ಬೆಂಗಳೂರು: ಹೆಬ್ಟಾಳ ಮತ್ತು ಸೆಂಟ್ರಲ್ ಸಿಲ್ಕ್ ಬೋರ್ಡ್ ನಡುವೆ 18 ಕಿ.ಮೀ. ಸುರಂಗ ಮಾರ್ಗ ರಸ್ತೆಯಲ್ಲಿ ಕಾರುಗಳಿಗೆ ಪ್ರತಿ ಕಿ.ಮೀ.ಗೆ ಸರಾಸರಿ 16 ರೂ. ಟೋಲ್ ಶುಲ್ಕ ವಿಧಿಸಿದಾಗ ಮಾತ್ರ ಈ ಸುರಂಗ ರಸ್ತೆ ಯೋಜನೆ ಕಾರ್ಯಸಾಧ್ಯ ಎಂಬ ಅಂಶ ಬೆಳಕಿಗೆ ಬಂದಿದೆ.
ಬಿಬಿಎಂಪಿಯು ಸಮಗ್ರ ಬೆಂಗಳೂರು ನಗರ ಸಂಚಾರ ನಿರ್ವಹಣಾ ಮೂಲಸೌಕರ್ಯ ಯೋಜನೆ ಯ ಅಂತಿಮ ಕಾರ್ಯ ಸಾಧ್ಯತಾ ವರದಿಯನ್ನು ಪ್ರಕಟಿಸಿದ್ದು, ಈ ವರದಿಯಲ್ಲಿ ಸುರಂಗ ಮಾರ್ಗ ರಸ್ತೆಯ ಟೋಲ್ ಶುಲ್ಕ ಬಗ್ಗೆ ಉಲ್ಲೇಖೀಸಲಾಗಿದೆ. 2031 ಮತ್ತು 2041ರ ವರ್ಷಗಳಲ್ಲಿ ಉತ್ತರ-ದಕ್ಷಿಣ ಕಾರಿಡಾರ್ನಲ್ಲಿ ಮೂರು ವಿಭಿನ್ನ ಟ್ರಾಫಿಕ್ ಸನ್ನಿವೇಶಗಳ ಕುರಿತು ವಿಶ್ಲೇಷಿಸಲಾಗಿದೆ.
ಹೆಬ್ಟಾಳ ಮತ್ತು ಸೆಂಟ್ರಲ್ ಸಿಲ್ಕ್ ಬೋರ್ಡ್ ನಡುವೆ 18 ಕಿಲೋ ಮೀಟರ್ ಸುರಂಗ ರಸ್ತೆ ನಿರ್ಮಿಸಲು ಬಿಬಿಎಂಪಿ ಉದ್ದೇಶಿಸಿದ್ದು, ಈ ಯೋಜನೆಗೆ ಕೆಲವು ನಾಗರಿಕ ಸಂಸ್ಥೆಗಳು ಇತ್ತೀಚೆಗೆ ವಿರೋಧ ವ್ಯಕ್ತಪಡಿಸಿರುವುದರ ನಡುವೆಯೇ ಇಂತಹದೊಂದು ವರದಿ ಬಹಿರಂಗಗೊಂಡಿದೆ.ಈ ಉದ್ದೇಶಿತ ಸುರಂಗ ಮಾರ್ಗದಲ್ಲಿ ಕಾರುಗಳಿಗೆ ಪ್ರತಿ ಕಿ.ಮೀ.ಗೆ ಸರಾಸರಿ 16 ರೂ. ಶುಲ್ಕ ವಿಧಿಸಿದರೆ, 18 ಕಿ.ಮೀ.ಗೆ 288 ರೂ. ತಗುಲಲಿದೆ. ಒಂದು ವೇಳೆ ಈ ಶುಲ್ಕ ವಿಧಿಸಿದರೆ ಸುರಂಗ ಮಾರ್ಗದ ಟೋಲ್ ದರ ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ ವೇಗಿಂತಲೂ ಹೆಚ್ಚುವ ದುಬಾರಿಯಾಗಲಿದೆ ಎಂದು ಅಂದಾಜಿಸಲಾಗಿದೆ. 118 ಕಿ.ಮೀ. ಇರುವ ಎಕ್ಸ್ಪ್ರೆಸ್ ವೇನಲ್ಲಿ ಸದ್ಯ ಕಾರು, ವ್ಯಾನ್ ಜೀಪುಗೆ 170 ರೂ.ಟೋಲ್ ಶುಲ್ಕ ವಿಧಿಸಲಾಗುತ್ತಿದೆ.
ಸುರಂಗ ಮಾರ್ಗ ರಸ್ತೆಯಲ್ಲಿ ಕಾರುಗಳಿಗೆ ಪ್ರತಿ ಕಿ.ಮೀ.ಗೆ ಸರಾಸರಿ 16 ರೂ.ಗಳನ್ನು ವಿಧಿಸಿದಾಗ ಮಾತ್ರ ಯೋಜನೆ ಜಾರಿಗೊಳಿಸಬಹುದು ಎಂದು ಕಾರ್ಯಸಾಧ್ಯತಾ ವರದಿಯಲ್ಲಿ ತಿಳಿಸಲಾಗಿದೆ.
135-140 ಕಿ.ಮೀ. ವೇಗ: ನಗರದಲ್ಲಿ ಸಂಚಾರ ದಟ್ಟಣೆ ಕಡಿಮೆ ಮಾಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಟನಲ್ ರಸ್ತೆ ನಿರ್ಮಾಣಕ್ಕೆ ಮುಂದಾಗಿದೆ. ಪ್ರಾಯೋಗಿಕವಾಗಿ ಉತ್ತರ- ದಕ್ಷಿಣ ಕಾರಿಡಾರ್ ಹೆಬ್ಟಾಳದ ಎಸ್ಟೀಮ್ ಮಾಲ್ನಿಂದ ಹೊಸೂರು ರಸ್ತೆಯ ಸಿಲ್ಕ… ಬೋರ್ಡ್ ಕೆಎಸ್ಆರ್ಪಿ ಜಂಕ್ಷನ್ ವರೆಗೆ 18.5 ಕಿ.ಮೀ ಉದ್ದದ ಟನಲ್ ರಸ್ತೆ ನಿರ್ಮಾಣಕ್ಕೆ ಈಗಾಗಲೇ ಸಮಗ್ರ ಯೋಜನಾ ವರದಿ(ಡಿಪಿಆರ್) ಸಿದ್ಧಪಡಿಸಿ ಕಾರ್ಯರೂಪಕ್ಕೆ ಪ್ರಕ್ರಿಯೆ ಆರಂಭವಾಗಿದೆ. ರಾಜ್ಯ ಸರ್ಕಾರದ ಗ್ಯಾರಂಟಿಯೊಂದಿಗೆ 19 ಸಾವಿರ ಕೋಟಿ ರೂ. ಸಾಲ ಪಡೆದು ಸುರಂಗ ರಸ್ತೆ ನಿರ್ಮಾಣಕ್ಕೆ ಬಿಬಿಎಂಪಿ ಮುಂದಾಗಿದೆ. ಇಲ್ಲಿ ಸಂಚರಿಸುವ ವಾಹನಗಳಿಂದ ಟೋಲ್ ಸಂಗ್ರಹಿಸಲು ಉದ್ದೇಶಿಸಲಾಗಿದೆ. ಈ ರಸ್ತೆಯಲ್ಲಿ ವಾಹನಗಳು ಗಂಟೆಗೆ 135-140 ಕಿ.ಮೀ. ವೇಗದಲ್ಲಿ ಸಂಚರಿಸಬಹುದಾಗಿದೆ.