿ, ಎಂಬಿಎ ಶಿಕ್ಷಣ ವಿಭಾಗಗಳನ್ನು ಹೊಂದಿದ್ದು ವಿಶ್ವೇಶ್ವರಯ್ಯ ಟೆಕ್ನಾಲಜಿಕಲ್‌ ಯೂನಿವರ್ಸಿಟಿಯ ಮಾನ್ಯತೆ ಯೊಂದಿಗೆ 30 ಸಂಶೋಧನಾ ವಿದ್ಯಾರ್ಥಿಗಳ ಸಹಿತ 3,200ಕ್ಕೂ ಅಧಿಕ ಮಂದಿ ಇಲ್ಲಿ ಅಧ್ಯಯನ ನಡೆಸುತ್ತಿದ್ದಾರೆ. ಸಮ್ಮೇಳನಗಳು ಕೇವಲ ವರದಿ, ಲೇಖನ ಪ್ರಕಟನೆಗಳಲ್ಲಿ ಮುಗಿಯದೆ ಒಟ್ಟಾರೆಯಾಗಿ, ಅಂತಿಮವಾಗಿ ಸಮಾಜಕ್ಕೆ ಎಷ್ಟರ ಮಟ್ಟಿಗೆ ಪ್ರಯೋಜನ ವಾದೀತು ಎಂದು ಗಂಭೀರವಾಗಿ ಚಿಂತಿಸ ಬೇಕಾಗಿದೆ. ಎಲ್ಲ ಎಂಜಿನಿಯರಿಂಗ್‌ ವಿಭಾಗಗಳ ಮಾತೆಎನಿಸಿರುವ ಸಿವಿಲ್‌ ಎಂಜಿನಿಯ ರಿಂಗ್‌ ಪ್ರಾಕೃತಿಕ ವಿಕೋಪ, ಹವಾಮಾನ ಬದಲಾವಣೆ, ವಿಶ್ವ ತಾಪಮಾನ ಏರಿಕೆಗಳಂಥ ಸಮಸ್ಯೆಗಳ ಬಗ್ಗೆ ಈ ಸಮ್ಮೇಳನದಲ್ಲಿ ಉತ್ತರ ಕಂಡುಕೊಳ್ಳಲಿ’ ಎಂಬ ಆಶಯ ವ್ಯಕ್ತಪಡಿಸಿದರು.

ಪ್ರಾಚಾರ್ಯ ಡಾ| ಜಿ.ಎಲ್‌. ಈಶ್ವರ ಪ್ರಸಾದ್‌ ಸಂಸ್ಥೆಯ ಶೈಕ್ಷಣಿಕ ಬೆಳವಣಿಗೆಗಳ ಬಗ್ಗೆ ವಿವರಣೆ ನೀಡಿದರು. ಸಮ್ಮೇಳನಾಧ್ಯಕ್ಷ, ಸುರತ್ಕಲ್‌ ಎನ್‌ಐಟಿಕೆಯ ಡಾ| ವೆಂಕಟರೆಡ್ಡಿ, ತಾಂತ್ರಿಕ ಸಭಾಪತಿ ಎನ್‌ಐಟಿಕೆಯ ಡಾ| ದ್ವಾರಕೀಶ್‌ ಜಿ.ಎಸ್‌. ವೇದಿಕೆಯಲ್ಲಿದ್ದರು.

ಬಿಡುಗಡೆ
ರಾಜೇಶ್‌ ಚೌಟ ಅವರು ಸಮ್ಮೇಳನದ ನಡಾವಳಿಗಳ ಪುಸ್ತಿಕೆ, ಡಾ| ಎಂ. ಬಾಬು ಅವರುಸಿಡಿ, ಪ್ರೊ| ಜಿ.ಆರ್‌. ರೈ ಅವರು ಐಜೆಇಇ ಜರ್ನಲ್‌ ಮತ್ತು ಎಂಜಿನಿಯರಿಂಗ್‌ ಜಿಯೋಲ ಜಿಯ ಪಠ್ಯಪುಸ್ತಕ ಬಿಡುಗಡೆಗೊಳಿಸಿದರು.

ದಿಕ್ಸೂಚಿ ಭಾಷಣಗಾರರಾಗಿ ಆಗಮಿಸಿದ್ದ ಸ್ಪೈನ್‌ನ ಸೆವೆಲ್ಲೆ ವಿ.ವಿ.ಯ ಪ್ರೊ|  ಪಲೋಮ ಪಿನೆಡಾ, ಜಪಾನ್‌ನ ಕುಮಮೊಟೋ ವಿ.ವಿ.ಯ ಶ್ಯುಚಿ ಟೊರಿಲ್‌, ವಿವಿಧ ವಿಚಾರಗೋಷ್ಠಿಗಳ ಸಭಾಪತಿಗಳಾಗಿರುವ ಸುರತ್ಕಲ್‌ ಎನ್‌ಐಟಿಕೆಯ ಡಾ| ಕಟ್ಟಾ ವೆಂಕಟರಮಣ, ಮಂಗಳೂರಿನ ಡಾ| ಪ್ರೇಮಾನಂದ ಶೆಣೈ, ಡಾ. ಲಕ್ಷ್ಮೀಕಾಂತ್‌, ಬೆಂಗಳೂರಿನ ಡಾ| ಡಿ.ಆರ್‌. ರವಿ, ಮೈಸೂರಿನ ಡಾ| ಎಚ್‌. ಎಸ್‌. ಪ್ರಸನ್ನ, ಮುಂಬೈಯ ಡಾ| ಟಿ.ಎನ್‌. ಸಿಂಗ್‌, ಎನ್‌ಐಟಿಕೆಯ ಡಾ| ಎಂ.ಕೆ. ನಾಗರಾಜ್‌, ಬೆಂಗಳೂರು ಇಸ್ರೋ ಸ್ಯಾಟಲೈಟ್‌ ಕೇಂದ್ರದ ಡಾ| ವಿವೇಕ್‌ ಕುಮಾರ್‌ ಗೌತಮ್‌, ದೇಶ ವಿದೇಶಗಳಿಂದ ಆಗಮಿಸಿದ ಪ್ರತಿನಿಧಿಗಳು ಭಾಗವಹಿಸಿದ್ದರು.

ಕೆನರಾ ಬ್ಯಾಂಕ್‌ ಮುಖ್ಯ ಪ್ರಾಯೋಜಕತ್ವ ನೀಡಿದ್ದು ಸಾಯಿ ಕ್ಯಾಡ್‌, ಆ್ಯಸೆಸ್‌, ಎಂಸಿಎಫ್‌, ಲಾರೆನ್ಸ್‌ ಆ್ಯಂಡ್‌ ಮೇಯೋ, ಎನ್‌ಎಂಪಿಟಿ, ಇಕೋ ಗ್ರೀನ್‌ ಈ ಸಮ್ಮೇಳನಕ್ಕೆ ಬೆಂಬಲ ನೀಡಿವೆ.

ಸಮ್ಮೇಳನದ ಸಂಘಟನಾಧ್ಯಕ್ಷ, “ಮೈಟ್‌’ ಸಿವಿಲ್‌ ವಿಭಾಗ ಮುಖ್ಯಸ್ಥ ಡಾ| ಗಣೇಶ್‌ ಮೊಗವೀರ ಸ್ವಾಗತಿಸಿದರು. ಕಾರ್ಯದರ್ಶಿ, ಸಿವಿಲ್‌ ವಿಭಾಗದ ಸೀನಿಯರ್‌ ಅಸಿಸ್ಟೆಂಟ್‌ ಪ್ರೊಫೆಸರ್‌ ಡಾ| ಜಯಪ್ರಕಾಶ್‌ ಎಂ.ಸಿ. ವಂದಿಸಿದರು. ಕಂಪ್ಯೂಟರ್‌ ಸೈನ್ಸ್‌ ವಿಭಾಗದ ಅಸಿಸ್ಟೆಂಟ್‌ ಪ್ರೊಫೆಸರ್‌ ರೆನಿಟಾ ನಿರೂಪಿಸಿದರು.
 

Advertisement

Udayavani is now on Telegram. Click here to join our channel and stay updated with the latest news.

Next