ಪ್ಯಾರಿಸ್: ಫ್ರಾನ್ಸ್ ನ ಪ್ಯಾರಿಸ್ ನಲ್ಲಿ (Paris) ನಡೆಯುತ್ತಿರುವ ಪ್ಯಾರಾಲಂಪಿಕ್ಸ್ ನಲ್ಲಿ (Paralympics) ಭಾರತದ ಪದಕ ಬೇಟೆ ಮುಂದುವರಿದಿದೆ. ಹೈ ಜಂಪ್ ಟಿ64 ಕೂಟದಲ್ಲಿ ಭಾರತದ ಪ್ರವೀಣ್ ಕುಮಾರ್ (Praveen Kumar) ಅವರು ಚಿನ್ನದ ಪದಕ ಗೆದ್ದು ಸಂಭ್ರಮಿಸಿದ್ದಾರೆ. ಟೋಕಿಯೋ ಪ್ಯಾರಾಲಂಪಿಕ್ಸ್ ನಲ್ಲಿ ಬೆಳ್ಳಿಯ ಪದಕ ಗೆದ್ದಿದ್ದ ಪ್ರವೀಣ್ ಕುಮಾರ್ ಇದೀಗ ಚಿನ್ನದ ಜಿಗಿತ ಮಾಡಿದ್ದಾರೆ.
ಉತ್ತರ ಪ್ರದೇಶದ ನೋಯ್ಡಾದ 21 ವರ್ಷದ ಅಥ್ಲೀಟ್ ಪ್ರವೀಣ್ ಕುಮಾರ್ ಅವರು ಮರಿಯಪ್ಪನ್ ತಂಗವೇಲು ನಂತರ ಪ್ಯಾರಾಲಿಂಪಿಕ್ ಎತ್ತರ ಜಿಗಿತ ಸ್ಪರ್ಧೆಗಳಲ್ಲಿ ಚಿನ್ನ ಗೆದ್ದ ಎರಡನೇ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
2.08 ಮೀಟರ್ ಎತ್ತರ ಜಿಗಿದ ಪ್ರವೀಣ್ ಚಿನ್ನದ ಪದಕಕ್ಕೆ ಮುತ್ತಿಕ್ಕಿದರು. ಯುನೈಟೆಡ್ ಸ್ಟೇಟ್ಸ್ ನ ಡೆರೆಕ್ ಲೊಸಿಡೆಂಟ್ ಅವರು 2.06 ಮೀಟರ್ ಎತ್ತರ ಜಿಗಿದು ಬೆಳ್ಳಿ ಪದಕ ಗೆದ್ದರೆ, ಉಝ್ಬೇಕಿಸ್ತಾನದ ತೆಮುರ್ಬೆಕ್ ಗಿಯಾಜೊವ್ 2.03 ಮೀಟರ್ ಎತ್ತರದೊಂದಿಗೆ ಮೂರನೇ ಸ್ಥಾನ ಪಡೆದರು.
ಈ ಸಾಧನೆಯೊಂದಿಗೆ, ಪ್ರವೀಣ್ ಪ್ಯಾರಿಸ್ ನಲ್ಲಿ ಪದಕ ಗೆದ್ದ ಮೂರನೇ ಭಾರತೀಯ ಹೈಜಂಪರ್ ಆದರು. ಪುರುಷರ ಹೈಜಂಪ್ ಟಿ63 ಸ್ಪರ್ಧೆಯಲ್ಲಿ ಶರದ್ ಕುಮಾರ್ ಬೆಳ್ಳಿ ಮತ್ತು ಮರಿಯಪ್ಪನ್ ತಂಗವೇಲು ಕಂಚಿನ ಪದಕ ಗೆದ್ದುಕೊಂಡಿದ್ದರು.
ಪ್ಯಾರಿಸ್ ಪ್ಯಾರಾಲಿಂಪಿಕ್ಸ್ ನಲ್ಲಿ ಭಾರತ ಗೆದ್ದ ಪದಕಗಳ ಸಂಖ್ಯೆ ಇದೀಗ 26 ಕ್ಕೆ ಏರಿಕೆಯಾಗಿದೆ. ಭಾರತದ ಕ್ರೀಡಾಪಟುಗಳು ಆರು ಚಿನ್ನ, ಒಂಬತ್ತು ಬೆಳ್ಳಿ ಮತ್ತು 11 ಕಂಚು ಗೆದ್ದುಕೊಂಡಿದ್ದಾರೆ.