Advertisement

ಕುಡಿವ ನೀರಿಗಾಗಿ ಮಹಿಳೆಯರ ಅಲೆದಾಟ

07:36 AM Mar 16, 2019 | Team Udayavani |

ಕೆ.ಆರ್‌.ಪೇಟೆ: ಮೂವತೈದು ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇರುವ ಪುರಸಭಾ ವ್ಯಾಪ್ತಿಯಲ್ಲಿ ಅಧಿಕಾರಿಗಳು ಸಮರ್ಪಕ ಕುಡಿಯುವ ನೀರು ಪೂರೈಸುವ ವ್ಯವಸ್ಥೆ ಮಾಡದ ಕಾರಣ ಮಹಿಳೆಯರು ಕುಡಿಯುವ ನೀರಿಗಾಗಿ ಖಾಲಿ ಕೊಡಗಳೊಂದಿಗೆ ಅಲೆದಾಡುವ ಪರಿಸ್ಥಿತಿ ಎದುರಾಗಿದೆ. ಪುರಸಭೆಗೆ ಮೂವರು ಸದಸ್ಯರು ಹೇಮಾವತಿ ಬಡಾವಣೆಯಿಂದ ಆಯ್ಕೆಯಾಗಿದ್ದಾರೆ, ಆದರೆ ಯಾರೂ ಕೂಡ ನಿಗಧಿತ ಸಮಯಕ್ಕೆ ಸರಿಯಾಗಿ ಕುಡಿಯುವ ನೀರು ಪೂರೈಸುವ ವ್ಯವಸ್ಥೆ ಕಲ್ಪಿಸಲು ಪ್ರಯತ್ನ ಮಾಡುತ್ತಿಲ್ಲ.

Advertisement

ಸದಸ್ಯರಿಗೆ ಸಮಯ ಸಿಕ್ಕಾಗ ನೀರು ನಿರ್ವಹಣೆ ಮಾಡುವ ಅಧಿಕಾರಿಗಳನ್ನು ನೀರು ಬಿಡುವಂತೆ ಕೇಳಿಕೊಳ್ಳುತ್ತಾರೆ. ಆದರೆ ಅವರ ಮಾತಿಗೆ ಪುರಸಭೆಯಲ್ಲಿ ಕವಡೆ ಕಾಸಿನ ಬೆಲೆ ಕೊಡುತ್ತಿಲ್ಲ. ಸದಸ್ಯರು ಮತ್ತು ಅಧಿಕಾರಿಗಳನ್ನು ನೀರು ಬಿಡುವಂತೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ಗಣಪತಿ ಪಾರ್ಕ್‌ನಲ್ಲಿರುವ ಕೈ ಪಂಪಿನಿಂದ ನೀರು ಹೊತ್ತು ತರುತ್ತಿದ್ದಾರೆ. 

ಅಧಿಕಾರಿಗಳ ನಿರ್ಲಕ್ಷ್ಯ: ಪಟ್ಟಣದ ಜನತೆಗೆ ಅವಶ್ಯ ಇರುವಷ್ಟು ನೀರನ್ನು ಹೇಮಾವತಿ ನದಿಯಿಂದ ತರಬಹುದಾಗಿದೆ. ಆದರೆ ನೀರು ನಿರ್ವಹಣೆ ಮಾಡುವ ಸಿಬ್ಬಂದಿ ಮತ್ತು ಎಂಜಿನಿಯರ್‌ ನಿರ್ಲಕ್ಷ್ಯದಿಂದ ಸಮಸ್ಯೆ ನಿರ್ಮಾಣವಾಗಿರುವುದು. ದೂರದ ಹೇಮಾವತಿ ನದಿಯಿಂದ ತರುವ ನೀರು ಪೈಪ್‌ ಲೀಕೇಜ್‌ ಮೂಲಕ ಪಟ್ಟಣದ ಚರಂಡಿಗೆ ವ್ಯರ್ಥವಾಗಿ ಹರಿಯುತ್ತಿದೆ.

ಇದನ್ನು ಸರಿಪಡಿಸುವ ಗೋಜಿಗೆ ಪುರಸಭೆ ಅಥವಾ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು, ಜನಪ್ರತಿನಿಧಿಗಳೂ ಮುಂದಾಗುತ್ತಿಲ್ಲ. ಕೆಲ ವೇಳೆ ನಲ್ಲಿಗಳಿಗೆ ನೀರು ಬಿಡುವ ಸಿಬ್ಬಂದಿ ಸಮಯಕ್ಕೆ ಸರಿಯಾಗಿ ನಿಲ್ಲಿಸದೆ ಮರೆತು ಮನೆಗೆ ಸೇರಿಕೊಂಡು ಬಿಡುತ್ತಿದ್ದಾರೆ. ಇಂತಹ ಸಮಯದಲ್ಲಿಯೂ ನೀರು ವ್ಯರ್ಥವಾಗಿ ಹರಿದು ಪೋಲಾಗುತ್ತಿದೆ. ಅವಶ್ಯಕ್ಕಿಂತ ಹೆಚ್ಚು ನೀರು ಸಿಗುತ್ತಿದ್ದರೂ ಸಮರ್ಪಕವಾಗಿ ನೀರು ನಿರ್ವಹಣೆ ಮಾಡಲು ಅಧಿಕಾರಿಗಳು ವಿಫ‌ಲರಾಗಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಕೆಟ್ಟಿರುವ ಮೋಟಾರ್‌: ಹೇಮಾವತಿ ಬಡಾವಣೆಯ ಸಿಂಗಮ್ಮ ದೇವಾಲಯ ಸಮೀಪ ಇರುವ ಕೊಳವೆ ಬಾವಿಗಳಲ್ಲಿದ್ದ ಕೈ ಪಂಪನ್ನು ತೆರವುಗೊಳಿಸಿ ಅಲ್ಲಿಗೆ ನೀರೆತ್ತುವ ಮೋಟಾರ್‌ಗಳನ್ನು ಬಿಟ್ಟಿದ್ದಾರೆ. ಅದರ ಮೂಲಕ ಹೇಮಾವತಿ ಬಡಾವಣೆ ಮತ್ತು ಅಗ್ರಹಾರ ಬಡಾವಣೆಯಲ್ಲಿರುವ ಹತ್ತಕ್ಕೂ ಹೆಚ್ಚು ಕಿರು ನೀರು ಸರಬರಾಜು ತೊಂಬೆಗಳಿಗೆ ನೀರು ತುಂಬಿಸಿ ಸಾರ್ವಜನಿಕರು ನಲ್ಲಿಗಳಲ್ಲಿ ನೀರು ಬರದಿದ್ದಾಗ ತೊಂಬೆಗಳಿಂದ ಪಡೆದುಕೊಳ್ಳುವ ವ್ಯವಸ್ಥೆ ಮಾಡಲಾಗಿತ್ತು. ಆದರೆ ಎರಡೂ ಮೋಟಾರ್‌ಗಳು ಕೆಟ್ಟು ಮೂರು ತಿಂಗಳಾದರೂ ಅವುಗಳನ್ನು ಸರಿಪಡಿಸಿ ನೀರು ಸರಬರಾಜು ಮಾಡುವ ಕೆಲಸ ಮಾಡಿಲ್ಲ. ಇಂತಹ ಅಸಮರ್ಪಕ, ವ್ಯರ್ಥ, ನಿರ್ಲಕ್ಷ್ಯವೇ ಕುಡಿಯುವ ನೀರಿನ ಪರದಾಟಕ್ಕೆ ಮುಖ್ಯ ಕಾರಣವಾಗಿದೆ. 

Advertisement

ಹೇಮಾವತಿ ಬಡಾವಣೆಯಲ್ಲಿ ನೀರಿನ ಸಮಸ್ಯೆ ತಮ್ಮ ಗಮನಕ್ಕೂ ಬಂದಿದೆ. ಸಮಯಕ್ಕೆ ಸರಿಯಾಗಿ ನೀರು ಸರಬರಾಜು ಮಾಡಲು ಸಿಬ್ಬಂದಿಗೆ ಸೂಚನೆ ನೀಡಿದ್ದೇನೆ. ಕೆಟ್ಟಿರುವ ಮೋಟಾರ್‌ ದುರಸ್ತಿ ಮಾಡಿಸಲಾಗಿದೆ. ತಾಂತ್ರಿಕ ಕಾರಣಗಳಿಂದ ದುರಸ್ತಿಯಾದ ಮೋಟಾರ್‌ಗಳಿಂದ ನೀರು ಬರುತ್ತಿಲ್ಲ ಎಂದು ನಮ್ಮ ಎಂಜಿನಿಯರ್‌ ತಿಳಿಸಿದ್ದಾರೆ  ಈ ಬಗ್ಗೆ ಪರಿಶೀಲಿಸಿ ಕೂಡಲೇ ಸಮಸ್ಯೆ ಬಗೆಹರಿಸುತ್ತೇನೆ. 
-ಮೂರ್ತಿ, ಮುಖ್ಯಾಧಿಕಾರಿ, ಪುರಸಭೆ

ಈ ಹಿಂದೆ ಕೈಪಂಪು ಒತ್ತಿಕೊಂಡು ಬೇಕಾದಾಗ ನೀರು ಪಡೆದುಕೊಳ್ಳುತ್ತಿದ್ದೆವು. ಆದರೆ ಈಗ ಪುರಸಭೆ ಕೈಪಂಪು ತೆರವು ಮಾಡಿ ಮೋಟಾರ್‌ ಬಿಟ್ಟಿರುವುದರಿಂದ ನಾವು ಕೊಳವೆ ಬಾವಿಯಿಂದ ನೀರು ಪಡೆಯಲು ಸಾಧ್ಯವಾಗುತ್ತಿಲ್ಲ. ಪುರಸಭೆ ಪ್ರತಿದಿನ ನೀರು ಬಿಡುವುದಿಲ್ಲ. ಶೌಚಾಲಯಕ್ಕೆ ಬಳಸಲೂ ನೀರಿಲ್ಲದಂತಾಗಿದೆ. ಸುಡು ಬಿಸಿಲಲ್ಲಿ ದೂರದ ಗಣಪತಿ ಪಾರ್ಕ್‌ನಲ್ಲಿರುವ ಕೊಳವೆ ಬಾವಿಗಳಿಂದ ನೀರು ತರುತ್ತಿದ್ದೇವೆ.
-ಜಯಲಕ್ಷ್ಮಮ್ಮ, ಹೇಮಾವತಿ ಬಡಾವಣೆ ನಿವಾಸಿ

Advertisement

Udayavani is now on Telegram. Click here to join our channel and stay updated with the latest news.

Next