ಮೈಸೂರು: ಏಕಕಾಲದಲ್ಲಿ ಮೈಸೂರು ನಗರ ಪಾಲಿಕೆ ಮತ್ತು ಮುಡಾದಲ್ಲಿ ಕಾರ್ಯನಿರ್ವಹಿಸುತ್ತಿದ್ದ ನೌಕರನನ್ನು ಪಾಲಿಕೆ ಆಯುಕ್ತರು ಸೇವೆಯಿಂದ ವಜಾಗೊಳಿಸಿದ್ದು, ಆತನ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲು ಸೂಚಿಸಿದ್ದಾರೆ.
ಪಾಲಿಕೆಯ ವಾಣಿ ವಿಲಾಸ ನೀರು ಸರಬರಾಜು ಮತ್ತು ಒಳಚರಂಡಿ ವಿಭಾಗದ ಮಲಿನ ನೀರು ಶುದ್ಧೀಕರಣ ಘಟಕದಲ್ಲಿ ಎಸ್‌ಡಿಎ ಆಗಿ ಕಾರ್ಯನಿರ್ವಹಿಸುತ್ತಿದ್ದ ಬಿ.ಕೆ. ಕುಮಾರ್‌ನನ್ನು ಸೇವೆಯಿಂದ ವಜಾಗೊಳಿಸಲಾಗಿದೆ.
ಈತ ಮುಡಾದಲ್ಲಿ ಹೊರ ಗುತ್ತಿಗೆ ನೌಕರನಾಗಿ ಕೆಲಸ ಮಾಡುತ್ತಿರುವುದು ಹಾಗೂ ಎರಡೂ ಕಡೆ ಸಂಬಳ ಪಡೆಯುತ್ತಿರುವುದು ವಿಚಾರಣೆಯಿಂದ ಬೆಳಕಿಗೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಪಾಲಿಕೆ ಆಯುಕ್ತರು ಆದೇಶಿಸಿದ್ದಾರೆ.
ಕುಮಾರ್ 2004ರಲ್ಲಿ ತುಂಡು ಗುತ್ತಿಗೆ ಕೆಲಸಗಳ ಆಧಾರದ ಮೇಲೆ ಕೆಲಸ ನಿರ್ವಹಿಸುತ್ತಿದ್ದ. ಪ್ರಭಾವಿಗಳ ಮೂಲಕ ಮುಡಾದಲ್ಲಿಯೂ ಮುಖ್ಯ ಲೆಕ್ಕಾಧಿಕಾರಿ ಕಚೇರಿಯಲ್ಲಿ ಎಸ್‌ಡಿಎ ಆಗಿ ಗುತ್ತಿಗೆ ಆಧಾರದ ಮೇಲೆ ನೇಮಕಗೊಂಡು ಕಾರ್ಯನಿರ್ವಹಿಸುತ್ತಿದ್ದ.
ಅಧಿಕಾರಿಗಳೊಂದಿಗೆ ಮಾಹಿತಿ ವಿನಿಮಯ ಇ.ಡಿ. ನೋಟಿಸ್
ಬಿ.ಕೆ. ಕುಮಾರ್, ಮುಡಾದ ಶೇ. 50:50 ನಿವೇಶನ ಹಂಚಿಕೆ ಸಂಬಂಧ ಚುನಾಯಿತ ಪ್ರತಿನಿಧಿಗಳು ಮತ್ತು ಮುಡಾ ಅಧಿಕಾರಿಗಳೊಂದಿಗೆ ಮಾಹಿತಿ ವಿನಿಮಯ ಮಾಡಿಕೊಳ್ಳುತ್ತಿದ್ದ ಎನ್ನಲಾಗಿದೆ. ಇ.ಡಿ. ಅಧಿಕಾರಿಗಳು ಈತನಿಗೂ ನೋಟಿಸ್ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.