ಮುಂಬಯಿ: ಶೋಚನೀಯ ಬ್ಯಾಟಿಂಗ್ ನಡೆಸಿದ ಭಾರತದ ವನಿತೆಯರು ಇಂಗ್ಲೆಂಡ್ ಎದುರಿನ ಟಿ20 ಸರಣಿಯನ್ನು ಕಳೆದುಕೊಂಡು ನಿರಾಸೆ ಮೂಡಿಸಿದ್ದಾರೆ. ಶನಿವಾರದ 2ನೇ ಪಂದ್ಯದಲ್ಲಿ ಇಂಗ್ಲೆಂಡ್ 4 ವಿಕೆಟ್‌ಗಳ ಜಯ ಸಾಧಿಸಿ 2-0 ಮುನ್ನಡೆಗೈದಿತು.
ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಭಾರತ 16.2 ಓವರ್‌ಗಳಲ್ಲಿ 80 ರನ್ನಿಗೆ ಕುಸಿದರೆ, ಇಂಗ್ಲೆಂಡ್ 11.2 ಓವರ್‌ಗಳಲ್ಲಿ 6 ವಿಕೆಟಿಗೆ 82 ರನ್ ಮಾಡಿತು. ಇಂಗ್ಲೆಂಡ್ ಸಾಂ ಕ ಬೌಲಿಂಗ್ ಮೂಲಕ ಯಶಸ್ಸು ಕಂಡಿತು. ಎಲ್ಲ 6 ಮಂದಿ ಬೌಲರ್ ಸೇರಿ ಭಾರತದ ಮೇಲೆರಗಿದರು. ಎರಡಂಕೆಯ ಗಡಿ ತಲುಪಿದ್ದು ಇಬ್ಬರು ಮಾತ್ರ. ಜೆಮಿಮಾ ರೋಡ್ರಿಗಸ್ 30 ಮತ್ತು ಸ್ಮತಿ ಮಂಧನಾ 10 ರನ್ ಗಳಿಸಿದರು. ಶಫಾಲಿ ಮತ್ತು ದೀಪ್ತಿ ಖಾತೆಯನ್ನೇ ತೆರೆಯಲಿಲ್ಲ.
ಇಂಗ್ಲೆಂಡ್‌ಗೆ ರೇಣುಕಾ ಸಿಂಗ್ ಮತ್ತೆ ಒಂದೇ ಓವರ್‌ನಲ್ಲಿ ಅವಳಿ ಆಘಾತವಿಕ್ಕಿದರೂ ಪ್ರಯೋಜನವಾಗಲಿಲ್ಲ. ಅಲೈಸ್ ಕ್ಯಾಪ್ಸಿ 25 ಮತ್ತು ನ್ಯಾಟ್ ಸ್ಕಿವರ್ ಬ್ರಂಟ್ 16 ರನ್ ಮಾಡಿ ತಂಡವನ್ನು ಆಧರಿಸಿದರು.
ದೀಪ್ತಿ ಶರ್ಮ ಕೂಡ 2 ವಿಕೆಟ್ ಉರುಳಿಸಿದರು. ಇದು ದೀಪ್ತಿ ಅವರ 100ನೇ ಟಿ20 ಅಂತಾರಾಷ್ಟ್ರೀಯ ಪಂದ್ಯವಾಗಿತ್ತು. ಈ ಸಂದರ್ಭದಲ್ಲಿ ನಾಯಕಿ ಹರ್ಮನ್‌ಪ್ರೀತ್ ಕೌರ್ ವಿಶೇಷ ಕ್ಯಾಪ್ ಒಂದನ್ನು ನೀಡಿ ದೀಪ್ತಿ ಅವರನ್ನು ಗೌರವಿಸಿದರು.
ಈ ಪಂದ್ಯಕ್ಕಾಗಿ ಭಾರತ ಕನಿಕಾ ಅಹುಜಾ ಬದಲು ಸೀಮರ್ ತಿತಾಸ್ ಸಾಧು ಅವರನ್ನು ಆಡಿಸಿತು. ಇಂಗ್ಲೆಂಡ್ ಮಹಿಕಾ ಗೌರ್ ಬದಲು ಚಾರ್ಲಿ ಡೀನ್ ಅವರಿಗೆ ಅವಕಾಶ ನೀಡಿತು.