Advertisement

ಬಸವಣ್ಣನನ್ನು ವಿಶ್ವವೇ ಅರ್ಥೈಸಿಕೊಂಡಿದೆ: ಡಾ.ಶಿವಪ್ರಕಾಶ

04:40 PM Oct 15, 2017 | |

ಮುಂಬಯಿ: ಬಸವ ಇಂಟರ್‌ನ್ಯಾಷನಲ್‌ ಫೌಂಡೇಷನ್‌, ಅಖೀಲ ಭಾರತ ಶರಣ ಸಾಹಿತ್ಯ ಪರಿಷತ್ತು ಮತ್ತು ಮೈಸೂರು ಅಸೋಸಿಯೇಶನ್‌ ಮುಂಬಯಿ ಹಾಗೂ ಕನ್ನಡ ವಿಭಾಗ ಮುಂಬಯಿ ವಿಶ್ವವಿದ್ಯಾಲಯ ಇವುಗಳ ಸಂಯುಕ್ತ ಆಶ್ರಯದಲ್ಲಿ “ವರ್ತಮಾನಕ್ಕೆ ಸಲ್ಲುವ ಬಸವಣ್ಣ’ ವಿಚಾರ ಸಂಕಿರಣ ಕಾರ್ಯಕ್ರಮವು ಅ. 14ರಂದು ಪೂರ್ವಾಹ್ನ ಮಾಟುಂಗಾ ಪೂರ್ವದ ಭಾವುದಾಜಿ ರಸ್ತೆಯ ಮೈಸೂರು ಅಸೋಸಿಯೇಶನ್‌  ಸಭಾಗೃಹದಲ್ಲಿ ನಡೆಯಿತು.

Advertisement

ಅಖೀಲ ಭಾರತ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಾ| ಬಸವರಾಜ ಸಾದರ ಅವರು ಅಧ್ಯಕ್ಷತೆಯಲ್ಲಿ ಕಾರ್ಯಕ್ರಮವು ಜರಗಿತು. ಜೆಎನ್‌ಯು ದೆಹಲಿ ಪ್ರಾಧ್ಯಾಪಕ ಡಾ| ಎಚ್‌.ಎಸ್‌ ಶಿವಪ್ರಕಾಶ ದೀಪ ಪ್ರಜ್ವಲಿಸಿ ಉದ್ಘಾಟಿಸಿ ಮಾತನಾಡಿ, ಬಸವಣ್ಣರು ಯಾವತ್ತೂ ದಿವಂಗತರಲ್ಲ. ಅವರು ಬುದ್ಧಿಜೀವಿಗಳ ಬದುಕು ಬೆಳಗಿಸಿದ ಧೀಶಕ್ತಿಯಾಗಿದ್ದಾರೆ. ಅವರು ಇತಿಹಾಸದ ಭಾಗವಲ್ಲದಿದ್ದರೂ ವರ್ತಮಾನದ ಭಾಗವಾಗಿ ಮನುಕುಲ ಸಂಕುಲಕ್ಕೆ ಮಾದರಿಯಾಗಿದ್ದಾರೆ. ಅವರನ್ನು ವಿವಿಧ ರೀತಿಗಳಲ್ಲಿ ಕಂಡವರು ನಮ್ಮಲ್ಲಿದ್ದಾರೆ. ಆಳುವವನಿಗೆ ಮತ್ತು ಆಳಿಸಿಕೊಳ್ಳುವನು ಎಲ್ಲರಿಗೂ ಬಸವಣ್ಣ ಬೇಕಾದವರು. ಕಾರಣ ಇಡೀ ವಿಶ್ವ ಬಸವಣ್ಣರನ್ನು ಅರ್ಥ ಮಾಡಿಕೊಂಡಿದೆ. ಹಾಗಾಗಿ ಇಂದಿಗೂ ಬಸವಣ್ಣರು ಚಾಲ್ತಿಯಲ್ಲಿದ್ದಾರೆ. ಇದಕ್ಕೆ ಮಹಾರಾಷ್ಟ್ರ ಸರಕಾರ ಬಸವಣ್ಣರ ಭಾವಚಿತ್ರವನ್ನು ಎಲ್ಲ ಸರಕಾರಿ ಕಚೇರಿಗಳಲ್ಲಿರಿಸಲು ಆಜ್ಞೆ   ಮಾಡಿರುವುದೇ ಅವರ ಆದರ್ಶಕ್ಕೆ ಸಾಕ್ಷಿ. ಇಂತಹ ಇತಿಹಾಸದ ಬಸವಣ್ಣರ ಬಾಳು ಸರ್ವರಿಗೂ ಮಾದರಿ ಎಂದರು.

ಅತಿಥಿಗಳಾಗಿ ಬಸವ ಇಂಟರ್‌ನ್ಯಾಷನಲ್‌ ಫೌಂಡೇಷನ್‌ ಅಧ್ಯಕ್ಷ ಎಸ್‌. ಮಹದೇವಯ್ಯ ಲಂಡನ್‌ ಉಪಸ್ಥಿತರಿದ್ದರು. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ| ಎಸ್‌. ಜಿ. ಸಿದ್ಧರಾಮಯ್ಯ ಅವರು “ಬಸವಣ್ಣ ಆತ್ಮ ವಿಮರ್ಶೆ’ ವಿಚಾರದಲ್ಲಿ ವಿಶೇಷ ಉಪನ್ಯಾಸ ನೀಡಿದರು.

ಕೆ. ವಿ.  ನಾಗರಾಜ ಮೂರ್ತಿ ಅವರು ಪ್ರಾಸ್ತಾವಿಕ ನುಡಿಗಳನ್ನಾಡಿ,  ಬಸವಣ್ಣರು ಜೀವನ ಕಾಲಕ್ಕಿಂತ ಹೆಚ್ಚು ಈ ಯುಗದಲ್ಲಿ ಪ್ರಸಿದ್ಧರಿದ್ದಾರೆ. ಅವರ ವಿಚಾರಧಾರೆ ಈ ನಾಡಿಗೆ ಅತ್ಯಂತ ಮುಖ್ಯ. ಅವರ ಬದುಕು ಸಮಯೋಚಿತವಾಗಿ  ಚರ್ಚಿತವಾಗಿದೆ. ಸಮರಸ ಬಾಳಿನ ಕೇಂದ್ರ ಬಿಂದು ಬಸವಣ್ಣನಾಗಿದ್ದು, ಇಂತಹ ಮಹಾನ್‌ ಚೇತನರ ನಡೆ ನುಡಿ ಪ್ರಸಕ್ತ ಸಮಾಜಕ್ಕೆ ಮಾದರಿಯಾಗಬೇಕು ಎಂದರು.

ಕಾರ್ಯಕ್ರಮದಲ್ಲಿ ಬೆಳಗಾವಿ ಅಥಣಿಯ ಮೋಟಗಿ ಮಠದ ಡಾ| ಪ್ರಭು ಚೆನ್ನಬಸವ ಸ್ವಾಮೀಜಿ, ಮಹಾರಾಷ್ಟ್ರದ ಜ್ಯೋತಿಬಾ ಫುಲೆ ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ| ಕೆ. ಪಿ. ವಿಶ್ವನಾಥ್‌, ಕರ್ನಾಟಕ ಸಂಘ ಮುಂಬಯಿ ಅಧ್ಯಕ್ಷ ಮನೋಹರ್‌ ಎಂ. ಕೋರಿ, ಗೌರವ ಕಾರ್ಯದರ್ಶಿ ಡಾ| ಭರತ್‌ಕುಮಾರ್‌ ಪೊಲಿಪು, ಡಾ| ಎಸ್‌. ಕೆ. ಭವಾನಿ, ಬಿ. ಎಲ್‌. ಪಾಟೀಲ್‌, ಡಾ| ಮಮತಾ ರಾವ್‌, ಸುರೇಖಾ 

Advertisement

ಎಸ್‌. ದೇವಾಡಿಗ,  ಜಂಬುನಾಥ ಕಾಂಚಣಿ, ಸುಗಂಧಾ ಸತ್ಯಮೂರ್ತಿ,  ಕೆ. ಗೋವಿಂದ ಭಟ್‌, ಸುಬ್ರಯ್ಯ ಶಂಕರ್‌, ಡಾ| ಗಣಪತಿ ಶಂಕರಲಿಂಗ, ಶಿವಣ್ಣ ಎಂ. ವಕ್ಕರ್‌ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

ತತ್ವದಲ್ಲಿ ಸತ್ಯವಿದ್ದರೆ ಅದು ಚಿರವಾಗಿರುತ್ತದೆ. ಇಂತಹ ಸಂದೇಶ ನೀಡಿದ  ಬಸವಣ್ಣರು ಶ್ರೇಷ್ಠರು. ಭಕ್ತಿ ವಚನದಲ್ಲಿ ಅಮೃತ ಇದ್ದಂತಹ ಬಸವಣ್ಣರು ನುಡಿದಂತೆ ನಡೆದವರು. ಮನುಕುಲದ ಅರ್ಥಗರ್ಭಿತ ಬದುಕಿಗೆ ಜನಮನ ಮುಟ್ಟಿಸುವ ಸಂದೇಶ ಇವರದ್ದಾಗಿದೆ ಎಂದು ಮೈಸೂರು ಅಸೋಸಿಯೇಶನ್‌ ಮುಂಬಯಿ ಅಧ್ಯಕ್ಷೆ ಕಮಲಾ ಅವರು ನುಡಿದು ಸ್ವಾಗತಿಸಿದರು.

ಬಸವಲಿಂಗಯ್ಯ ಹಿರೇಮಠ ಅವರ ವಚನ ಪ್ರಸ್ತುತಿಯೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ಕನ್ನಡ ವಿಭಾಗ ಮುಂಬಯಿ ವಿಶ್ವವಿದ್ಯಾಲಯದ ಮುಖ್ಯಸ್ಥ ಡಾ| ಜಿ. ಎನ್‌. ಉಪಾಧ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕನ್ನಡ ವಿಭಾಗ  ಮುಂಬಯಿ ವಿವಿಯ ಸಹ ಪ್ರಾಧ್ಯಾಪಕಿ ಡಾ| ಪೂರ್ಣಿಮಾ ಎಸ್‌. ಶೆಟ್ಟಿ ಅತಿಥಿಗಳನ್ನು ಪರಿಚಯಿಸಿ ಕಾರ್ಯಕ್ರಮ ನಿರ್ವಹಿಸಿದರು. ಅಲ್ಲಮ ಶಾಲಾ ವಿದ್ಯಾರ್ಥಿಗಳಿಂದ  ಜಾನಪದ ಕಲಾ ಪ್ರದರ್ಶನ ನಡೆಯಿತು.  

Advertisement

Udayavani is now on Telegram. Click here to join our channel and stay updated with the latest news.

Next