Advertisement

By Election Result: ಮತ್ತೆ ಬಿಜೆಪಿ ಅಧಿಕಾರಕ್ಕೆ ತರೋಣ: ಬಿ.ವೈ.ವಿಜಯೇಂದ್ರ

03:33 AM Nov 27, 2024 | Team Udayavani |

ಬೆಂಗಳೂರು: ರಾಜ್ಯದಲ್ಲಿ ನಡೆದ ಉಪಚುನಾವಣೆಯ ಫ‌ಲಿತಾಂಶದ ಪರಿಣಾಮ ನಮ್ಮ ಸಂಘಟನೆಯ ಮೇಲೆ ಯಾವುದೇ ಪ್ರಭಾವ ಬೀರಲು ಸಾಧ್ಯವಿಲ್ಲ. ಇದನ್ನು ಸಂಪೂರ್ಣವಾಗಿ ಉಪೇಕ್ಷಿಸೋಣ. ಪಕ್ಕದ ಮಹಾರಾಷ್ಟ್ರದ ಐತಿಹಾಸಿಕ ಮಹಾ ವಿಜಯವನ್ನು ನಾವು ಪ್ರೇರಣೆಯಾಗಿ ಸ್ವೀಕರಿಸಿ, ಒಂದು ದಿನವೂ ವ್ಯಯ ಮಾಡದೆ ಮತ್ತೆ ಪಕ್ಷವನ್ನು ಅಧಿಕಾರಕ್ಕೆ ತರುವ ಸಂಕಲ್ಪ ಮಾಡೋಣ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.

Advertisement

ಫ‌ಲಿತಾಂಶದ ಹಿನ್ನೆಲೆಯಲ್ಲಿ ಕಾರ್ಯಕರ್ತರಿಗೆ ಬರೆದ ಭಾವನಾತ್ಮಕ ಪತ್ರದಲ್ಲಿ ಈ ಅಭಿಪ್ರಾಯ ವ್ಯಕ್ತಪಡಿಸಿರುವ ಅವರು, ಮಿತ್ರ ಪಕ್ಷ ಜೆಡಿಎಸ್‌ ಜತೆಗೆ ಮುಂದೆಯೂ ಸಹಕಾರದ ಹೆಜ್ಜೆಗಳನ್ನು ಇಡೋಣ. ನಮ್ಮ ಗುರಿ ಏನಿದ್ದರೂ ಸಂಘಟನೆ. ಜತೆಗೆ ಕಾಂಗ್ರೆಸ್‌ ಸರಕಾರದ ಬಹುಸಂಖ್ಯಾಕ ಜನರ ವಿರೋಧಿ ಧೋರಣೆ ಹಾಗೂ ಭ್ರಷ್ಟ ಆಡಳಿತವನ್ನು ಕೊನೆಗಾಣಿಸುವುದಕ್ಕಾಗಿ ಎಂಬ ಶಪಥ ಮಾಡೋಣ ಎಂದು ಹೇಳಿದ್ದಾರೆ.

ಸಂಘಟನೆಯ ಬಲವೃದ್ಧಿಗೊಳಿಸೋಣ
ಭಾರತೀಯ ಜನತಾ ಪಾರ್ಟಿಯ ಸುಭದ್ರ ಕೋಟೆಯ ನಡುವೆ ಬಿರುಕು ಮೂಡಿಸಲು ಯತ್ನಿಸುವ ಶಕ್ತಿಗಳನ್ನು ಮೆಟ್ಟಿನಿಂತು ನಮ್ಮೆಲ್ಲರ ಒಗ್ಗಟ್ಟಿನ ಮುಷ್ಠಿ ದೇಶ ಕಟ್ಟುವ ಶಕ್ತಿಯಾಗಲೆಂದು ನಿಮ್ಮೆಲ್ಲರಲ್ಲಿ ಒಬ್ಬ ಸಾಮಾನ್ಯ ಕಾರ್ಯಕರ್ತನಾಗಿ ಭಿನ್ನವಿಸಿಕೊಳ್ಳುತ್ತೇನೆ. ಈ ನಿಟ್ಟಿನಲ್ಲಿ ಹಿರಿಯರ ಆಶೀರ್ವಾದ, ಪ್ರಮುಖರ ಮಾರ್ಗದರ್ಶನ ಪಡೆದು ಮುಂದಿನ ದಿನಗಳಲ್ಲಿ ಇನ್ನಷ್ಟು ಕ್ರಿಯಾಶೀಲರಾಗಿ ಸಂಘಟನೆಯನ್ನು ಬಲವೃದ್ಧಿಗೊಳಿಸೋಣ. ಬದ್ಧತೆ-ಅಚಲತೆ, ಸಫ‌ಲತೆಯ ಪ್ರತೀಕ ಗುರಿಯಿಟ್ಟು – ಛಲ ಹೊತ್ತು, ಧೈರ್ಯ ಮಾರ್ಗದಲ್ಲಿ ಸಾಗೋಣ ಎಂಬ ಆಶಯ ವ್ಯಕ್ತಪಡಿಸಿದ್ದಾರೆ.

ಇದೇ ಕಾಂಗ್ರೆಸ್‌ ಪಕ್ಷ ತನ್ನ ಹಿಂದಿನ ಆಡಳಿತಾವಧಿಯಲ್ಲಿ ನಂಜನಗೂಡು-ಗುಂಡ್ಲುಪೇಟೆ ಉಪ ಚುನಾವಣೆಯಲ್ಲಿ ಗೆದ್ದ ಅನಂತರ ಸಾರ್ವತ್ರಿಕ ಚುನಾವಣೆಯಲ್ಲಿ ಏಕೆ ಧೂಳೀಪಟವಾಯಿತು ಎಂಬ ಬಗ್ಗೆ ಮುಖ್ಯಮಂತ್ರಿಗಳು ಉತ್ತರಿಸಬೇಕಾಗಿದೆ. ತಮ್ಮ ಭ್ರಷ್ಟತೆಯ ಕರಾಳ ಮುಖ ಒರೆಸಿಕೊಳ್ಳಲು ಈ ಫ‌ಲಿತಾಂಶ ಯಾವುದೇ ಕಾರಣಕ್ಕೂ ವಸ್ತ್ರವೂ ಆಗುವುದಿಲ್ಲ, ಅಸ್ತ್ರವೂ ಆಗುವುದಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

ಸೋಲನ್ನು ಸಕಾರಾತ್ಮಕವಾಗಿಯೇ ಸ್ವೀಕರಿಸೋಣ
ಮೂರು ಕ್ಷೇತ್ರಗಳ ಉಪಚುನಾವಣೆಯಲ್ಲಿ ನಮ್ಮ ಪಕ್ಷ ಎರಡು ಕ್ಷೇತ್ರಗಳಲ್ಲಿ, ಮಿತ್ರ ಪಕ್ಷ ಜೆಡಿಎಸ್‌ ಒಂದು ಕ್ಷೇತ್ರದಲ್ಲಿ ಪರಾಜಯಗೊಂಡಿರುವ ಕಾರಣದಿಂದ ನಾವ್ಯಾರೂ ಎದೆಗುಂದಬೇಕಿಲ್ಲ. ನಿರೀಕ್ಷೆಯಂತೆ ಆಡಳಿತ ಪಕ್ಷ ಕಾಂಗ್ರೆಸ್‌ನ ಅಧಿಕಾರ ದುರುಪಯೋಗ ಹಾಗೂ ಆಮಿಷಗಳು ಮತದಾರರನ್ನು ದಿಕ್ಕು ತಪ್ಪಿಸುವ ನಿಟ್ಟಿನಲ್ಲಿ ಪರಿಣಾಮ ಬೀರಿದೆ ಎಂಬುದು ನಿಸ್ಸಂಶಯ. ಆದರೂ ಉಪಚುನಾವಣೆಯ ಈ ಸೋಲನ್ನು ನಾವು ಸಕಾರಾತ್ಮಕವಾಗಿಯೇ ಸ್ವೀಕರಿಸೋಣ, ಈ ಫ‌ಲಿತಾಂಶ ಭವಿಷ್ಯತ್ತಿನಲ್ಲಿ ನಮಗೆ ಮುಂದಿರುವ ಸವಾಲುಗಳನ್ನು ಎಚ್ಚರಿಸುವ ಸಂಕೇತವೂ ಆಗಿದೆ ಎಂದು ಭಾವಿಸೋಣ ಎಂದು ವಿಜಯೇಂದ್ರ ಹೇಳಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next