ಸಿಂಗಾಪುರ: ಭಾರತದ ಜಿಎಂ ಡಿ. ಗುಕೇಶ್ ಮತ್ತು ಚೀನದ ಜಿಎಂ, ಹಾಲಿ ವಿಶ್ವ ಚಾಂಪಿಯನ್ ಡಿಂಗ್ ಲಿರೆನ್ ನಡುವಿನ ವಿಶ್ವ ಚೆಸ್ ಚಾಂಪಿಯನ್ಶಿಪ್ ಸ್ಪರ್ಧೆ ತೀವ್ರ ಕುತೂಹಲ ಘಟ್ಟದತ್ತ ಸಾಗುತ್ತಿದೆ.
ಸೋಮವಾರ ನಡೆದ 12ನೇ ಪಂದ್ಯದಲ್ಲಿ ಲಿರೆನ್ ಗೆದ್ದಿದ್ದು, ಇಬ್ಬರೂ ತಲಾ 6 ಅಂಕ ಗಳಿಸಿದ್ದಾರೆ. ಇಲ್ಲಿಗೆ 14 ಪಂದ್ಯಗಳ ಈ ಸರಣಿಯಲ್ಲಿ ಇನ್ನು 2 ಪಂದ್ಯ ಮಾತ್ರ ಬಾಕಿ ಉಳಿದಿದ್ದು, ಯಾರು ಚಾಂಪಿಯನ್ ಆಗಬಹುದು ಎಂಬ ಕುತೂಹಲ ಮೇರೆ ಮೀರಿದೆ.
ಸೋಮವಾರದ ಪಂದ್ಯದಲ್ಲಿ ಕಪ್ಪು ಕಾಯಿಯೊಂದಿಗೆ ಆಡಿದ ಡಿ. ಗುಕೇಶ್, ಬಿಳಿ ಕಾಯಿಯೊಂದಿಗೆ ಆಡಿದ ಡಿಂಗ್ ಲಿರೆನ್ ವಿರುದ್ಧ ತಮ್ಮ 39ನೇ ನಡೆಯಲ್ಲಿ ಸೋಲೊಪ್ಪಿಕೊಂಡರು. ಈ ಹಂತದಲ್ಲಿ ಪಂದ್ಯ ಗುಕೇಶ್ ಕೈಯಿಂದ ಬಹುತೇಕ ಜಾರಿತ್ತು. ಆಟ ಮುಂದುವರಿಸಿದ್ದರೂ ಗುಕೇಶ್ ಚೆಕ್ವೆುಟ್ಗೆ ಒಳಗಾಗುವ ಸಾಧ್ಯತೆಯಿದ್ದುದರಿಂದ ರಿಸೈನ್ ಮೂಲಕ ಗುಕೇಶ್ ತಮ್ಮ ಸೋಲನ್ನು ಘೋಷಿಸಿದರು. ರವಿವಾರ ನಡೆದ 11ನೇ ಸುತ್ತಿನ ಪಂದ್ಯದಲ್ಲಿ ಗುಕೇಶ್ ಜಯ ಸಾಧಿಸಿದ್ದರು.
ಟೈಬ್ರೇಕರ್ ಸಾಧ್ಯತೆ?
14 ಪಂದ್ಯಗಳ ಈ ಚೆಸ್ ಸರಣಿಯಲ್ಲಿ ಮೊದಲು 7.5 ಅಂಕ ತಲುಪುವವರು ವಿಜೇತರಾಗುತ್ತಾರೆ. ಆದರೆ ಇಲ್ಲಿ ಗುಕೇಶ್-ಲಿರೆನ್ ಇಬ್ಬರೂ ಸಮಬಲದ ಹೋರಾಟದಲ್ಲೇ ಮುಂದುವರಿಯುತ್ತಿದ್ದಾರೆ. ಇನ್ನುಳಿದ 2 ಪಂದ್ಯಗಳ ಬಳಿಕವೂ ಅಂಕ ಸಮಲಬಲದಲ್ಲೇ ಉಳಿದರೆ, ಆಗ ಟೈಬ್ರೇಕರ್ ಪಂದ್ಯ ನಡೆಸಿ ವಿಜೇತರನ್ನು ಘೋಷಿಸಲಾಗುತ್ತದೆ.