Advertisement

ಗಂಭೀರವಾಗಿ ಪರಿಗಣಿಸುವ ಕಾಲ ವನಿತೆಯರ ಕ್ರಿಕೆಟ್‌

08:18 AM Jul 25, 2017 | Team Udayavani |

ಇದೇ ಮೊದಲ ಬಾರಿಗೆ ಎನ್ನುವಂತೆ ಭಾರತದಲ್ಲಿ ಮಹಿಳಾ ಕ್ರಿಕೆಟ್‌ ಸುದ್ದಿಯೂ ಪತ್ರಿಕೆಗಳ ಮೊದಲ ಪುಟದಲ್ಲಿ ರಾರಾಜಿಸುವಂತೆ ಮಾಡಿದ ಹಿರಿಮೆ ಮಿಥಾಲಿ ಟೀಮ್ಗೆ ಸಲ್ಲಬೇಕು. 

Advertisement

1983 ಭಾರತದ ಕ್ರಿಕೆಟ್‌ ಪಾಲಿಗೆ ಅಜರಾಮರ. ಕಪಿಲ್‌ ದೇವ್‌ ಜಿಂಬಾಬ್ವೆ ಎದುರು 175 ರನ್‌ ಬಾರಿಸಿ ತಂಡವನ್ನು ಸೋಲಿನ ದವಡೆಯಿಂದ ಗೆಲುವಿನ ತೀರ ತಲುಪಿಸಿದ್ದು ಮಾತ್ರವಲ್ಲದೆ ಈ ಕೂಟದಲ್ಲೇ ಕಪಿಲ್‌ ಪಡೆ ವಿಶ್ವಕಪ್‌ ಎತ್ತಿ ವಿಶ್ವವೇ ನಿಬ್ಬೆರಗಾಗುವಂತೆ ಮಾಡಿದ ವರ್ಷವದು. ಇದೆಲ್ಲ ಒಂದು ರೀತಿಯ ಪವಾಡದಂತೆ ನಡೆದ ಘಟನೆಗಳು. ಅನಂತರ ಭಾರತದ ಕ್ರಿಕೆಟ್‌ ನಿರಂತರವಾಗಿ ಯಶಸ್ಸಿನ ಮೆಟ್ಟಿಲೇರತೊಡಗಿತು. ದೇಶದ ಕ್ರಿಕೆಟ್‌ಗೆ ಒಂದು ಅಸ್ಮಿತೆಯನ್ನು ತಂದುಕೊಟ್ಟ ವರ್ಷ ಎಂಬ ಕಾರಣಕ್ಕೆ 1983 ಭಾರತದ ಕ್ರೀಡಾ ಪ್ರೇಮಿಗಳ ಪಾಲಿಗೆ ಅವಿಸ್ಮರಣೀಯ. ಅನಂತರವೇ ಕ್ರಿಕೆಟ್‌ ಆಟಕ್ಕೆ ಕ್ರೀಡಾ ಪುಟಗಳಲ್ಲಿ ಪ್ರಥಮ ಮನ್ನಣೆ ದೊರೆಯತೊಡಗಿದ್ದು. ಕ್ರಿಕೆಟ್‌ ಎನ್ನುವುದು ಧರ್ಮವಾಗಿದ್ದು. ಇದೇ ಮಾತು ಈಗ ಭಾರತದ ವನಿತೆಯರ ಕ್ರಿಕೆಟ್‌ ತಂಡದಲ್ಲಿ ಆಗುತ್ತಿದೆ. ಭಾರತದಲ್ಲೂ ವನಿತೆಯರ ಕ್ರಿಕೆಟ್‌ ತಂಡವಿದೆ ಹಾಗೂ ಅದು ಆಸ್ಟ್ರೇಲಿಯ, ಇಂಗ್ಲಂಡ್‌, ದಕ್ಷಿಣ ಆಫ್ರಿಕದಂತಹ ಪ್ರಬಲ ತಂಡಗಳನ್ನು ಮಣಿಸುವ ಸಾಮರ್ಥ್ಯ ಹೊಂದಿದೆ ಎಂದು ಜಗತ್ತಿಗೆ ತಿಳಿದು ಬಂದ ವರ್ಷ ಇದು. ರವಿವಾರ ಲಾರ್ಡ್ಸ್‌ನಲ್ಲಿ ಕೊನೇ ಗಳಿಗೆಯಲ್ಲಿ ಮಾಡಿದ ಕೆಲವು ಎಡವಟ್ಟುಗಳಿಂದಾಗಿ ವಿಶ್ವ ಕಪ್‌ ಕೈಜಾರದೆ ಹೋಗುತ್ತಿದ್ದರೆ 1983ರ ಇತಿಹಾಸ ಮಹಿಳೆಯರ ರೂಪದಲ್ಲಿ ಮರುಕಳಿಸುತ್ತಿತ್ತು. ಈ ವರ್ಷ ಮಿಥಾಲಿ ನೇತೃತ್ವದ ತಂಡ ಮುಟ್ಟಿದ ಎತ್ತರ ಎಲ್ಲ ರೀತಿಯಲ್ಲೂ ಗಮನಾರ್ಹವಾದದ್ದು. 

ಮೊದಲ ಪಂದ್ಯದಲ್ಲಿ ಇಂಗ್ಲಂಡ್‌ ತಂಡವನ್ನು ಕೆಡವಿದಾಗಲೇ ಈ ತಂಡದಲ್ಲಿ ಕಸುವಿದೆ ಎನ್ನುವುದು ಸಾಬೀತಾಗಿತ್ತು. ಅನಂತರ ಎರಡು ಪಂದ್ಯಗಳನ್ನು ಕಳೆದುಕೊಂಡರೂ ಬಳಿಕ ಚೇತರಿಸಿಕೊಂಡ ಮಿಥಾಲಿ ಪಡೆ ಮರಳಿ ಗೆಲುವಿನ ಬೆನ್ನು ಹತ್ತತೊಡಗಿತು. ಸೆಮಿ ಫೈನಲ್‌ನಲ್ಲಿ ಹಾಲಿ ಚಾಂಪಿಯನ್‌ ಆಸ್ಟ್ರೇಲಿಯ ತಂಡವನ್ನು ಕೆಡವುದರೊಂದಿಗೆ ವನಿತೆಯರು ತಮ್ಮ ಸಾಮರ್ಥ್ಯವನ್ನು ಜಗಜ್ಜಾಹೀರುಗೊಳಿಸಿದರು. ಫೈನಲ್‌ನಲ್ಲಿ ಕಪ್‌ ದಕ್ಕದೇ ಹೋದರೂ ಈ ಸಲದ ಕೂಟ ಮಹಿಳಾ ಕ್ರಿಕೆಟ್‌ಗೊಂದು ಭದ್ರ ಬುನಾದಿ ಹಾಕಿದೆ. ಸೆಮಿಫೈನಲ್‌ನಲ್ಲಿ ಅಜೇಯ 171 ರನ್‌ ಬಾರಿಸಿದ ಹರ್ಮನ್‌ಪ್ರೀತ್‌ ಕೌರ್‌, ಅತ್ಯಧಿಕ ರನ್‌ ಗಳಿಸಿ ವಿಶ್ವದಾಖಲೆ ಮಾಡಿದ ನಾಯಕಿ ಮಿಥಾಲಿ ರಾಜ್‌, ಫೈನಲ್‌ ಪಂದ್ಯದ ಸ್ಟಾರ್‌ ಪೂನಂ ರಾವತ್‌, ದೀಪ್ತಿ ಶರ್ಮ, ವೇದಾ ಕೃಷ್ಣಮೂರ್ತಿ, ಸ್ಮತಿ ಮಂದಾನ ಬೌಲರ್‌ಗಳಾದ ಜೂಲನ್‌ ಗೋಸ್ವಾಮಿ, ಏಕತಾ ಬಿಷ್ಟ್, ಕರ್ನಾಟಕದ ಪ್ರತಿಭೆ ರಾಜೇಶ್ವರಿ ಗಾಯಕ್‌ವಾಡ್‌, ಶಿಖಾ ಪಾಂಡೆ ಹೀಗೆ ಬಹಳಷ್ಟು ಪ್ರತಿಭಾವಂತ ಆಟಗಾರ್ತಿಯರು ತಂಡದಲ್ಲಿದ್ದಾರೆ, ಮಾತ್ರವಲ್ಲ ಒಂದು ತಂಡವಾಗಿ ಆಡುವಲ್ಲಿ ಅವರು ಯಶಸ್ವಿಯಾಗಿದ್ದಾರೆ. ಪ್ರತಿಯೊಂದು ಪಂದ್ಯದಲ್ಲಿ ಒಬ್ಬರಲ್ಲದಿದ್ದರೆ ಇನ್ನೊಬ್ಬರು ಜವಾಬ್ದಾರಿಯುತವಾದ ಆಟವಾಡಿ ತಂಡವನ್ನು ಗೆಲ್ಲಿಸಿದ್ದಾರೆ. ಇದಕ್ಕೂ ಮಿಗಿಲಾಗಿ ಭಾರತದ ಮಹಿಳೆಯರಲ್ಲಿ ಆತ್ಮವಿಶ್ವಾಸ ತುಂಬಿ ಮುಂದಿನ ಪೀಳಿಗೆಯ ವನಿತಾ ಕ್ರಿಕೆಟಿಗರಿಗೆ ವೇದಿಕೆಯೊಂದನ್ನು ನಿರ್ಮಿಸಿ ಕೊಟ್ಟಿದ್ದಾರೆ. ನಿಜಕ್ಕೂ ಇದು ಗ್ರೇಟ್‌ ಎನ್ನಬಹುದಾದ ಸಾಧನೆ. 

ಇದೇ ಮೊದಲ ಬಾರಿಗೆ ಎನ್ನುವಂತೆ ಮಹಿಳಾ ಕ್ರಿಕೆಟ್‌ ಸುದ್ದಿಯೂ ಮೊದಲ ಪುಟದಲ್ಲಿ ರಾರಾಜಿಸುವಂತೆ ಮಾಡಿದ ಹಿರಿಮೆ ಮಿಥಾಲಿ ಟೀಮ್‌ಗೆ ಸಲ್ಲಬೇಕು. ಮಹಿಳೆಯರ ಕ್ರಿಕೆಟನ್ನು ಹತ್ತು ನಿಮಿಷಕ್ಕಿಂತ ಹೆಚ್ಚು ಹೊತ್ತು ನೋಡುವುದು ಬೋರು ಎಂಬ ಭಾವನೆಯನ್ನು ಸುಳ್ಳು ಮಾಡಿದೆ ವನಿತಾ ತಂಡ. ಒಂದು ವೇಳೆ ಪುರುಷ ತಂಡಕ್ಕೆ ಸಿಗುತ್ತಿರುವ ಅರ್ಧದಷ್ಟು ಸೌಲಭ್ಯ ಮತ್ತು ಪ್ರೋತ್ಸಾಹ ಸಿಕ್ಕಿದ್ದರೆ ವನಿತೆಯರು ಇನ್ನಷ್ಟು ಚೆನ್ನಾಗಿ ಆಡುವ ಸಾಧ್ಯತೆಯಿತ್ತು. ಎಲ್ಲ ರಂಗದಲ್ಲಿರುವಂತೆ ಕ್ರೀಡಾ ರಂಗದಲ್ಲೂ ಮಹಿಳೆಯರನ್ನು ಎರಡನೇ ದರ್ಜೆಯವರಂತೆ ನೋಡಲಾಗುತ್ತಿದೆ. ಇದಕ್ಕೆ ಕ್ರಿಕೆಟ್‌ ಕೂಡ ಹೊರತಾಗಿಲ್ಲ. ಸಂಭಾವನೆ, ತರಬೇತಿ, ಸೌಲಭ್ಯ ಸೇರಿದಂತೆ ಎಲ್ಲ ವಿಚಾರಗಳಲ್ಲಿ ಪುರುಷ ಆಟಗಾರರಿಗಿಂತ ಮಹಿಳಾ ಆಟಗಾರರು ಎಷ್ಟೋ ಮೈಲು ದೂರದಲ್ಲಿದ್ದಾರೆ. ಮಹಿಳಾ ಕ್ರಿಕೆಟಿಗೆ ಸಿಗುವ ಪ್ರಚಾರವೂ ಅಷ್ಟಕ್ಕಷ್ಟೇ. ಬಹುತೇಕ ಸಂದರ್ಭದಲ್ಲಿ ಕ್ರೀಡಾ ಪುಟದ ಪುಟ ತುಂಬಿಸಲಷ್ಟೇ ಮಹಿಳಾ ಕ್ರಿಕೆಟ್‌ ವರದಿ ಸೀಮಿತವಾಗಿತ್ತು. ಟಿವಿಗಳಲ್ಲಿ ನೇರ ಪ್ರಸಾರದ ಭಾಗ್ಯ ಲಭಿಸಿದ್ದು ಇತ್ತೀಚೆಗಷ್ಟೆ. ನಮ್ಮ ಪಂದ್ಯ ನಡೆಯುವಾಗ ವರದಿಗಾರರು ಮೈದಾನದ ಹತ್ತಿರವೂ ಸುಳಿಯುವುದಿಲ್ಲ. ಕನಿಷ್ಠ ನನ್ನ ಕೆನ್ನೆಯ ಗುಳಿಗಳನ್ನು ನೋಡುವುದಕ್ಕಾಗಿಯಾದರೂ ಬರುವುದಿಲ್ಲ ಎಂದು ಮಿಥಾಲಿ ಹಿಂದೊಮ್ಮೆ ತಮಾಷೆಯಾಗಿ ಹೇಳಿದ್ದರು. ಆದರೆ ಇದು ಮಹಿಳಾ ಕ್ರಿಕೆಟ್‌ನ ವಾಸ್ತವವೂ ಆಗಿತ್ತು. ಮಹಿಳಾ ಕ್ರಿಕೆಟ್‌ ಬಿಸಿಸಿಐ ಅಡಿಗೆ ಬಂದದ್ದೇ 2006ರಲ್ಲಿ. ಅದೂ ಐಸಿಸಿ ಕ್ರಿಕೆಟ್‌ ಮಂಡಳಿಗಳು ಮಹಿಳಾ ಕ್ರಿಕೆಟ್‌ಗೂ ಮಾನ್ಯತೆ ನೀಡುವುದನ್ನು ಕಡ್ಡಾಯಗೊಳಿಸಿದ ಬಳಿಕ. ಆ ಬಳಿಕವೂ ಬೇಧಭಾವ ಮುಂದುವರಿದಿದೆ. ಎ ಗ್ರೇಡ್‌ ಮಹಿಳಾ ಆಟಗಾರ್ತಿಗೆ ಸಿ ಗ್ರೇಡ್‌ ಪುರುಷ ಆಟಗಾರನ ಸಂಭಾವನೆಯೂ ಇಲ್ಲ. 

ಇದೀಗ ಮಹಿಳಾ ಕ್ರಿಕೆಟನ್ನು ಗಂಭೀರವಾಗಿ ಪರಿಗಣಿಸುವ ಕಾಲ ಬಂದಿದೆ. ನಾವು ಯಾರಿಗೇನು ಕಮ್ಮಿಯಿಲ್ಲ ಎಂದು ವನಿತೆಯರು ತೋರಿಸಿಕೊಟ್ಟಿದ್ದಾರೆ. ಅವರ ಈ ಹುಮ್ಮಸ್ಸನ್ನು ಮುಂದುವರಿಸಿಕೊಂಡು ಹೋಗುವ ಜವಾಬ್ದಾರಿ ಕ್ರಿಕೆಟ್‌ ಮಂಡಳಿ ಮತ್ತು ಸರಕಾರದ ಮೇಲಿದೆ. ಬೇಟಿ ಬಚಾವೋ ಬೇಟಿ ಪಢಾವೋ, ಮಹಿಳಾ ಸಬಲೀಕರಣದಂತಹ ಹೇಳಿಕೆಗಳು ಅರ್ಥಪೂರ್ಣವಾಗುವುದು ಇಂತಹ ಸಕಾರಾತ್ಮಕ ಕ್ರಮಗಳಿಂದಲೇ ಹೊರತು ಬರೀ ಘೋಷಣೆಯಿಂದಲ್ಲ.

Advertisement
Advertisement

Udayavani is now on Telegram. Click here to join our channel and stay updated with the latest news.

Next