Advertisement

Udupi: ಸಹಕಾರ ಕ್ಷೇತ್ರ ಪಠ್ಯವಾಗಲಿ: ಡಾ| ಎಂ.ಎನ್‌.ಆರ್‌.

11:42 AM Nov 22, 2024 | Team Udayavani |

ಉಡುಪಿ: ದೇಶದ ಅಭಿವೃದ್ಧಿಯಲ್ಲಿ ಸಹಕಾರ ಕ್ಷೇತ್ರದ ಕೊಡುಗೆ ಬಹಳಷ್ಟಿದೆ. ಆದ್ದರಿಂದ ಸಹಕಾರ ಕ್ಷೇತ್ರದ ವಿಷಯಗಳನ್ನು ಪಠ್ಯಪುಸ್ತಕದಲ್ಲಿ ಸೇರಿಸುವ ಬಗ್ಗೆ ರಾಜ್ಯ ಸರಕಾರ ಚಿಂತಿಸಬೇಕು ಎಂದು ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ ಅಧ್ಯಕ್ಷ ಡಾ| ಎಂ.ಎನ್‌. ರಾಜೇಂದ್ರ ಕುಮಾರ್‌ ಹೇಳಿದರು.

Advertisement

ರಾಜ್ಯ ಸಹಕಾರ ಮಹಾಮಂಡಲ, ಜಿಲ್ಲಾ ಸಹಕಾರ ಯೂನಿಯನ್‌, ಬಡಗ ಬೆಟ್ಟು ಕ್ರೆಡಿಟ್‌ ಕೋ-ಆಪ್‌. ಸೊಸೈಟಿ ಉಡುಪಿ, ಉಡುಪಿ ಇಂಡಸ್ಟ್ರಿಯಲ್‌ ಕೋ-ಆಪ್‌. ಸೊಸೈಟಿ, ಕೆನರಾ ಕ್ರೆಡಿಟ್‌ ಕೋ-ಆಪ್‌. ಸೊಸೈಟಿ, ಗುರುನಿತ್ಯಾನಂದ ಕ್ರೆಡಿಟ್‌ ಕೋ-ಆಪ್‌. ಸೊಸೈಟಿ ಹಾಗೂ ಸಹಕಾರ ಇಲಾಖೆಯ ಆಶ್ರಯದಲ್ಲಿ ಅಜ್ಜರಕಾಡು ಕ್ರೀಡಾಂಗಣದಲ್ಲಿ ಜರಗಿದ 71ನೇ ಅಖೀಲ ಭಾರತ ಸಹಕಾರ ಸಪ್ತಾಹದ ಸಮಾರೋಪದಲ್ಲಿ ಅವರು ಮಾತನಾಡಿದರು.

ಸಹಕಾರಿ ಕ್ಷೇತ್ರದಲ್ಲಿ ದೇಶಾದ್ಯಂತ 32 ಕೋಟಿ ಸದಸ್ಯರಿದ್ದಾರೆ. ಅವಿಭಜಿತ ದ.ಕ. ಜಿಲ್ಲೆಯ ಸಹಕಾರಿ ಸಂಘಗಳು ದೇಶಕ್ಕೆ ಮಾದರಿಯಾಗಿವೆ. ರೈತರು, ಕಾರ್ಮಿಕರ ಅಭಿವೃದ್ಧಿ ಸಹಕಾರ ಕ್ಷೇತ್ರದಿಂದ ಮಾತ್ರ ಸಾಧ್ಯವಿದೆ. ಆದರೆ ಸಹಕಾರಿ ಬ್ಯಾಂಕ್‌ಗಳ ಬಗ್ಗೆ ಸರಕಾರ ಕೂಡ ಕಣ್ಣೆತ್ತಿ ನೋಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಸಹಕಾರದಿಂದ ವಿಕಸಿತ ಭಾರತ ವಿಕಸಿತ ಭಾರತ ಸಂಕಲ್ಪ ಸಹಕಾರ ಕ್ಷೇತ್ರದಿಂದ ಪೂರ್ಣಗೊಳ್ಳಲು ಸಾಧ್ಯ. ಈ ನಿಟ್ಟಿನಲ್ಲಿ ಸರಕಾರ ಈ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡಬೇಕು. ಧಾರ್ಮಿಕ ದತ್ತಿ ಇಲಾಖೆ ಸಹಿತ ವಿವಿಧ ಇಲಾಖೆಗಳು ಮತ್ತು ಗ್ರಾ.ಪಂ. ಖಾತೆಗಳನ್ನು ಸಹಕಾರಿ ಸಂಘಗಳಲ್ಲಿ ತೆರೆಯಲು ಅವಕಾಶ ನೀಡಬೇಕು ಎಂದರು.

ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ದೇಶದ ಆರ್ಥಿಕಾಭಿವೃದ್ಧಿಯಲ್ಲಿ ಸಹಕಾರಿ ಕ್ಷೇತ್ರ ಪ್ರಮುಖ ಪಾತ್ರ ವಹಿಸಿದೆ. ಆರ್ಥಿಕ, ಶೈಕ್ಷಣಿಕವಾಗಿ ವಿಕಸಿತ ಭಾರತ ಕಟ್ಟಲು ಎಲ್ಲರೂ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.

Advertisement

ಶಾಸಕ ಯಶ್‌ಪಾಲ್‌ ಸುವರ್ಣ ಮಾತನಾಡಿ, ದೇಶದ ಆರ್ಥಿಕತೆಗೆ ಶಕ್ತಿ ನೀಡಿರುವುದು ಸಹಕಾರಿ ಕ್ಷೇತ್ರ. ಸರಕಾರದ ಯೋಜನೆ ಜನರ ಮನೆಬಾಗಿಲಿಗೆ ತಲುಪುತ್ತಿದೆ. ಯುವಜನತೆ ಸಹಕಾರಿ ಕ್ಷೇತ್ರದಲ್ಲಿ ಹೆಚ್ಚೆಚ್ಚು ತೊಡಗಿಸಿಕೊಂಡಾಗ ಮಾತ್ರ ಸಹಕಾರಿ ಕ್ಷೇತ್ರದ ಬೆಳವಣಿಗೆ ಸಾಧ್ಯವಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳ ಪಾಲುದಾರಿಕೆ ಅಗತ್ಯ ಎಂದರು.

ಜಿಲ್ಲಾ ಸಹಕಾರಿ ಯೂನಿಯನ್‌ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾಧಿಕಾರಿ ಡಾ| ಕೆ. ವಿದ್ಯಾಕುಮಾರಿ, ಜಿ.ಶಂಕರ್‌ ಫ್ಯಾಮಿಲಿ ಟ್ರಸ್ಟ್‌ ಪ್ರವರ್ತಕ ಡಾ| ಜಿ. ಶಂಕರ್‌, ನಗರಸಭೆ ಅಧ್ಯಕ್ಷ ಪ್ರಭಾಕರ ಪೂಜಾರಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು, ಡಿಸಿಸಿ ಬ್ಯಾಂಕ್‌ ನಿರ್ದೇಶಕ ದೇವಿಪ್ರಸಾದ್‌ ಶೆಟ್ಟಿ, ಹೋಂಗಾರ್ಡ್ಸ್‌ ಕಮಾಂಡೆಂಟ್‌ ಡಾ| ರೋಶನ್‌ ಶೆಟ್ಟಿ, ಸಹಕಾರ ಸಂಘಗಳ ಉಪನಿಬಂಧಕಿ ಕೆ.ಆರ್‌.ಲಾವಣ್ಯಾ, ಸಹಾಯಕ ನಿಬಂಧಕಿ ಸುಕನ್ಯಾ, ಮನೋತಜ್ಞ ಸಿ.ಆರ್‌. ಚಂದ್ರಶೇಖರ್‌, ಸರಕಾರಿ ಮಹಿಳಾ ಕಾಲೇಜಿನ ಪ್ರಾಂಶುಪಾಲ ಶ್ರೀಧರ್‌ ಪಿ.ಎಸ್‌. ವಿವಿಧ ಸೊಸೈಟಿಯ ಅಧ್ಯಕ್ಷರು, ಪದಾಧಿಕಾರಿಗಳು ಉಪಸ್ಥಿತರಿದ್ದರು.

ಸಮ್ಮಾನ ಡಾ| ರಾಜೇಂದ್ರ ಕುಮಾರ್‌ ಹಾಗೂ ಸಹಕಾರಿ ರತ್ನ ಪ್ರಶಸ್ತಿ ಪುರಸ್ಕೃತ ನಾರಾಯಣ ಬಲ್ಲಾಳ್‌, ಪ್ರಕಾಶ್ಚಂದ್ರ ಶೆಟ್ಟಿ ಅವರನ್ನು ಸಮ್ಮಾನಿಸಲಾಯಿತು. ನಿರ್ದೇಶಕ ಹರೀಶ್‌ ಕಿಣಿ ವಂದಿಸಿ, ಸತೀಶ್ಚಂದ್ರ ಚಿತ್ರಪಾಡಿ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next