Advertisement

ಚೀನದ ತಾಳಕ್ಕೆ ಕುಣಿಯಿತೇ ವಿಶ್ವ ಆರೋಗ್ಯ ಸಂಸ್ಥೆ?

09:05 AM Apr 14, 2020 | Hari Prasad |

ವಿಶ್ವ ಆರೋಗ್ಯ ಸಂಸ್ಥೆ ಕೋವಿಡ್ 19 ವೈರಸ್ ವಿರುದ್ಧ ಜಾಗೃತಿ ಮೂಡಿಸಲು, ನೆರವು ನೀಡಲು ಈಗ ಶ್ರಮಿಸುತ್ತಿದೆಯಾದರೂ, ಆರಂಭದಲ್ಲಿ ಈ ಸಂಸ್ಥೆ ತೋರಿಸಿದ ಚೀನ ಪರ ಧೋರಣೆಯಿಂದಾಗಿ ಇಂದು ಈ ಸಾಂಕ್ರಾಮಿಕ ವಿಶ್ವವ್ಯಾಪಿ ಹರಡಿ 1 ಲಕ್ಷಕ್ಕೂ ಅಧಿಕ ಜನರ ಪ್ರಾಣ ತೆಗೆದಿದೆ ಎನ್ನಲಾಗುತ್ತಿದೆ. ಕೋವಿಡ್ 19 ವೈರಸ್ ಮನುಷ್ಯರಿಂದ ಮನುಷ್ಯರಿಗೆ ಹರಡುತ್ತದೆ ಎಂದು ವಿಶ್ವಆರೋಗ್ಯ ಸಂಸ್ಥೆಗೆ ಡಿಸೆಂಬರ್‌ನಲ್ಲೇ ಮಾಹಿತಿ ನೀಡಿದ್ದರೂ, ಅದೇಕೆ ಈ ರೋಗವನ್ನು ಸಾಂಕ್ರಾಮಿಕ ಎಂದು ಘೋಷಿಸಲು ಅದು ಹಿಂದೇಟು ಹಾಕಿತು? ಎನ್ನುವ ಪ್ರಶ್ನೆ ಮೂಡುತ್ತಿದೆ.

Advertisement

ಅಮೆರಿಕ ಅಧ್ಯಕ್ಷ ಟ್ರಂಪ್‌, “ಕೋವಿಡ್ 19 ವೈರಸ್ ನಿಜವಾದ ತೀವ್ರತೆಯ ಬಗ್ಗೆ ಪಾಶ್ಚಾತ್ಯ ರಾಷ್ಟ್ರಗಳಿಗೆ ಎಚ್ಚರಿಸದ ವಿಶ್ವಆರೋಗ್ಯ ಸಂಸ್ಥೆ’ ಹಾಗೂ ಅದರ ಮುಖ್ಯಸ್ಥ ಟೆಡ್ರೋಸ್‌ ಅವರ ಚೀನ ಕೇಂದ್ರಿತ ಧೋರಣೆಯನ್ನು ಖಂಡಿಸಿದ್ದಾರೆ. ತಮ್ಮ ವೈಫ‌ಲ್ಯವನ್ನು ಮರೆಮಾಚಲು ಟ್ರಂಪ್‌ ವಿಶ್ವಆರೋಗ್ಯ ಸಂಸ್ಥೆಯತ್ತ ಬೆರಳು ತೋರಿಸುತ್ತಿದ್ದಾರೆ ಎಂದು ವಾದಿಸಲಾಗುತ್ತಿದೆಯಾದರೂ, ವಿಶ್ವ ಆರೋಗ್ಯ ಸಂಸ್ಥೆ ಕೋವಿಡ್ 19 ವೈರಸ್ ವಿಷಯದಲ್ಲಿ ಆರಂಭದ ದಿನದಲ್ಲಿ ಎಡವಟ್ಟು ಮಾಡಿತು ಎನ್ನುವುದು ಈಗ ಸ್ಪಷ್ಟವಾಗುತ್ತಿದೆ…

ತುರ್ತು ಸ್ಥಿತಿ ಘೋಷಿಸುವುದಕ್ಕೂ ಹಿಂಜರಿಯಿತೇ?
ಜನವರಿ 15ರಂದು ವಿಶ್ವ ಆರೋಗ್ಯ ಸಂಸ್ಥೆ, “ಕೋವಿಡ್ 19 ವೈರಸ್ ಮನುಷ್ಯರಿಂದ ಮನುಷ್ಯರಿಗೆ ಹರಡುತ್ತದೆ ಎಂಬುದಕ್ಕೆ ಪುರಾವೆ ಇಲ್ಲ’ ಎಂದು ಹೇಳಿತ್ತು! ಆದರೆ, ಇದು ಒಬ್ಬರಿಂದ ಒಬ್ಬರಿಗೆ ಹರಡುತ್ತದೆ ಎಂದು ಖುದ್ದು ಚೀನದ ವೈದ್ಯರು ಹೇಳುತ್ತಾ ಬಂದರೂ, ವಿಶ್ವ ಆರೋಗ್ಯ ಸಂಸ್ಥೆ ಅವರ ಮಾತನ್ನು ಕಡೆಗಣಿಸಿತು.

ಇದಾದ 15 ದಿನಗಳ ಅನಂತರ, ಅಂದರೆ ಪ್ರಪಂಚದ ವಿವಿಧ ದೇಶಗಳು ಒತ್ತಡ ಹೇರಿದ ಮೇಲಷ್ಟೇ ವಿಶ್ವಸಂಸ್ಥೆ ಕಡೆಗೂ ಜನವರಿ 30ರಂದು ಕೋವಿಡ್ 19 ವೈರಸ್ ಹಾವಳಿಯನ್ನು “ಸಾರ್ವಜನಿಕ ಆರೋಗ್ಯ ತುರ್ತುಸ್ಥಿತಿ’ ಎಂದು ಘೋಷಿಸಿತು. ಆ ಸಮಯದಲ್ಲೂ ವಿಶ್ವಆರೋಗ್ಯ ಸಂಸ್ಥೆಯ ಮಹಾನಿರ್ದೇಶಕ ಟೆಡ್ರೋಸ್‌, ರೋಗ ಹರಡುವಿಕೆಯನ್ನು ತಡೆಯಲು ಚೀನ ಉತ್ತಮ ಕೆಲಸ ಮಾಡುತ್ತಿದೆ, ಎಂದು ಚೀನವನ್ನು ಹೊಗಳುವುದನ್ನು ಮಾತ್ರ ಮರೆಯಲಿಲ್ಲ.

ಆರಂಭದಿಂದಲೂ ಇತ್ತು ಆರೋಪ
ಚೀನ ರೋಗ ತೀವ್ರತೆಯ ಬಗ್ಗೆ ಪಾರದರ್ಶಕವಾಗಿಲ್ಲ ಎಂದು ಅಮೆರಿಕ ಜನವರಿ ತಿಂಗಳಿಂದಲೇ ಆರೋಪಿಸುತ್ತಾ ಬಂದಿತ್ತು. ಆದರೆ, ಆಗಲೂ ವಿಶ್ವಆರೋಗ್ಯ ಸಂಸ್ಥೆ ಚೀನದ ಪರವೇ ನಿಂತಿತು. ಕೋವಿಡ್ 19 ವೈರಸ್ ಹರಡದಂತೆ ತಡೆಯಲು ಚೀನ ಎಲ್ಲಾ ರೀತಿಯಿಂದಲೂ ಸಹಕರಿಸುತ್ತಿದೆ ಎಂದು ಹೇಳುತ್ತಾ ಅಮೆರಿಕದ ಆರೋಪವನ್ನು ಪರೋಕ್ಷವಾಗಿ ಅಲ್ಲಗಳೆಯಿತು. ಫೆಬ್ರವರಿ 29ರಂದು ವಿಶ್ವಆರೋಗ್ಯ ಸಂಸ್ಥೆ ಅಂತಾರಾಷ್ಟ್ರೀಯ ವಾಯು ಸಂಚಾರದ ಕುರಿತು ಅಚ್ಚರಿದಾಯಕ ಘೋಷಣೆ ಮಾಡಿತು.

Advertisement

ತನ್ನ ಶಿಫಾರಸಿನಲ್ಲಿ ಈ ಸಂಸ್ಥೆ, ಕೋವಿಡ್‌-19 ಸೋಂಕು ಎದುರಿಸುತ್ತಿರುವ ರಾಷ್ಟ್ರಗಳಿಗೆ ಪ್ರವಾಸ ಮತ್ತು ವ್ಯಾಪಾರಿ ನಿರ್ಬಂಧಗಳನ್ನು ಹೇರುವುದನ್ನು ವಿರೋಧಿಸಿತು. ಇದರಿಂದ ಜನರಿಗೆ ಸಹಾಯ ತಲುಪಿಸಲು ಕಷ್ಟವಾಗುತ್ತದೆ ಎಂದಿತು. ಅಲ್ಲದೇ, ಚೀನ ಸೋಂಕಿತರ ಹಾಗೂ ಸಾವನ್ನಪ್ಪಿದವರ ಪ್ರಮಾಣವನ್ನು ಮುಚ್ಚಿಡುತ್ತಿದೆ ಎಂದು ಆರೋಪವಿದೆ. ಈ ವಿಷಯದಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಮಾತ್ರ ಚಕಾರವೆತ್ತುತ್ತಿಲ್ಲ.

ಕೇವಲ ವಿಶ್ವ ಆರೋಗ್ಯ ಸಂಸ್ಥೆಯಲ್ಲಷ್ಟೇ ಅಲ್ಲ ಚೀನ ಪ್ರಾಬಲ್ಯ
ವಿಶ್ವ ಆರೋಗ್ಯ ಸಂಸ್ಥೆಗೆ ಅಮೆರಿಕ ವಾರ್ಷಿಕ 450 ದಶಲಕ್ಷ ಡಾಲರ್‌ ಹಣ ನೀಡಿದರೆ, ಚೀನ ಕೇವಲ 42 ದಶಲಕ್ಷ ಡಾಲರ್‌ ನೀಡುತ್ತಿದೆ. ಹೀಗಿದ್ದರೂ ಡಬ್ಲ್ಯೂಎಚ್‌ಒ ಅಷ್ಟೇ ಅಲ್ಲದೇ ವಿಶ್ವಸಂಸ್ಥೆಯ ವಿವಿಧ ಅಂಗಗಳಲ್ಲೂ ಚೀನ ತನ್ನ ಬಲ ಹೆಚ್ಚಿಸಿಕೊಂಡು, ತನಗೆ ಅನುಕೂಲವಾಗುವ ನೀತಿಗಳನ್ನು ರೂಪಿಸಿಕೊಳ್ಳುತ್ತಿರುವ ಬಗ್ಗೆ ಅನೇಕ ದೇಶಗಳು ಆರಂಭದಿಂದಲೂ ಅಸಮಾಧಾನ ವ್ಯಕ್ತಪಡಿಸುತ್ತಲೇ ಬಂದಿವೆ.

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ಖಾಯಂ ಸ್ಥಾನ ಸಿಗದಂತೆ ಅದು ತಡೆಯೊಡ್ಡುತ್ತಾ ಬಂದದ್ದು, ಸಿರಿಯಾ, ವೆನಿಜುವೆಲಾ ಮತ್ತು ಜಿಂಬಾಬ್ವೆಯ ವಿರುದ್ಧ ಕ್ರಮ ಕೈಗೊಳ್ಳಲು ಭದ್ರತಾ ಮಂಡಳಿಗೆ ತಡೆ ಒಡ್ಡುತ್ತಿರುವುದು, ಪಾಕಿಸ್ಥಾನ ಪೋಷಿತ ಉಗ್ರರನ್ನು ಜಾಗತಿಕ ಉಗ್ರರೆಂದು ಘೋಷಿಸುವುದಕ್ಕೆ ತಡೆಯೊಡ್ಡುತ್ತಾ ಬರುವುದು ನಡೆದೇ ಇದೆ.

-ವಿಶ್ವಸಂಸ್ಥೆಯ 15ಕ್ಕೂ ಅಧಿಕ ಏಜೆನ್ಸಿಗಳಲ್ಲಿ ಚೀನದ ನಾಯಕತ್ವವಿದೆ. ಆಹಾರ ಮತ್ತು ಕೃಷಿ ಸಂಸ್ಥೆ(ಎಫ್ಎಒ), ಅಂತಾರಾಷ್ಟ್ರೀಯ ನಾಗರಿಕ ವಿಮಾನಯಾನ ಸಂಸ್ಥೆ(ಐಸಿಎಒ), ಅಂತಾರಾಷ್ಟ್ರೀಯ ದೂರಸಂಪರ್ಕ ಒಕ್ಕೂಟ (ಐಟಿಯು) ವಿಶ್ವಸಂಸ್ಥೆಯ ಕೈಗಾರಿಕಾ ಅಭಿವೃದ್ಧಿ ಸಂಸ್ಥೆ(ಯುನಿಡೋ)ಯಲ್ಲಿ ಚೀನದ ಪ್ರಾಬಲ್ಯವೇ ಇದೆ. ಈ 15 ಏಜೆನ್ಸಿಗಳಲ್ಲಿ ವಿಶ್ವಬ್ಯಾಂಕ್‌ ನೇತೃತ್ವ ಮಾತ್ರ ಅಮೆರಿಕನ್‌ ನಾಗರಿಕರ ಕೈಯಲ್ಲಿದೆ.

ಚೀನ ಶ್ಲಾಘನೆಯಲ್ಲಿ ಮುಗಿಬೀಳುವವರು
ವಿಶ್ವ ಆರೋಗ್ಯ ಸಂಸ್ಥೆ ಎಂದಷ್ಟೇ ಅಲ್ಲ, ವಿಶ್ವಸಂಸ್ಥೆಯ ಇತರೆ ಅಂಗಗಳ ಮುಖ್ಯಸ್ಥರೂ ಕೂಡ ಚೀನವನ್ನು ಕೊಂಡಾಡುವುದರಲ್ಲಿ ಹಿಂದೆ ಬಿದ್ದಿಲ್ಲ. 2019ರಲ್ಲಿ ವಿಶ್ವ ಬೌದ್ಧಿಕ ಆಸ್ತಿ ಸಂಸ್ಥೆ (ವಿಪೋ) ಬೌದ್ಧಿಕ ಆಸ್ತಿಯ ರಕ್ಷಣೆಯಲ್ಲಿ ಚೀನದ ಬದ್ಧತೆ ಅದ್ಭುತವಾಗಿದೆ ಎಂದು ಶ್ಲಾಘಿಸಿದ್ದರು. ಮಾರ್ಚ್‌ 2020ರಲ್ಲಿ ಚೀನ ವಿಪೋದ ಮಹಾನಿರ್ದೇಶಕರ ಸ್ಥಾನಕ್ಕೆ ತಮ್ಮ ದೇಶವಾಸಿಯನ್ನು ಕೂರಿಸಲು ಪ್ರಯತ್ನಿಸಿತಾದರೂ, ಅದರ ಆಸೆಗೆ ಸಿಂಗಾಪುರದ ಡೇರೆನ್‌ ಟ್ಯಾಂಗ್‌ ಅಡ್ಡಗಾಲಾದರು.

ಇಲ್ಲದೇ ಹೋಗಿದ್ದರೇ, ವಿಶ್ವಸಂಸ್ಥೆಯ ಸ್ಪೆಷಲೈಸ್ಡ್ ಏಜೆನ್ಸಿಗಳಲ್ಲಿ ಮೂರನೇ ಒಂದು ಭಾಗದಷ್ಟು ನೇತೃತ್ವ ಚೀನಿಯರ ಕೈಗೇ ಸಿಕ್ಕಂತಾಗುತ್ತಿತ್ತು. ಇನ್ನು ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮದ (ಯುಎನ್‌ಡಿಪಿ) ಫ‌ಂಡಿಂಗ್‌ನಲ್ಲಿ ಚೀನದ ಪಾಲು ಕಡಿಮೆಯಿದೆಯಾದರೂ, ಅದರ ಪ್ರಭಾವವಂತೂ ಅಧಿಕವಿದೆ!

ಡಿಸೆಂಬರ್‌ನಲ್ಲೇ ಎಚ್ಚರಿಸಿತ್ತು ತೈವಾನ್‌!
ಆರಂಭದಿಂದಲೇ ವಿಶ್ವ ಆರೋಗ್ಯ ಸಂಸ್ಥೆ ಕೋವಿಡ್ 19 ವೈರಸ್ ನ್ನು ಸಾಂಕ್ರಾಮಿಕವೆಂದು ಘೋಷಿಸಲು ಹಿಂದೇಟು ಹಾಕಿದ್ದೇಕೆ ಎಂಬ ಪ್ರಶ್ನೆ ಏಳುತ್ತಿದೆ. ಫೈನಾನ್ಶಿಯಲ್‌ ಟೈಮ್ಸ್‌ನ ವರದಿಯ ಪ್ರಕಾರ, ಡಿಸೆಂಬರ್‌ ಅಂತ್ಯದಲ್ಲೇ ತೈವಾನ್‌, “ಕೋವಿಡ್ 19 ವೈರಸ್ ಮನುಷ್ಯರಿಂದ ಮನುಷ್ಯರಿಗೆ ಹರಡುತ್ತದೆ’ ಎಂಬ ಅಂಶವನ್ನು ವಿಶ್ವಆರೋಗ್ಯ ಸಂಸ್ಥೆಯ ಗಮನಕ್ಕೆ ತಂದಿತ್ತು. ಚೀನದ ವೈದ್ಯಕೀಯ ಸಿಬಂದಿಯು ರೋಗಿಗಳಿಗೆ ಚಿಕಿತ್ಸೆ ನೀಡಲು ಮುಂದಾಗಿ ಸೋಂಕಿಗೆ ತುತ್ತಾಗಿರುವ ಉದಾಹರಣೆಗಳನ್ನು ತೈವಾನ್‌ ತಿಳಿಸಿತ್ತು.  ಆದರೆ, ವಿಶ್ವಸಂಸ್ಥೆ ಚೀನದ ಅಡ್ಡಗಾಲಿನಿಂದಾಗಿ ತೈವಾನ್‌ಗೆ “ರಾಷ್ಟ್ರದ’ ಮಾನ್ಯತೆ ಕೊಟ್ಟಿಲ್ಲವಾದ್ದರಿಂದ, ವಿಶ್ವಆರೋಗ್ಯ ಸಂಸ್ಥೆಯಲ್ಲಿ ತೈವಾನ್‌ನ ಎಚ್ಚರಿಕೆಯ ಧ್ವನಿ ಪ್ರತಿಧ್ವನಿಸಲೇ ಇಲ್ಲ. ಕೊನೆಗೂ ಮಾರ್ಚ್‌ 11ರಂದು, ಅಂದರೆ ವುಹಾನ್‌ ನಗರಿಯ ಲಾಕ್‌ಡೌನ್‌ ಆದ 48 ದಿನಗಳ ಅನಂತರ ವಿಶ್ವ ಆರೋಗ್ಯ ಸಂಸ್ಥೆ ಕೋವಿಡ್ 19 ವೈರಸ್ ನ್ನು “ಸಾಂಕ್ರಾಮಿಕ’ವೆಂದು ಘೋಷಿಸಿತು.

ಗಮನಿಸಬೇಕಾದ ಸಂಗತಿಯೆಂದರೆ, ಕೋವಿಡ್ 19 ವೈರಸ್ ನ್ನು ವಿಶ್ವಆರೋಗ್ಯ ಸಂಸ್ಥೆ ಸಾಂಕ್ರಾಮಿಕವೆಂದು ಘೋಷಿಸಿದ್ದು ಮಾರ್ಚ್‌ 11ರಂದು, ಆದರೆ ಅಷ್ಟರಲ್ಲಾಗಲೇ ಚೀನದಲ್ಲಿ ಸಾವಿರಾರು ಜನ ಅಸುನೀಗಿದ್ದರು. ಫೆಬ್ರವರಿ 28ರ ವೇಳೆಗಾಗಲೇ ಚೀನದಲ್ಲಿ 79000 ಪ್ರಕರಣಗಳು ಪತ್ತೆಯಾಗಿದ್ದವು! ಇನ್ನು ಅಮೆರಿಕದಲ್ಲಿ ಮೊದಲ ಕೋವಿಡ್‌-19 ಪ್ರಕರಣ ಪತ್ತೆಯಾಗಿದ್ದು ಜನವರಿ 24ರಂದು, ಭಾರತ ಮತ್ತು ಜರ್ಮನಿಯಲ್ಲಿ ಜನವರಿ 30 ರಂದು, ಇಟಲಿಯಲ್ಲಿ ಫೆಬ್ರವರಿ 1ರಂದು, ಹಾಗೂ ಇರಾನ್‌ನಲ್ಲಿ ಫೆಬ್ರವರಿ 21ರಂದು.

Advertisement

Udayavani is now on Telegram. Click here to join our channel and stay updated with the latest news.

Next