ಮೈಸೂರು: ತಳಮಟ್ಟದಿಂದ ಪಕ್ಷ ಸಂಘಟನೆ ಮಾಡುವ ಮೂಲಕ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮೈಸೂರು ವಿಭಾಗದಿಂದ ಬಿಎಸ್‌ಪಿ ಸಂಸದರು ಆಯ್ಕೆಯಾಗಲು ಕಾರ್ಯಕರ್ತರು ಶ್ರಮಿಸಬೇಕಿದೆ ಎಂದು ರಾಜ್ಯಸಭಾ ಸದಸ್ಯ ಹಾಗೂ ಕರ್ನಾಟಕದ ಉಸ್ತುವಾರಿ ಡಾ.ಅಶೋಕ್‌ಕುಮಾರ್ ಸಿದ್ದಾರ್ಥ ಕರೆ ನೀಡಿದರು.
ನಗರದ ಕಲಾಮಂದಿರದಲ್ಲಿ ಬಹುಜನ ಸಮಾಜ ಪಾರ್ಟಿ ಆಯೋಜಿಸಿದ್ದ ಮೈಸೂರು ವಲಯಮಟ್ಟದ ಬಿಎಸ್ಪಿ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ರಾಜ್ಯದ ಕಾರ್ಯಕರ್ತರು ಹಾಗೂ ಮುಖಂಡರ ಹಲವು ವರ್ಷಗಳ ಪ್ರಯತ್ನದಿಂದ ರಾಜ್ಯದಲ್ಲಿ ಬಿಎಸ್ಪಿ ಶಾಸಕರು ಆಯ್ಕೆಯಾಗಿ ಇದೀಗ ಸಚಿವರಾಗಿದ್ದಾರೆ.
ಇದೇ ಪ್ರಯತ್ನವನ್ನು 2019ರ ಲೋಕಸಭಾ ಚುನಾವಣೆಯಲ್ಲೂ ಮುಂದುವರಿಸುವ ಮೂಲಕ ರಾಜ್ಯದಿಂದ ಬಿಎಸ್ಪಿ ಸಂಸದರನ್ನು ಆಯ್ಕೆಗೊಳಿಸಬೇಕಿದೆ. ಅದಕ್ಕೆ ಪಕ್ಷದ ಕಾರ್ಯಕರ್ತರು ಸೆಕ್ಟರ್ ಹಾಗೂ ಬೂತ್ ಮಟ್ಟದಿಂದ ಕೆಲಸ ಮಾಡಬೇಕಿದೆ ಎಂದು ಸಲಹೆ ನೀಡಿದರು.
ಸಾಮಾಜಿಕ ಕ್ರಾಂತಿ: ಬಿಎಸ್ಪಿ ಕೇವಲ ಒಂದು ರಾಜಕೀಯ ಪಕ್ಷವಾಗಿ ಮಾತ್ರವಲ್ಲದೆ, ದೇಶದಲ್ಲಿ ಸಾಮಾಜಿಕ ಮತ್ತು ಆರ್ಥಿಕ ಕ್ರಾಂತಿ ಮಾಡುತ್ತಿದೆ. ದೇಶದಲ್ಲಿ ಅನೇಕ ಮಹನೀಯರು ದೇಶದ ಪ್ರತಿಯೊಬ್ಬರನ್ನು ಸಮಾನವಾಗಿ ಕಾಣುತ್ತಿದ್ದರು. ಅವರ ಕನಸು ನನಸಾಗಿಸುವಲ್ಲಿ ಅಂಬೇಡ್ಕರ್ ಸೇರಿದಂತೆ ಹಲವರು ಬಹುಜನರ ಕಲ್ಯಾಣಕ್ಕಾಗಿ ಶ್ರಮಿಸಿದ್ದಾರೆ ಎಂದರು.
ಬಿಎಸ್ಪಿ ಬಲಪಡಿಸಿ: ದೇಶದ ಎಲ್ಲಾ ರಾಜಕೀಯ ಪಕ್ಷಗಳು ಬಹುಜನರ ಏಳಿಗೆಗಾಗಿ ಶ್ರಮಿಸಬೇಕಿತ್ತಾದರೂ, ಈ ಕೆಲಸವನ್ನು ಬಿಎಸ್ಪಿ ಮಾಡುತ್ತಿದೆ. ಹೀಗಾಗಿ ಬಿಎಸ್ಪಿ ನಾಯಕಿ ಮಾಯಾವತಿ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿದ್ದ ವೇಳೆ ಕಡಿಮೆ ಅವಧಿಯಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದಾರೆ.
ಪ್ರಸ್ತುತ ಬಿಎಸ್ಪಿ ಪಕ್ಷದಿಂದ ಸಚಿವರಾಗಿರುವ ಎನ್.ಮಹೇಶ್ ಬಹುಜನರ ಏಳಿಗೆಗೆ ಶ್ರಮಿಸಲಿದ್ದಾರೆ ಎಂಬ ವಿಶ್ವಾಸವಿದೆ. ಮುಂದಿನ ಸಂಸತ್ ಚುನಾವಣೆಯಲ್ಲಿ ಮಾಯಾವತಿ ಕೈ ಬಲಪಡಿಸಬೇಕಿದೆ ಎಂದು ಹೇಳಿದರು. ಸಮಾವೇಶವನ್ನು ಇದಕ್ಕೂ ಮುನ್ನ ಬಿಎಸ್ಪಿ ರಾಷ್ಟ್ರೀಯ ಉಸ್ತುವಾರಿ ವೀರ್‌ಸಿಂಗ್ ಉದ್ಘಾಟಿಸಿದರು.
ಬಿಎಸ್ಪಿ ರಾಷ್ಟ್ರೀಯ ಉಪಾಧ್ಯಕ್ಷ ಡಾ.ಜಯಪ್ರಕಾಶ್ ಸಿಂಗ್, ರಾಜ್ಯಾಧ್ಯಕ್ಷ ಪ್ರೊ. ಹರಿರಾಂ, ರಾಜ್ಯ ಪ್ರಧಾನ ಕಾರ್ಯದರ್ಶಿ ಅರಕಲವಾಡಿ ನಾಗೇಂದ್ರ, ತಮಿಳುನಾಡು ಹಾಗೂ ಕೇರಳ ಉಸ್ತುವಾರಿ ಡಾ.ಶ್ರೀನಿವಾಸ್, ಮೈಸೂರು ವಲಯ ಉಸ್ತುವಾರಿ ಸೋಸಲೆ ಸಿದ್ದರಾಜು ಇನ್ನಿತರರು ಹಾಜರಿದ್ದರು.