Advertisement
ದೇಶ-ವಿದೇಶಗಳಿಂದ ಬರುವ ಲೋಹದ ಹಕ್ಕಿಗಳು ಕೆಳಗಿಳಿಯಲು ಮಹಿಳೆಯರ ಸೂಚನೆಗಾಗಿ ಕಾಯುತ್ತಿದ್ದವು. ಮತ್ತೆ ಆಗಸಕ್ಕೆ ಚಿಮ್ಮಲು ಮಹಿಳೆಯರ ಗ್ರೀನ್ ಸಿಗ್ನಲ್‌ನ ಎದುರು ನೋಡುತ್ತಿದ್ದವು. “ರೆಡ್ ಸಿಗ್ನಲ್’ ಬಿದ್ದರೆ ಜಾಗಬಿಟ್ಟು ಕದಲುತ್ತಿರಲಿಲ್ಲ. ಹೀಗೆ ಪ್ರತಿಯೊಂದೂ ಮಹಿಳೆಯ ಅಣತಿಯಂತೆ ನಡೆಯುತ್ತಿತ್ತು.
Related Articles
Advertisement
ಇರುವುದು ಒಂದೇ ರನ್ ವೇ. ಅದರಲ್ಲೇ ನಿತ್ಯ ಸರಾಸರಿ 660 ವಿಮಾನಗಳು ಹಾರಾಟ ನಡೆಸುತ್ತವೆ. “ಪೀಕ್ ಅವರ್’ನಲ್ಲಿ ಗಂಟೆಗೆ 35 ವಿಮಾನಗಳ ಚಲನ-ವಲನ ಇರುತ್ತದೆ. ಬಂದಿಳಿಯುವ ಮತ್ತು ಏರುವ ವಿಮಾನಗಳಿಗೆ ಎಟಿಎಂನಿಂದಲೇ (ಏರ್ ಟ್ರಾಫಿಕ್ ಮೂವ್‌ಮೆಂಟ್) ಸೂಚನೆಗಳು ಹೋಗಬೇಕು. 55 ಸೆಕೆಂಡ್‌ಗಳ ಅಂತರದಲ್ಲಿ ವಿಮಾನಗಳ ಚಲನ-ವಲನ ಇರುವುದರಿಂದ ಮೈಯೆಲ್ಲಾ ಕಣ್ಣಾಗಿರಬೇಕಾಗುತ್ತದೆ.
ಇದೊಂದು ಸವಾಲಿನ ಕೆಲಸ. ಸಾಮಾನ್ಯವಾಗಿ ಈ ವಿಭಾಗದಲ್ಲಿ ನಿತ್ಯ 5ರಿಂದ 6 ಜನ ಮಹಿಳಾ ಸಿಬ್ಬಂದಿ ಕಾರ್ಯನಿರ್ವಹಿಸುತ್ತಾರೆ. ಆದರೆ, ಮಹಿಳಾ ದಿನಾಚರಣೆ ಅಂಗವಾಗಿ ಎಲ್ಲ 14 ಮಹಿಳೆಯರೂ ಮೊದಲ ಪಾಳಿಯಲ್ಲಿದ್ದೇವೆ ಎಂದು ಎಟಿಎಂ ಜಂಟಿ ಪ್ರಧಾನ ವ್ಯವಸ್ಥಾಪಕಿ ಜಮೀರಾ ಯಾಸಿನ್ ಹೇಳುತ್ತಾರೆ.
ಸಮಯಪ್ರಜ್ಞೆ ಮೆರೆದ ಕನ್ನಡತಿ: ರನ್‌ವೇಯಲ್ಲಿ ಗುರುವಾರ ಬೆಳಗ್ಗೆ 11.34ರ ಸುಮಾರಿಗೆ ಬಂದಿಳಿದ ಸೌದಿಯಾ ವಿಮಾನ, ನಿಗದಿಪಡಿಸಿದ ದ್ವಾರದ ಬದಲಿಗೆ ಬೇರೊಂದು ನಿರ್ಗಮನ ದ್ವಾರದಲ್ಲಿ ತಿರುವು ಪಡೆಯಿತು. ಆದರೆ, ಅಲ್ಲಿ ಕಾಮಗಾರಿ ಪ್ರಗತಿಯಲ್ಲಿದ್ದುದರಿಂದ ಅಪಾಯದ ಸಂಭವವಿತ್ತು. ಆಗ ಸಮಯ ಪ್ರಜ್ಞೆ ಮೆರೆದು ಅಪಾಯ ತಪ್ಪಿಸಿದ್ದು ಅಪ್ಪಟ ಕನ್ನಡತಿ ರಚನಾ ಕಟ್ಟಿಮನಿ. ಸಾಮಾನ್ಯವಾಗಿ ಟ್ಯಾಕ್ಸಿ ವೇ ಅಲ್ಫಾ-4 ಅಥವಾ 5ರಲ್ಲಿ ನಿರ್ಗಮನ ದ್ವಾರ ಇರುತ್ತದೆ.
ಆದರೆ, ಸೌದಿಯಾ ವಿಮಾನ ಅಲ್ಫಾ-1ರಲ್ಲಿ ತಿರುವು ಪಡೆಯಿತು. ಅಲ್ಲಿ ಬಿಐಎಎಲ್‌ನಿಂದ ನಿರ್ವಹಣಾ ಕಾಮಗಾರಿ ಕೈಗೆತ್ತಿಕೊಳ್ಳಲಾಗಿತ್ತು. ಆ ಮಾರ್ಗದಲ್ಲೇ ವಿಮಾನ ಸಾಗಿದ್ದರೆ, ಅಲ್ಲಿ ಸಮಸ್ಯೆ ಆಗುತ್ತಿತ್ತು. ತಕ್ಷಣ ರಚನಾ ಎಟಿಸಿಗೆ ಸುದ್ದಿ ಮುಟ್ಟಿಸಿದರು. ನಂತರ “ಫಾಲೋ ಮಿ’ ಕಾರು ಸ್ಥಳಕ್ಕೆ ತೆರಳಿತು. ಕಾರನ್ನು ಹಿಂಬಾಲಿಸಿದ ವಿಮಾನ, ಸುರಕ್ಷಿತ ಸ್ಥಳಕ್ಕೆ ಬಂದು ನಿಂತಿತು. ಅಂದಹಾಗೆ ಈ ವಿಮಾನದಲ್ಲಿ 238 ಪ್ರಯಾಣಿಕರಿದ್ದರು.
ಸೆಲ್ಫ್ ಬ್ಯಾಗ್ ಡ್ರಾಪ್: ವಿಮಾನ ಪ್ರಯಾಣಿಕರು ಕೆಐಎಎಲ್‌ನಲ್ಲಿ ಬ್ಯಾಗ್ ಟ್ಯಾಗ್ ಸಲುವಾಗಿ ಇನ್ಮುಂದೆ ಕಾಯಬೇಕಿಲ್ಲ. ಇದಕ್ಕಾಗಿ “ಸೆಲ್ಫ್ ಬ್ಯಾಗ್ ಡ್ರಾಪ್’ ವ್ಯವಸ್ಥೆ ಪರಿಚಯಿಸಲಾಗಿದೆ. ಈ ಯಂತ್ರದಲ್ಲಿ ಸ್ವತಃ ಪ್ರಯಾಣಿಕರು ಮುದ್ರಿತ ಬ್ಯಾಗ್ ಟ್ಯಾಗ್ ಪಡೆದು, ಬ್ಯಾಗ್‌ಗೆ ಗಂಟು ಹಾಕಿ, ರೇಸ್ ಟ್ರ್ಯಾಕ್‌ನಲ್ಲಿ ಇಟ್ಟರೆ ಸಾಕು.
ಅಟೋಮೆಟಿಕ್ ಆಗಿ ತಪಾಸಣೆಗೊಳಪಟ್ಟು ಬ್ಯಾಗ್ ಹೊರಬರುತ್ತದೆ. ಇದರಿಂದ ಪ್ರಯಾಣಿಕರ ಸಮಯ ಅರ್ಧಕ್ಕರ್ಧ ಕಡಿಮೆ ಆಗುತ್ತದೆ. ಪ್ರಸ್ತುತ ವ್ಯವಸ್ಥೆಯಲ್ಲಿ ಈ ಪ್ರಕ್ರಿಯೆಗೆ 90 ಸೆಕೆಂಡ್ ಹಿಡಿಯುತ್ತದೆ. ಈಗ 45 ಸೆಕೆಂಡ್ ಸಾಕು ಎಂದು ಡೈಲಿ ಆಪರೇಷನ್ಸ್ ಪ್ರಧಾನ ವ್ಯವಸ್ಥಾಪಕ ಎಸ್.ವಿ. ಅರುಣಾಚಲಂ ತಿಳಿಸಿದರು.
* ವಿಜಯಕುಮಾರ ಚಂದರಗಿ