Advertisement

ಮಹಿಳೆಯರಲ್ಲಿ ಮೂತ್ರಪಿಂಡ ಆರೋಗ್ಯ ಅರಿವು ಎತ್ತರಿಸುವುದು ಅಗತ್ಯ

06:00 AM Mar 25, 2018 | |

ಅಂತಾರಾಷ್ಟ್ರೀಯ ಮೂತ್ರಪಿಂಡ ಶಾಸ್ತ್ರ ಸಂಘ (ಇಂಟರ್‌ನ್ಯಾಶನಲ್‌ ಸೊಸೈಟಿ ಆಫ್ ನೆಫ್ರಾಲಜಿ – ಐಎಸ್‌ಎನ್‌)ವು ವಿಶ್ವ ಮೂತ್ರಪಿಂಡ ದಿನವನ್ನು ಪ್ರತೀ ವರ್ಷ ಮಾರ್ಚ್‌ ತಿಂಗಳ ಎರಡನೆಯ ಗುರುವಾರದಂದು ಆಚರಿಸುತ್ತದೆ. ಮೂತ್ರಪಿಂಡ ಕಾಯಿಲೆಗಳು, ಅವುಗಳನ್ನು ತಡೆಯುವುದು ಹೇಗೆ ಮತ್ತು ಅವುಗಳಿಗೆ ಚಿಕಿತ್ಸೆ ಹೇಗೆ ಎಂಬ ಕುರಿತಾಗಿ ಸಾರ್ವಜನಿಕರಲ್ಲಿ ಎಚ್ಚರವನ್ನು ಮೂಡಿಸಲು ಈ ದಿನಾಚರಣೆ ನಡೆಯುತ್ತದೆ. ಈ ವರ್ಷ ಎರಡನೇ ಗುರುವಾರವಾದ ಮಾರ್ಚ್‌ ಎಂಟರಂದು ಈ ದಿನಾಚರಣೆ ನಡೆದಿದ್ದು, ಕಾಕತಾಳೀಯವಾಗಿ ಅದು ವಿಶ್ವ ವಿಶ್ವ ಮಹಿಳಾ ದಿನವೂ ಆಗಿತ್ತು. ಹೀಗಾಗಿ ಮಹಿಳೆಯರ ಆರೋಗ್ಯದ ಬಗ್ಗೆಯೂ ಜಾಗೃತಿಯನ್ನು ಮೂಡಿಸುವ ಸದವಕಾಶ ಇದು.

Advertisement

ಮಹಿಳೆಯರಲ್ಲಿ ಮೂತ್ರಪಿಂಡ ಕಾಯಿಲೆಗಳು ಉಂಟಾಗುವ ಪ್ರಮಾಣ ಪುರುಷರಿಗೆ ಸರಿಸಮಾನವಾಗಿದ್ದರೂ ಪುರುಷರಿಗೆ ಹೋಲಿಸಿದರೆ ಅವರಿಗೆ ಆರೋಗ್ಯ ಸೇವೆ ಮತ್ತು ಚಿಕಿತ್ಸೆಯ ಲಭ್ಯತೆ ಕಡಿಮೆ ಇರುವುದು ಕಂಡುಬಂದಿದೆ. ಮಹಿಳೆಯರು ಮೂತ್ರಪಿಂಡ ಕಾಯಿಲೆಗಳ ಬಗ್ಗೆ ಗಮನ ಗಳಿಸಿಕೊಳ್ಳುವುದು ಪುರುಷರಿಗಿಂತ ಬಹಳ ವಿಳಂಬವಾಗಿ, ಅಲ್ಲದೆ ಅವುಗಳ ಚಿಕಿತ್ಸೆಯೂ ಅವರ ಕೈಗೆಟಕುವುದು ಹೆಚ್ಚು ಕಷ್ಟಸಾಧ್ಯವಾಗಿರುತ್ತದೆ. ಮಹಿಳೆಯರು ಪುರುಷರಿಗಿಂತ ಹೆಚ್ಚು ಪ್ರಮಾಣದಲ್ಲಿ ತಮ್ಮ ಕುಟುಂಬ ಸದಸ್ಯರಿಗೆ ಮೂತ್ರಪಿಂಡ ದಾನಿಗಳಾಗಿ ಒದಗುತ್ತಾರೆ. ಅಲ್ಲದೆ, ಕೆಲವು ಮೂತ್ರಪಿಂಡ ಕಾಯಿಲೆಗಳು ಮಹಿಳೆಯರಲ್ಲಿ ಪುರುಷರಿಗಿಂತ ಹೆಚ್ಚು ಪ್ರಮಾಣದಲ್ಲಿ ಕಂಡು ಬರುತ್ತವೆ. 

ಈ ಭೇದಗಳನ್ನು ಹೋಗಲಾಡಿಸಲು ಮತ್ತು ಮಹಿಳೆಯರೂ ಸಮರ್ಪಕ ಪ್ರಮಾಣದಲ್ಲಿ ಮೂತ್ರಪಿಂಡ ಆರೈಕೆ ಸೇವೆಗಳನ್ನು ಪಡೆಯಲು ಹತ್ತು ಹಲವು ಹೆಜ್ಜೆಗಳನ್ನು ಮುಂದಿಡಬೇಕಾಗಿದೆ. ಮೊತ್ತಮೊದಲನೆಯದು ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ಆಗಬೇಕಾದ ಕಾರ್ಯವೆಂದರೆ, ಮಹಿಳೆಯರಲ್ಲಿ ಮೂತ್ರಪಿಂಡ ಕಾಯಿಲೆಗಳ ಕುರಿತಾದ ಅರಿವನ್ನು ಹೆಚ್ಚಿಸುವುದು. ಮೂತ್ರಪಿಂಡ ಕಾಯಿಲೆಗಳ ಚಿಹ್ನೆಗಳು ಮತ್ತು ಗುಣಲಕ್ಷಣಗಳನ್ನು ಗುರುತಿಸುವಂತಾಗಬೇಕು ಹಾಗೂ ಚಿಕಿತ್ಸೆಯನ್ನು ಕ್ಷಿಪ್ರವಾಗಿ ಪಡೆಯುವಂತಾಗಬೇಕು. ಮೂತ್ರಪಿಂಡ ಕಾಯಿಲೆಗಳ ಸಾಮಾನ್ಯ ಚಿಹ್ನೆಗಳು ಮತ್ತು ಲಕ್ಷಣಗಳೆಂದರೆ ಪಾದಗಳು ಮತ್ತು ಮುಖ ಊದಿಕೊಳ್ಳುವುದು, ಹೆಚ್ಚು ರಕ್ತದೊತ್ತಡ, ರಕ್ತ ಸಹಿತ ಮೂತ್ರವಿಸರ್ಜನೆ, ದೇಹದಲ್ಲಿ ತುರಿಕೆ ಉಂಟಾಗುವುದು, ಸಂದು ನೋವು ಮತ್ತು ಊದಿಕೊಳ್ಳುವುದು, ಹೊಟ್ಟೆ ತೊಳೆಸುವಿಕೆ, ವಾಂತಿ ಮತ್ತು ಹಸಿವು ಕಡಿಮೆಯಾಗುವುದು, ಉಸಿರುಕಟ್ಟುವುದು, ನಿದ್ದೆ ತೂಗಿ ದಂತಿರುವುದು ಮತ್ತು ಕೋಮಾ. 

ಮೂತ್ರಪಿಂಡ ಕಾಯಿಲೆಗಳ 
ಅಪಾಯದ ಬಗ್ಗೆ ಯಾರು 
ಎಚ್ಚರದಿಂದ ಇರಬೇಕು?

ಮೂತ್ರಪಿಂಡ ಕಾಯಿಲೆಗಳ ಕೌಟುಂಬಿಕ ಚರಿತ್ರೆ ಇರುವವರು, ಮಧುಮೇಹ/ ಅಧಿಕ ರಕ್ತದೊತ್ತಡ ಮತ್ತು ಮೂತ್ರಪಿಂಡಗಳಲ್ಲಿ ಕಲ್ಲು ಉಂಟಾದ ಚರಿತ್ರೆ ಹೊಂದಿರುವವರು, ದೀರ್ಘ‌ ಕಾಲದಿಂದ ನೋವು ನಿರೋಧಕ ಔಷಧಿ ಉಪಯೋಗ ಮಾಡಿರುವವರು ಮತ್ತು ಹಿರಿಯ ಮಹಿಳೆಯರು ಮೂತ್ರಪಿಂಡ ಕಾಯಿಲೆಗಳಿಗೆ ತುತ್ತಾಗುವ ಅಪಾಯದ ಬಗ್ಗೆ ಎಚ್ಚರದಿಂದ ಇರಬೇಕು. ಸಿಸ್ಟೆಮಿಕ್‌ ಲೂಪಸ್‌ ಎರಿತಮಾಟೋಸಸ್‌ (ಎಸ್‌ಎಲ್‌ಇ – ರೋಗ ನಿರೋಧಕ ಕಣಗಳು ಸ್ವಂತ ದೇಹದ ಆರೋಗ್ಯವಂತ ಜೀವಕೋಶಗಳ ಮೇಲೆ ತಪ್ಪಾಗಿ ಆಕ್ರಮಣ ಎಸಗುವುದರಿಂದ ಉಂಟಾಗುವ ಒಂದು ಆಟೊ ಇಮ್ಯೂನ್‌ ಕಾಯಿಲೆ) ನಂತಹ ಕಾಯಿಲೆಗಳ ಮಹಿಳೆಯರಲ್ಲಿ ಹೆಚ್ಚು ಪ್ರಮಾಣದಲ್ಲಿ ಕಾಣಿಸಿಕೊಳ್ಳುತ್ತವೆ. 

ಗರ್ಭಧಾರಣೆ ಮತ್ತು ಮೂತ್ರಪಿಂಡ ಕಾಯಿಲೆ
ಸೋಂಕಿನಂತಹ ಕೆಲವು ಮೂತ್ರಪಿಂಡ ಕಾಯಿಲೆಗಳು ಗರ್ಭಿಣಿ ಮಹಿಳೆಯರಲ್ಲಿ ಕಾಣಿಸಿಕೊಳ್ಳುವ ಸಂಭಾವ್ಯತೆ ಹೆಚ್ಚು. ಅಲ್ಲದೆ, ಗರ್ಭಿಣಿ ಮಹಿಳೆಯರಲ್ಲಿ ಅಧಿಕ ರಕ್ತದೊತ್ತಡ ಮತ್ತು ಪ್ರಿ ಎಕ್ಲಾಂಪ್ಸಿಯಾ (ಮೂತ್ರದಲ್ಲಿ ಪ್ರೊಟೀನ್‌, ಅಧಿಕ ರಕ್ತದೊತ್ತಡ ಮತ್ತು ಮೂತ್ರಪಿಂಡ ವೈಫ‌ಲ್ಯ ಇದ್ದು ಅಥವಾ ಇಲ್ಲದೆ ಊತ ಸಮಸ್ಯೆ) ಉಂಟಾಗುವ ಸಾಧ್ಯತೆಯೂ ಇದೆ. 

Advertisement

ಈಗಾಗಲೇ ಮೂತ್ರಪಿಂಡ ಕಾಯಿಲೆಗಳನ್ನು ಹೊಂದಿರುವ ಮಹಿಳೆಯರು ಗರ್ಭ ಧರಿಸಿದಾಗ ರೋಗ ಲಕ್ಷಣಗಳು ಉಲ್ಬಣಿಸುವ ಸಾಧ್ಯತೆ ಇರುತ್ತದೆ. ಅಂತಹ ಮಹಿಳೆಯರು ಗರ್ಭ ಧರಿಸುವ ಮುನ್ನ ವೈದ್ಯರು/ ಮೂತ್ರಪಿಂಡ ತಜ್ಞ (ನೆಫ್ರಾಲಜಿಸ್ಟ್‌)ರ ಜತೆಗೆ ಸಮಾಲೋಚನೆ ನಡೆಸುವುದು ವಿಹಿತ. 

ತಪಾಸಣೆ ಮತ್ತು ಚಿಕಿತ್ಸೆ
ದೀರ್ಘ‌ಕಾಲಿಕ ಮೂತ್ರಪಿಂಡ ಕಾಯಿಲೆ (ಸಿಕೆಡಿ)ಗಳು ತಪಾಸಣೆಗೊಂಡು ಪತ್ತೆಯಾದ ಬಳಿಕ ಜೀವನಶೈಲಿ ಬದಲಾವಣೆಯಲ್ಲಿ ಆರೋಗ್ಯಕರ ಆಹಾರ ಮತ್ತು ಪಾನೀಯಗಳ ಆಯ್ಕೆಗಳ ಸಹಿತ ನಿರ್ವಹಿಸಬೇಕಾಗುತ್ತದೆ ಮತ್ತು ಔಷಧಿಗಳ ಮೂಲಕ ಅವುಗಳಿಗೆ ಚಿಕಿತ್ಸೆ ಒದಗಿಸುವುದು ಸಾಧ್ಯ. ಈ ವಿಧಾನ ಮತ್ತು ಚಿಕಿತ್ಸೆಯಿಂದ ದೀರ್ಘ‌ಕಾಲಿಕ ಮೂತ್ರಪಿಂಡ ರೋಗಗಳು ಉಲ್ಬಣಿಸದಂತೆ ಮತ್ತು ಹೃದ್ರೋಗದಂತಹ ಹೆಚ್ಚುವರಿ ಸಮಸ್ಯೆಗಳು ಉಂಟಾಗದಂತೆ ತಡೆಯಲು ಸಾಧ್ಯ. ಮಧುಮೇಹ ಅಥವಾ ಅಧಿಕ ರಕ್ತದೊತ್ತಡ ಹೊಂದಿದ್ದು, ದೀರ್ಘ‌ಕಾಲಿಕ ಮೂತ್ರಪಿಂಡ ರೋಗ ಇರುವುದು ಪತ್ತೆಯಾದವರು ತಮ್ಮ ರಕ್ತದಲ್ಲಿ ಸಕ್ಕರೆಯ ಮಟ್ಟ ಮತ್ತು ರಕ್ತದೊತ್ತಡದ ಮಟ್ಟವನ್ನು ನಿಯಂತ್ರಣದಲ್ಲಿ ಇರಿಸಿಕೊಂಡು ಮೂತ್ರಪಿಂಡ ವೈಫ‌ಲ್ಯದ ಅಪಾಯವನ್ನು ಕಡಿಮೆ ಮಾಡಿಕೊಳ್ಳಲು ತಮ್ಮ ವೈದ್ಯರ ಜತೆಗೆ ಈ ಬಗ್ಗೆ ಸಮಾಲೋಚನೆ ನಡೆಸುವುದು ಅತ್ಯಗತ್ಯ. 

ಚಿಕಿತ್ಸೆಯಿಂದ ಮೂತ್ರಪಿಂಡ ಕಾಯಿಲೆಗಳು ಉಲ್ಬಣಿಸುವುದನ್ನು ವಿಳಂಬಿಸಬಹುದಾದರೂ ಕಾಲಾಂತರದಲ್ಲಿ ಅವು ಉಲ್ಬಣಗೊಳ್ಳುತ್ತವೆ. ಮೂತ್ರಪಿಂಡಗಳು ಕೆಲಸ ಮಾಡುವುದನ್ನು ಸ್ಥಗಿತಗೊಳಿಸಿದಾಗ ಬದುಕುಳಿಯುವುದಕ್ಕೆ ಡಯಾಲಿಸಿಸ್‌ ಅಥವಾ ಮೂತ್ರಪಿಂಡ ಕಸಿ ಅಗತ್ಯವಾಗಿರುತ್ತದೆ. 

ಮುನ್ನೆಚ್ಚರಿಕೆಗಳು
ಮಧುಮೇಹ ಮತ್ತು ಅಧಿಕ ರಕ್ತದೊತ್ತಡ ಹೊಂದಿರುವವರು ತಮ್ಮ ರಕ್ತದಲ್ಲಿ ಸಕ್ಕರೆಯ ಮಟ್ಟವನ್ನು ಮತ್ತು ರಕ್ತದೊತ್ತಡವನ್ನು ನಿಯಂತ್ರಣದಲ್ಲಿ ಇರಿಸಿಕೊಳ್ಳಬೇಕು ಮತ್ತು ನಿಯಮಿತವಾಗಿ ತಪಾಸಣೆಗೆ ಒಳಗಾಗಬೇಕು. ವೈದ್ಯರನ್ನು ಅಥವಾ ಮೂತ್ರಪಿಂಡ ತಜ್ಞರನ್ನು ಆದಷ್ಟು ಬೇಗನೆ ಕಂಡು ಸಮಾಲೋಚನೆ ನಡೆಸಬೇಕು. 

ಹೆಚ್ಚು ಸಕ್ಕರೆ ಮತ್ತು ಅಧಿಕ ಕೊಬ್ಬಿನಂಶ ಇರುವ ಆಹಾರಗಳನ್ನು ವರ್ಜಿಸಬೇಕು. ನೋವು ನಿರೋಧಕ ಮತ್ತು ಆ್ಯಂಟಿ ಬಯಾಟಿಕ್‌ ಔಷಧಗಳನ್ನು ವೈದ್ಯರ ಶಿಫಾರಸಿನ ಪ್ರಕಾರ ಮಾತ್ರವೇ ತೆಗೆದುಕೊಳ್ಳಬೇಕು. ನಿಯಮಿತವಾಗಿ ವ್ಯಾಯಾಮ ಮಾಡುವುದು ಒಂದು ಉತ್ತಮ ಅಭ್ಯಾಸ. ಧೂಮಪಾನ ಮತ್ತು ಮದ್ಯಪಾನವನ್ನು ವರ್ಜಿಸಬೇಕು. 

ಅರಿವು 
ಮಹಿಳೆಯರಲ್ಲಿ ಮೂತ್ರಪಿಂಡ ಕಾಯಿಲೆಗಳ ಬಗ್ಗೆ ಅರಿವನ್ನು ಎತ್ತರಿಸುವ ಮೂಲಕ ಪ್ರಾಥಮಿಕ ಹಂತಗಳಲ್ಲಿಯೇ ಗಮನ ಹರಿಸುವಂತೆ ಮಾಡಬೇಕಾಗಿದೆ. ಕ್ಷಿಪ್ರ ತಪಾಸಣೆ ಮತ್ತು ಪತ್ತೆ ಹಾಗೂ ಚಿಕಿತ್ಸೆಗಳಿಂದ ದೀರ್ಘ‌ಕಾಲಿಕ ಮೂತ್ರಪಿಂಡ ಹಾನಿಯನ್ನು ಹಾಗೂ ಡಯಾಲಿಸಿಸ್‌ ಅಥವಾ ಮೂತ್ರಪಿಂಡ ಕಸಿ ಅನಿವಾರ್ಯವಾಗುವ ಹಂತಕ್ಕೆ ತಲುಪುವುದನ್ನು ತಡೆಯಬಹುದಾಗಿದೆ.

ಡಯಾಲಿಸಿಸ್‌ ಮತ್ತು 
ಮೂತ್ರಪಿಂಡ ಕಸಿ

ಕೆಲವೊಮ್ಮೆ ಮೂತ್ರಪಿಂಡ ಕಾಯಿಲೆಗಳು ಉಲ್ಬಣಿಸಿ ಮೂತ್ರಪಿಂಡಗಳ ಕಾರ್ಯಚಟುವಟಿಕೆ ಅತ್ಯಂತ ಕನಿಷ್ಠ ಮಟ್ಟಕ್ಕಿಳಿಯುತ್ತದೆ ಮತ್ತು ಅವು ದೇಹದಲ್ಲಿ ಉತ್ಪಾದನೆಯಾಗುವ ತ್ಯಾಜ್ಯಗಳನ್ನು ನಿವಾರಿಸಲು ಅಸಮರ್ಥವಾಗುತ್ತವೆ. ಅಂತಹ ಸನ್ನಿವೇಶಗಳಲ್ಲಿ ಡಯಾಲಿಸಿಸ್‌ (ಹಿಮೋ ಡಯಾಲಿಸಿಸ್‌ ಮತ್ತು ಪೆರಿಟೋನಿಯಲ್‌ ಡಯಾಲಿಸಿಸ್‌) ಮತ್ತು ಮೂತ್ರಪಿಂಡ ಕಸಿ ಚಿಕಿತ್ಸೆಗಳು ಲಭ್ಯ ಆಯ್ಕೆಗಳಾಗಿರುತ್ತವೆ. ಡಯಾಲಿಸಿಸ್‌ ಮತ್ತು ಮೂತ್ರಪಿಂಡ ಕಸಿ ಆಯ್ಕೆಗಳೆರಡೂ ಪುರುಷರಂತೆಯೇ ಮಹಿಳೆಯರಲ್ಲೂ ಉತ್ತಮ ಫ‌ಲಿತಾಂಶ ಹಾಗೂ ಯಶೋಸೂಚ್ಯಂಕ ಹೊಂದಿವೆ.

– ಡಾ| ಮಯೂರ್‌  ವಿ. ಪ್ರಭು,
ಅಸಿಸ್ಟೆಂಟ್‌ ಪ್ರೊಫೆಸರ್‌, 
ನೆಫ್ರಾಲಜಿ ವಿಭಾಗ, 
ಕಸ್ತೂರ್ಬಾ ಮೆಡಿಕಲ್‌ ಕಾಲೇಜು, ಮಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next