Advertisement

ಥಾಯ್ಲೆಂಡ್‌ ವಿರುದ್ಧವೂ ಭಾರತಕ್ಕೆ ದೊಡ್ಡ ಜಯ

06:00 AM Jun 05, 2018 | |

ಕೌಲಾಲಂಪುರ: ವನಿತೆಯರ ಟಿ20 ಏಶ್ಯ ಕಪ್‌ ಕ್ರಿಕೆಟ್‌ ಪಂದ್ಯಾವಳಿಯಲ್ಲಿ ಭಾರತ ಸತತ 2ನೇ ಗೆಲುವು ದಾಖಲಿಸಿದೆ. ಸೋಮವಾರದ ಪಂದ್ಯದಲ್ಲಿ ಥಾಯ್ಲೆಂಡನ್ನು 66 ರನ್ನುಗಳಿಂದ ಮಣಿಸಿದೆ. ಮೊದಲ ಪಂದ್ಯದಲ್ಲಿ ಆತಿಥೇಯ ಮಲೇಶ್ಯವನ್ನು 142 ರನ್ನುಗಳ ಬೃಹತ್‌ ಅಂತರದಿಂದ ಉರುಳಿಸಿದ ಸಾಧನೆ ಭಾರತದ್ದಾಗಿತ್ತು. ಥಾಯ್ಲೆಂಡ್‌ ವಿರುದ್ಧ ಮೊದಲು ಬ್ಯಾಟಿಂಗ್‌ ನಡೆಸಿದ ಭಾರತ ದೊಡ್ಡ ಮೊತ್ತವನ್ನೇನೂ ಪೇರಿಸಲಿಲ್ಲ. 4 ವಿಕೆಟಿಗೆ 132 ರನ್‌ ಗಳಿಸಿ ಸವಾಲೊಡ್ಡಿತು. ಆದರೆ ಅನನುಭವಿ ಥಾಯ್‌ ವನಿತೆಯರು 8 ವಿಕೆಟಿಗೆ ಇದರ ಅರ್ಧದಷ್ಟು ರನ್‌ ಗಳಿಸಿ (66) ಶರಣಾದರು.

Advertisement

ಹರ್ಮನ್‌ಪ್ರೀತ್‌ ಸಾಹಸ
ನಾಯಕಿ ಹರ್ಮನ್‌ಪ್ರೀತ್‌ ಕೌರ್‌ ಅವರ ಆಲ್‌ರೌಂಡ್‌ ಪ್ರದರ್ಶನ ಭಾರತೀಯ ಸರದಿಯ ಆಕರ್ಷಣೆ ಎನಿಸಿಕೊಂಡಿತು. 5ನೇ ಕ್ರಮಾಂಕದಲ್ಲಿ ಬ್ಯಾಟ್‌ ಹಿಡಿದು ಬಂದ ಕೌರ್‌ 17 ಎಸೆತಗಳಿಂದ ಅಜೇಯ 27 ರನ್‌ ಬಾರಿಸಿದರು. ಬಳಿಕ ಬೌಲಿಂಗ್‌ ವೇಳೆ ಮಿಂಚಿನ ದಾಳಿ ನಡೆಸಿ 11 ರನ್ನಿಗೆ 3 ವಿಕೆಟ್‌ ಕಿತ್ತರು. ಈ ಸಾಹಸಕ್ಕಾಗಿ ಹರ್ಮನ್‌ಪ್ರೀತ್‌ಗೆ ಪಂದ್ಯಶ್ರೇಷ್ಠ ಪ್ರಶಸ್ತಿ ಒಲಿದು ಬಂತು.

ಮಿಥಾಲಿಗೆ ವಿಶ್ರಾಂತಿ
ಭಾರತಕ್ಕೆ ಮೋನಾ ಮೆಶ್ರಮ್‌ ಮತ್ತು ಸ್ಮತಿ ಮಂಧನಾ ಉತ್ತಮ ಆರಂಭ ಒದಗಿಸಿದರು. ಮೊದಲ ವಿಕೆಟಿಗೆ 9.2 ಓವರ್‌ಗಳಿಂದ 53 ರನ್‌ ಒಟ್ಟುಗೂಡಿಸಿದರು. 32 ರನ್‌ ಮಾಡದ ಮೋನಾ ಭಾರತದ ಸರದಿಯ ಸರ್ವಾಧಿಕ ಸ್ಕೋರರ್‌ (45 ಎಸೆತ, 2 ಬೌಂಡರಿ). ಮಂಧನಾ 22 ಎಸೆತ ಎದುರಿಸಿ 29 ರನ್‌ ಹೊಡೆದರು (1 ಬೌಂಡರಿ, 2 ಸಿಕ್ಸರ್‌). ಮಲೇಶ್ಯ ವಿರುದ್ಧ ಮಿಂಚಿದ್ದ ಮಿಥಾಲಿ ರಾಜ್‌ ಅವರಿಗೆ ವಿಶ್ರಾಂತಿ ನೀಡಲಾಗಿತ್ತು. ವೇದಾ ಕೃಷ್ಣಮೂರ್ತಿ 11 ರನ್‌ (14 ಎಸೆತ, 1 ಬೌಂಡರಿ), ಅನುಜಾ ಪಾಟೀಲ್‌ 22 ರನ್‌ (21 ಎಸೆತ, 2 ಬೌಂಡರಿ) ಕೊಡುಗೆ ನೀಡಿದರು. 

ಥಾಯ್‌ ನಿಧಾನ ಬ್ಯಾಟಿಂಗ್‌
ನಿಧಾನ ಗತಿಯಲ್ಲಿ ಬ್ಯಾಟಿಂಗ್‌ ನಡೆಸಿದ ಥಾಯ್ಲೆಂಡ್‌ ವನಿತೆಯರು ಯಾವ ಸಂದರ್ಭದಲ್ಲೂ ಗೆಲುವಿಗಾಗಿ ಪ್ರಯತ್ನಿ ಸಲಿಲ್ಲ. ಮೂವರಷ್ಟೇ ಎರಡಂಕೆಯ ಮೊತ್ತ ದಾಖಲಿಸಿದರು. ಮಧ್ಯಮ ಕ್ರಮಾಂಕದ ನಟ್ಟಾಯ ಬೂಶಾಥಮ್‌ ಸರ್ವಾಧಿಕ 21 ರನ್‌ ಹೊಡೆದರೆ, ಆರಂಭಿಕ ಆಟಗಾರ್ತಿ ಚೈವೈ 14 ಮತ್ತು ಕೆಳ ಸರದಿಯ ಸುತ್ತಿರೌಂಗ್‌ 12 ರನ್‌ ಮಾಡಿದರು.  ದಿನದ ಉಳಿದ ಪಂದ್ಯಗಳಲ್ಲಿ ಬಾಂಗ್ಲಾದೇಶ ಮತ್ತು ಶ್ರೀಲಂಕಾ ತಂಡಗಳು ಜಯ ಸಾಧಿಸಿದವು. ಪರಾಜಿತ ತಂಡಗಳೆಂದರೆ ಪಾಕಿಸ್ಥಾನ ಹಾಗೂ ಮಲೇಶ್ಯ.

ಸಂಕ್ಷಿಪ್ತ ಸ್ಕೋರ್‌: ಭಾರತ-20 ಓವರ್‌ಗಳಲ್ಲಿ 4 ವಿಕೆಟಿಗೆ 132 (ಮೋನಾ 32, ಮಂಧನಾ 29, ಕೌರ್‌ ಅಜೇಯ 27, ಅನುಜಾ 22, ಲೀಂಗ್‌ಪ್ರಾಸರ್ಟ್‌ 16ಕ್ಕೆ 2).
ಥಾಯ್ಲೆಂಡ್‌-20 ಓವರ್‌ಗಳಲ್ಲಿ 8 ವಿಕೆಟಿಗೆ 66 (ಬೂಶಾಥಮ್‌ 21, ಚೈವೈ 14, ಕೌರ್‌ 11ಕ್ಕೆ 3, ದೀಪ್ತಿ 16ಕ್ಕೆ 2, ಪೂಜಾ 5ಕ್ಕೆ 1).
ಪಂದ್ಯಶ್ರೇಷ್ಠ: ಹರ್ಮನ್‌ಪ್ರೀತ್‌ ಕೌರ್‌.
 

Advertisement
Advertisement

Udayavani is now on Telegram. Click here to join our channel and stay updated with the latest news.

Next