Advertisement

ಗ್ರಾಮ ಠಾಣಾ ಆಸ್ತಿ ಸಮೀಕ್ಷೆಗೆ ಮಹಿಳಾ ಸ್ವಸಹಾಯ ಸಂಘಗಳು

06:03 AM Jul 04, 2020 | Lakshmi GovindaRaj |

ಬೆಂಗಳೂರು: ಮಹಿಳಾ ಸ್ವಸಹಾಯ ಸಂಘಗಳ ಮೂಲಕ ಗ್ರಾಮೀಣ ಭಾಗದಲ್ಲಿ ಗ್ರಾಮಠಾಣಾ ವ್ಯಾಪ್ತಿಯಲ್ಲಿನ ಆಸ್ತಿಗಳ ಅಳತೆ ಹಾಗೂ ನೋಂದಣಿಗೆ ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಮುಂದಾಗಿದೆ.  ಕೋವಿಡ್‌ 19 ಲಾಕ್‌ಡೌನ್‌ ಸಂದರ್ಭದಲ್ಲಿ ಸಂಕಷ್ಟಕ್ಕೆ ಒಳಗಾಗಿದ್ದ ಗ್ರಾಮೀಣ ಮಹಿಳಾ ಸ್ವಸಹಾಯ ಸಂಘಗಳಿಗೆ ದುಡಿಮೆಯ ಮಾರ್ಗ ಕಲ್ಪಿಸಿರುವ ಇಲಾಖೆ ಈ ಮೂಲಕ ರಾಜ್ಯದ ಗ್ರಾಮೀಣ ಪ್ರದೇಶಗಳ ಆಸ್ತಿಗಳನ್ನು  ತೆರಿಗೆ ವ್ಯಾಪ್ತಿಗೆ ತರುವ ಗುರಿ ಹೊಂದಿದೆ.

Advertisement

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ ಜತೆಗೂಡಿ ರಾಮನಗರದಲ್ಲಿ ಪ್ರಾಯೋಗಿ ಕವಾಗಿ ಈ ಯೋಜನೆ ಅನುಷ್ಠಾನ  ಗೊಳಿಸುತ್ತಿರುವ ಇಲಾಖೆ ಮುಂದೆ ರಾಜ್ಯಾದ್ಯಂತ ವಿಸ್ತರಿಸಲು ಯೋಜನೆ ರೂಪಿಸಿದೆ. ಖಾಲಿ ನಿವೇಶನ,  ಮನೆ, ವಾಣಿಜ್ಯ ಕಟ್ಟಡಗಳನ್ನು ಅಳತೆ ಮಾಡಿ ನಿಗದಿತ ಅರ್ಜಿ ನಮೂನೆಯಲ್ಲಿ ಭರ್ತಿ ಮಾಡುವು ದು, ಮಾಲೀಕರ ಸಹಿ ಹಾಗೂ ಮೇಲ್ವಿಚಾರಕ ಸಹಿ ಪಡೆಯುವುದು ಮಹಿಳಾ  ಸ್ವಸಹಾಯ ಸಂಘಗಳಿಗೆ ವಹಿಸಲಾಗಿದೆ.

ಮುಂದಿನ ಹಂತದಲ್ಲಿ ಗ್ರಾಮ ಪಂಚಾಯಿತಿಗಳು ಆಸ್ತಿಗಳಿಗೆ ತೆರಿಗೆ ನಿಗದಿಪಡಿಸಲಿದೆ. ಒಂದು ಮನೆಯ ಅಳತೆಗೆ 50 ರೂ.ನಂತೆ ಆಸ್ತಿ ಮಾಲೀಕರೇ ಮಹಿಳಾ ಸ್ವಸಹಾಯ ಸಂಘಗಗಳಿಗೆ ಹಣ  ನೀಡಬೇಕು. ಕೋವಿಡ್‌ 19 ಸಂದರ್ಭದಲ್ಲಿ ಪ್ರತಿ ಸದಸ್ಯರು 15 ರಿಂದ 20 ಸಾವಿರ ರೂ.ವರೆಗೆ ಆದಾಯ ಗಳಿಸಿದ್ದಾರೆ. ಗ್ರಾಮೀಣ ಭಾಗದಲ್ಲಿ ಆಸ್ತಿ ತೆರಿಗೆ ಪಾವತಿಯಾಗದೆ ಅಭಿವೃದ್ಧಿಗೂ ಹಿನ್ನೆಡೆಯುಂಟಾಗುತ್ತಿದ್ದು,

ಪ್ರತಿ ಆಸ್ತಿಯ ಅಳತೆ  ಮತ್ತು ನೋಂದಣಿ ಮಾಡಿಸಿ ಅದನ್ನು ಡಿಜಿಟಲೀಕರಣಗೊಳಿಸಿ ಶಾಶ್ವತವಾಗಿ ತೆರಿಗೆ ವ್ಯಾಪ್ತಿಗೆ ತಂದು ಪ್ರತಿವರ್ಷ ಸರ್ಕಾರಕ್ಕೆ ತೆರಿಗೆ ಪಾವತಿಯಾಗುವಂತೆ ನೋಡಿಕೊಳ್ಳುವುದು ಇದರ ಉದ್ದೇಶ. ಗ್ರಾಮೀಣ ಭಾಗದಲ್ಲಿ ಲಕ್ಷಾಂತರ ಮನೆಗಳು  ಆಸ್ತಿ ತೆರಿಗೆ ಪಾವತಿಸುತ್ತಿಲ್ಲ. ಜತೆಗೆ ಸಾಕಷ್ಟು ಮನೆಗಳ ಕಟ್ಟಡದ ಅಳತೆಯೂ ಪಂಚಾಯಿತಿಯಲ್ಲಿ ದಾಖಲಾಗಿಲ್ಲ. ಹೀಗಾಗಿ, ಮರು ಸಮೀಕ್ಷೆಗೆ ಸರ್ಕಾರ ತೀರ್ಮಾನಿಸಿ ಕೌಶಲ್ಯಾಭಿವೃದ್ಧಿ ಉದ್ಯಮಶೀ ಲತೆ ಮತ್ತು ಜೀವನೋಪಾಯ  ಇಲಾಖೆ ಮತ್ತು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಗೆ ಈ ಜವಾಬ್ದಾರಿ ವಹಿಸಿದೆ.

ಗ್ರಾಪಂ ಅಭಿವೃದ್ಧಿ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಮಹಿಳಾ ಸ್ವಸಹಾಯ ಸಂಘದ ಸದಸ್ಯರಿಗೆ ಪ್ರತಿ ಆಸ್ತಿಯ ಅಳತೆ ಮತ್ತು  ನೋಂದಣಿ ಮಾಡುವ ಬಗ್ಗೆ ತರಬೇತಿ ನೀಡಿ ಈ ಯೋಜನೆ ಪ್ರಾರಂಭಿಸಲಾಗಿದ್ದು, ರಾಜ್ಯಾದ್ಯಂತ ವಿಸ್ತರಿಸಿ ಮುಂದಿನ ಮೂರು ವರ್ಷಗಳಲ್ಲಿ ರಾಜ್ಯಾದ್ಯಂತ ಗ್ರಾಮೀಣ ಭಾಗದ ಆಸ್ತಿಗಳ ಅಳತೆ ಮತ್ತು ನೋಂದಣಿ ಕಾರ್ಯ  ಪೂರ್ಣಗೊಳಿಸಲಾಗುವುದು ಎಂದು ಇಲಾಖೆಯ ಮೂಲಗಳು ತಿಳಿಸಿವೆ.

Advertisement

ಆದಾಯ ಗಳಿಕೆಗೆ ಅವಕಾಶ: ಈ ಕುರಿತು ರಾಮ  ನಗರ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಇಕ್ರಂ ಪಾಶಾ, ಗ್ರಾಮೀಣ ಭಾಗಗಳಲ್ಲಿ ಬಹಳಷ್ಟು ವರ್ಷಗಳಿಂದ ಆಸ್ತಿ ನೋಂದಣಿ, ತೆರಿಗೆ ಪರಿಷ್ಕರಣೆ ಆಗಿರಲಿಲ್ಲ.  ಕೋವಿಡ್‌ 19 ಸಂದರ್ಭದಲ್ಲಿ ಆರ್ಥಿಕ ಚಟುವಟಿಕೆ ಸ್ಥಗಿತಗೊಂಡಿದ್ದರಿಂದ ಮಹಿಳಾ ಸ್ವಸಹಾಯ ಸಂಘಗಳು ಸಂಕಷ್ಟಕ್ಕೆ ಸಿಲುಕಿದ್ದವು. ಹೀಗಾಗಿ, ಅವರಿಗೂ ಆದಾಯ ಗಳಿಕೆಗೆ ಅವಕಾಶ ಕಲ್ಪಿಸಲು ಈ ಕಾರ್ಯಕ್ರಮ ರೂಪಿಸಲಾಯಿತು.  ಈಗಾಗಲೇ ರಾಮನಗರದ ಐದಾರು ಪಂಚಾಯಿತಿಗಳಲ್ಲಿ ಶೇ.90ರಷ್ಟು  ಸಮೀಕ್ಷೆ ಕಾರ್ಯ ಪೂರ್ಣಗೊಂಡಿದೆ. ಕೈಲಾಂಚಾ ಹೋಬಳಿಯಲ್ಲಿ ಮಹಿಳಾ ಸ್ವ ಸಹಾಯ ಸಂಘದ ಸದಸ್ಯರು 15 ರಿಂದ 20 ಸಾವಿರ ರೂ.ವರೆಗೂ ಆದಾಯ  ಗಳಿಸಿದ್ದಾರೆಂದು ವಿವರಿಸುತ್ತಾರೆ.

ಇದೊಂದು ವಿನೂತನ ಪ್ರಯೋಗ. ಕೋವಿಡ್‌ 19 ಸಂದರ್ಭದಲ್ಲಿ ಮಹಿಳಾ ಸ್ವಸಹಾಯ ಸಂಘಗಳಿಗೆ ದುಡಿಮೆ ಮಾಡಲು ಅವಕಾಶ ಕಲ್ಪಿಸಲಾಯಿತು. ಗ್ರಾಮೀಣ ಭಾಗದ ಆಸ್ತಿ ಅಳತೆ ಮತ್ತು ನೋಂದಣಿಯ ಹೊಣೆಗಾರಿಕೆ ವಹಿಸಲಾಯಿತು. ರಾಮನಗರದಲ್ಲಿ ಪ್ರಾಯೋಗಿಕವಾಗಿ ಅನುಷ್ಠಾನ ಯಶಸ್ವಿಯಾಗಿದ್ದು ರಾಜ್ಯಾದ್ಯಂತ ವಿಸ್ತರಿಸಲಾಗುವುದು.
-ಡಾ.ಸಿ.ಎನ್‌.ಅಶ್ವತ್ಥನಾರಾಯಣ, ಉಪ ಮುಖ್ಯಮಂತ್ರಿ ಹಾಗೂ ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಸಚಿವರು.

* ಎಸ್.‌ ಲಕ್ಷಿನಾರಾಯಣ

Advertisement

Udayavani is now on Telegram. Click here to join our channel and stay updated with the latest news.

Next