Advertisement

World Cup Cricket ; ತುರ್ತು ಗೆಲುವಿನ ನಿರೀಕ್ಷೆಯಲ್ಲಿ ಇಂಗ್ಲೆಂಡ್‌, ಶ್ರೀಲಂಕಾ

12:24 AM Oct 26, 2023 | Team Udayavani |

ಬೆಂಗಳೂರು: ಹದಿಮೂರನೇ ವಿಶ್ವಕಪ್‌ನಲ್ಲಿ ಅತ್ಯಂತ ಸಂಕಷ್ಟದಲ್ಲಿರುವ ತಂಡ ಗಳೆಂದರೆ ಹಾಲಿ ಚಾಂಪಿಯನ್‌ ಇಂಗ್ಲೆಂಡ್‌ ಮತ್ತು ಮಾಜಿ ಚಾಂಪಿಯನ್‌ ಶ್ರೀಲಂಕಾ. ಆಡಿದ 4 ಪಂದ್ಯಗಳಲ್ಲಿ ಒಂದನ್ನಷ್ಟೇ ಗೆದ್ದಿರುವ ಈ ತಂಡಗಳೆರಡು ಅಂಕಪಟ್ಟಿಯಲ್ಲಿ ತೀರಾ ಕೆಳಮಟ್ಟದಲ್ಲಿವೆ. ಇಲ್ಲಿಂದ ಮೇಲೆದ್ದು ಬರಲು ಗುರುವಾರ ಬೆಂಗಳೂರಿನ “ಎಂ. ಚಿನ್ನಸ್ವಾಮಿ ಸ್ಟೇಡಿಯಂ’ನಲ್ಲಿ ಹೋರಾಟಕ್ಕೆ ಇಳಿಯಲಿವೆ. ಸೋತವರು ಭರವಸೆ ಕಳೆದುಕೊಳ್ಳಬೇಕಾದುದು ಅನಿವಾರ್ಯ.

Advertisement

ಶ್ರೀಲಂಕಾ 8ನೇ ಸ್ಥಾನದಲ್ಲಿದ್ದರೆ (-1.048), ಇಂಗ್ಲೆಂಡ್‌ 9ನೇ ಸ್ಥಾನಕ್ಕೆ ಜಾರಿದೆ (-1.249). ಅಂದರೆ ಬಾಂಗ್ಲಾದೇಶಕ್ಕಿಂತ ಸ್ವಲ್ಪ ಮೇಲೆ. ಆದರೆ ಗುರುವಾರ ಒಂದು ತಂಡಕ್ಕಂತೂ ತುಸು ಮೇಲೇರುವ ಅವಕಾಶ ಪ್ರಾಪ್ತವಾಗಲಿದೆ. ಇಷ್ಟೇ ಸಾಲದು, ಉಳಿದ ಪಂದ್ಯಗಳನ್ನೂ ದೊಡ್ಡ ಅಂತರದಿಂದ ಗೆಲ್ಲಬೇಕಾದ ಅಗತ್ಯವಿದೆ. ಹಾಗೆಯೇ ಬೇರೆ ತಂಡಗಳ ಫ‌ಲಿತಾಂಶಗಳೂ ನಿರ್ಣಾಯಕ.

ಆದರೆ ಈ ಬಾರಿ ಗೆದ್ದ ತಂಡಗಳೇ ಗೆಲ್ಲುತ್ತಿರು ವುದರಿಂದ ನಾಲ್ಕರಾಚೆ ಸ್ಥಾನ ಪಡೆದಿರುವ ಎಲ್ಲ ತಂಡಗಳ ಹಾದಿಯೂ ದುರ್ಗಮವಾಗಿದೆ. ಈಗಿನ ಸಾಧ್ಯತೆಯಂತೆ ಭಾರತ, ದಕ್ಷಿಣ ಆಫ್ರಿಕಾ ಮತ್ತು ನ್ಯೂಜಿಲ್ಯಾಂಡ್‌ ತಂಡಗಳ ಸೆಮಿಫೈನಲ್‌ ಪ್ರವೇಶ ಬಹುತೇಕ ಖಚಿತ. ಆಸ್ಟ್ರೇಲಿಯ 4ನೇ ಸ್ಥಾನಿಯಾದೀತು. ಕೊನೆಯಲ್ಲಿ ಈ ಅಗ್ರ 4 ತಂಡಗಳ ಸ್ಥಾನ ಸ್ವಲ್ಪ ಆಚೀಚೆ ಆಗಬಹುದು ಅಥವಾ 4ನೇ ಸ್ಥಾನ ಬೇರೊಂದು ತಂಡದ ಪಾಲಾಗಲೂಬಹುದು. ಇದಕ್ಕಾಗಿ ಉಳಿದವರು ಸಾಮರ್ಥ್ಯಕ್ಕೂ ಮಿಗಿಲಾದ ಪ್ರದರ್ಶನ ನೀಡ ಬೇಕಾದ ಅಗತ್ಯವಿದೆ. ಇವುಗಳಲ್ಲಿ ಇಂಗ್ಲೆಂಡ್‌, ಶ್ರೀಲಂಕಾ ಕೂಡ ಸೇರಿವೆ.

ಏಕೈಕ ಗೆಲುವು
ನ್ಯೂಜಿಲ್ಯಾಂಡ್‌ ವಿರುದ್ಧದ ಉದ್ಘಾಟನ ಪಂದ್ಯ ದಲ್ಲಿ ಅನುಭವಿಸಿದ ಹೀನಾಯ ಸೋಲು ಈಗಲೂ ಇಂಗ್ಲೆಂಡನ್ನು ಕಾಡುತ್ತಿರುವುದು ಸುಳ್ಳಲ್ಲ. ಆಂಗ್ಲರ ಪಡೆ ಸೋಲಿಸಿದ್ದು ಬಾಂಗ್ಲಾ ದೇಶ ವನ್ನು ಮಾತ್ರ. ಬಳಿಕ ಅಫ್ಘಾನಿಸ್ಥಾನ ವಿರುದ್ಧ ಆಘಾತಕಾರಿಯಾಗಿ ಸೋತು ತೀವ್ರ ಮುಖಭಂಗ ಅನುಭವಿಸಿತು. ದಕ್ಷಿಣ ಆಫ್ರಿಕಾ ವಿರುದ್ಧ 229 ರನ್ನುಗಳ ಭಾರೀ ಅಂತರದಿಂದ ಮುಗ್ಗರಿಸಿತು. ಈ ಸತತ ಸೋಲುಗಳಿಂದ ಹೊರಬರುವುದು ಸುಲಭವಲ್ಲ.

ಇಂಗ್ಲೆಂಡ್‌ ಈ ಕೂಟದಲ್ಲೇ ಅತ್ಯಂತ ಬಲಿಷ್ಠ ಬ್ಯಾಟಿಂಗ್‌ ಸರದಿಯನ್ನು ಹೊಂದಿರುವ ತಂಡ ವೆಂದು ಭಾವಿಸಲಾಗಿತ್ತು. ಆದರೆ ಇದೀಗ ಬರೀ ಕಾಗದದಲ್ಲಿ ಎಂಬುದು ಸಾಬೀತಾಗಿದೆ. ಬೆನ್‌ ಸ್ಟೋಕ್ಸ್‌ ಬಂದರೂ ಆಂಗ್ಲರ ಸ್ಥಿತಿ ಸುಧಾ ರಿಸ ದಿರುವುದು ವಿಪರ್ಯಾಸ. ಬೌಲಿಂಗ್‌ ಕೂಡ ಹಳಿ ತಪ್ಪಿದೆ. ಇಂಗ್ಲೆಂಡ್‌ ಮತ್ತೂಂದು ಜಯ ಸಾಧಿಸಬೇಕಾದರೆ ಬಾಂಗ್ಲಾದೇಶ ವಿರುದ್ಧ ತೋರ್ಪಡಿಸಿದ ಆಟವನ್ನು ಪುನರಾ ವರ್ತಿಸ ಬೇಕು. ಧರ್ಮಶಾಲಾದ ಈ ಪಂದ್ಯದಲ್ಲಿ ಇಂಗ್ಲೆಂಡ್‌ 9ಕ್ಕೆ 364 ರನ್‌ ರಾಶಿ ಹಾಕಿತ್ತು.

Advertisement

ಲಂಕೆಗೆ ಬೌಲಿಂಗ್‌ ಸಮಸ್ಯೆ
ಶ್ರೀಲಂಕಾದ ಸಮಸ್ಯೆ ಎಂದರೆ ಬೌಲಿಂಗ್‌ ವಿಭಾಗದ್ದು. ಅದು ದಕ್ಷಿಣ ಆಫ್ರಿಕಾಕ್ಕೆ 428 ರನ್‌, ಪಾಕಿಸ್ಥಾನಕ್ಕೆ 345 ರನ್‌ ಹಾಗೂ ಆಸ್ಟ್ರೇಲಿಯಕ್ಕೆ 35.2 ಓವರ್‌ಗಳಲ್ಲಿ 215 ರನ್‌ ನೀಡಿ ಏಟು ತಿಂದಿತ್ತು. ನೆದರ್ಲೆಂಡ್ಸ್‌ ತಂಡವನ್ನು 6ಕ್ಕೆ 91 ರನ್ನಿಗೆ ನಿಯಂತ್ರಿಸಿತಾದರೂ ಬಳಿಕ ಡಚ್ಚರ ಮೊತ್ತ 262ಕ್ಕೆ ಏರಿದ್ದನ್ನು ಮರೆಯುವಂತಿಲ್ಲ.

ಲಂಕೆಯ ಬ್ಯಾಟಿಂಗ್‌ ಪರ್ವಾಗಿಲ್ಲ ಎನ್ನಬಹುದು. ಪಥುಮ್‌ ನಿಸ್ಸಂಕ, ಚರಿತ ಅಸಲಂಕ, ಸದೀರ ಸಮರವಿಕ್ರಮ, ಕುಸಲ್‌ ಮೆಂಡಿಸ್‌ ಉತ್ತಮ ಫಾರ್ಮ್ ನಲ್ಲಿದ್ದಾರೆ. ಕಳೆದ ಸಲ ಇಂಗ್ಲೆಂಡ್‌ ಚಾಂಪಿಯನ್‌ ಆಗಿತ್ತಾದರೂ ಲೀಗ್‌ ಹಂತದಲ್ಲಿ ಲಂಕೆ 20 ರನ್ನುಗಳ ಜಯ ಸಾಧಿಸಿದ್ದನ್ನು ಉಲ್ಲೇಖಿಸದಿರುವಂತಿಲ್ಲ. ಹಾಗೆಯೇ ಕಳೆದ 4 ವಿಶ್ವಕಪ್‌ ಪಂದ್ಯಗಳಲ್ಲಿ ಶ್ರೀಲಂಕಾ ಇಂಗ್ಲೆಂಡನ್ನು ಸೋಲಿಸುತ್ತ ಬಂದಿದೆ. ಇಂಗ್ಲೆಂಡ್‌ ಕೊನೆಯ ಸಲ ವಿಶ್ವಕಪ್‌ನಲ್ಲಿ ಲಂಕೆಯನ್ನು ಮಣಿಸಿದ್ದು 1999ರಷ್ಟು ಹಿಂದೆ!

ರನ್‌ ಪ್ರವಾಹ ಸಾಧ್ಯತೆ
ಇಂಗ್ಲೆಂಡ್‌-ಶ್ರೀಲಂಕಾ ನಡುವಿನ ಪಂದ್ಯದಲ್ಲಿ ರನ್‌ ಪ್ರವಾಹ ಹರಿದು ಬರುವ ಎಲ್ಲ ಸಾಧ್ಯತೆ ಇದೆ. ಕಾರಣ, ಬೆಂಗಳೂರಿನ ಪಿಚ್‌ ಬ್ಯಾಟಿಂಗ್‌ ಸ್ನೇಹಿ ಆಗಿರುವುದು. ಆಸ್ಟ್ರೇಲಿಯ-ಪಾಕಿಸ್ಥಾನ ನಡುವೆ ಇಲ್ಲಿ ನಡೆದ ಪಂದ್ಯದಲ್ಲಿ 672 ರನ್‌ ಹರಿದು ಬಂದಿತ್ತು.

 ಆರಂಭ: ಅ. 2.00
 ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್

ವಿಶ್ವಕಪ್‌ ಮುಖಾಮುಖಿ
 ಪಂದ್ಯ: 11
 ಇಂಗ್ಲೆಂಡ್‌ ಜಯ: 06
 ಶ್ರೀಲಂಕಾ ಜಯ: 05
 2019ರ ವಿಶ್ವಕಪ್‌ಫ‌ಲಿತಾಂಶ
ಶ್ರೀಲಂಕಾಕ್ಕೆ 20 ರನ್‌ ಜಯ

Advertisement

Udayavani is now on Telegram. Click here to join our channel and stay updated with the latest news.

Next