Advertisement

T20 World Champion; ವಿಶ್ವವಿಜೇತ ಗುರು ದ್ರಾವಿಡ್‌ಗೇಕಿಲ್ಲ ತವರೂರ ಸಮ್ಮಾನ?

01:03 AM Jul 11, 2024 | Team Udayavani |

ಬೆಂಗಳೂರು: ವೆಸ್ಟ್‌ ಇಂಡೀಸ್‌ನಲ್ಲಿ ನಡೆದ 9ನೇ ಆವೃತ್ತಿಯ ಟಿ20 ವಿಶ್ವಕಪ್‌ ಗೆದ್ದು, 17 ವರ್ಷಗಳ ಅನಂತರ ಭಾರತಕ್ಕೆ ಜಾಗತಿಕ ಟಿ20 ಕಿರೀಟ ತೊಡಿಸಿದ ವಿಶ್ವವಿಜೇತ ನಾಯಕ ರೋಹಿತ್‌ ಶರ್ಮಾ ಹಾಗೂ ಅವರ ಇಡೀ ತಂಡವನ್ನು ತವರಿಗೆ ಬಂದಿಳಿ ಯುತ್ತಲೇ ಸ್ವತಃ ಪ್ರಧಾನಿ ನರೇಂದ್ರ ಮೋದಿ ಸ್ವಾಗತಿಸಿ ಮೆಚ್ಚುಗೆಯ ಮಾತನ್ನಾಡಿದ್ದಾರೆ.

Advertisement

ಇದಾಗಿ 2 ವಾರ ಸಮೀಪಿ ಸುತ್ತಾ ಬಂದರೂ ವಿಶ್ವವಿಜೇತ ಕೋಚ್‌ ರಾಹುಲ್‌ ದ್ರಾವಿಡ್‌ ಅವರಿಗೆ ತವರು ರಾಜ್ಯ ಕರ್ನಾಟಕದಲ್ಲಿ ಒಂದು ಸಣ್ಣ ಸರಕಾರಿ ಸಮ್ಮಾನವೂ ದೊರೆತಿಲ್ಲ. 12-13 ವರ್ಷಗಳಿಂದ ಭಾರತ ಪುರುಷರ ತಂಡಕ್ಕೆ ಥ್ರೋಡೌನ್‌ ಸ್ಪೆಷಲಿಸ್ಟ್‌ ಆಗಿ ಸೇವೆ ಸಲ್ಲಿಸುತ್ತಿರುವ ಉತ್ತರ ಕನ್ನಡ ಜಿಲ್ಲೆಯ ರಾಘವೇಂದ್ರ ಅವರಿಗೂ ತವರಿನ ಗೌರವ ಸಂದಿಲ್ಲ.

ಅತ್ತ ಮಹಾರಾಷ್ಟ್ರದಲ್ಲಿ ಆ ರಾಜ್ಯ ದವರಾದ ರೋಹಿತ್‌ ಶರ್ಮಾ, ಸೂರ್ಯಕುಮಾರ್‌, ದುಬೆ ಹಾಗೂ ಜೈಸ್ವಾಲ್‌ ಅವರನ್ನು ವಿಧಾನಸಭೆಗೇ ಕರೆಸಿ ಸಿಎಂ ಏಕನಾಥ್‌ ಶಿಂಧೆ ಸಮ್ಮಾನಿ ಸಿದ್ದರು. ತರಬೇತುದಾರ ಪರಸ್‌ ಮ್ಹಾಂಬ್ರೆ, ವ್ಯವಸ್ಥಾಪಕ ಅರುಣ್‌ ಕಾನಡೆ ಅವರನ್ನೂ ಸಮ್ಮಾನಿಸಲಾಗಿತ್ತು. ತಂಡಕ್ಕೆ 11 ಕೋಟಿ ರೂ. ಬಹುಮಾನವನ್ನು ಘೋಷಿಸಲಾಗಿತ್ತು. ತೆಲಂಗಾಣದಲ್ಲಿ ಮೊನ್ನೆಯಷ್ಟೇ ಸಿಎಂ ರೇವಂತ್‌ ರೆಡ್ಡಿ ತಮ್ಮ ರಾಜ್ಯದ ವೇಗದ ಬೌಲಿಂಗ್‌ ತಾರೆ ಮೊಹಮ್ಮದ್‌ ಸಿರಾಜ್‌ ಅವರನ್ನು ಸಮ್ಮಾನಿಸಿದ್ದೂ ಅಲ್ಲದೆ ಸರಕಾರಿ ಉದ್ಯೋಗ ಘೋಷಣೆ ಮಾಡಿದ್ದಾರೆ. ಆದರೆ ಕರ್ನಾಟಕದಲ್ಲಿ ಕನಿಷ್ಠ ಗೌರವ, ಸಮ್ಮಾನವೂ ಆಗಿಲ್ಲವೇಕೆ ಎಂದು ಕ್ರೀಡಾಭಿಮಾನಿಗಳು ಪ್ರಶ್ನಿಸಿದ್ದಾರೆ.

ದ್ರಾವಿಡ್‌, ರಾಘವೇಂದ್ರರಿಗೆ ರಾಜ್ಯ ಸರಕಾರದ ಸಮ್ಮಾನ ದೊರೆಯಬೇಕು ಎಂದು ಸಾಮಾಜಿಕ ಜಾಲತಾಣಗಳಲ್ಲೂ ಬೇಡಿಕೆ ಕೇಳಿ ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next