Advertisement
ಹೆಣ್ಣು ಭ್ರೂಣ ಹತ್ಯೆಯಂತಹ ಕರಾಳ ಕೃತ್ಯಗಳಿಗೆ ನಮ್ಮ ಪುರುಷ ಪ್ರಧಾನ ಸಾಮಾಜಿಕ ವ್ಯವಸ್ಥೆಯೇ ಕಾರಣ. ಗಂಡು ಇಳಿವಯಸ್ಸಿನಲ್ಲಿ ಊರುಗೋಲಾಗುತ್ತಾನೆ, ಹೆಣ್ಣಾದರೆ ಮದುವೆಯಾಗಿ ಬೇರೆ ಮನೆಗೆ ಹೋಗುವವಳು ಎಂದು ಬಲವಾಗಿ ನಂಬುವವವರು ಹೆಣ್ಣೆಂದರೆ ಹೀಗಳೆಯುತ್ತಾರೆ.
Related Articles
Advertisement
ಲಿಂಗ ತಾರತಮ್ಯದ ಧೋರಣೆಯನ್ನು ಅನುಸರಿಸಿಕೊಂಡು ಬರುತ್ತಿರುವುದರ ಪರಿಣಾಮವಾಗಿಯೇ ಭಾರತದ ಜನಸಂಖ್ಯೆಯಲ್ಲಿ 50 ಮಿಲಿಯನ್ನಷ್ಟು ಹುಡುಗಿಯರು ಮತ್ತು ಮಹಿಳೆಯರು ಕಾಣೆಯಾಗಿದ್ದಾರೆ ಎಂದು ಯುನಿಸೆಫ್ ವರದಿ ಮಾಡಿದೆ.
ಭಾರತದಲ್ಲಿ ಪ್ರತೀ ವರ್ಷ ಹುಟ್ಟುವ 12 ಮಿಲಿಯನ್ ಬಾಲಕಿಯರಲ್ಲಿ ಸುಮಾರು ಒಂದೂವರೆ ಮಿಲಿಯನ್‌ಗಿಂತಲೂ ಹೆಚ್ಚು ಬಾಲಕಿಯರು ಒಂದು ವರ್ಷದ ಒಳಗೆ ಅಸುನೀಗುತ್ತಿದ್ದಾರೆ. ಅಂದರೆ ಶೇ. 12.2ರಷ್ಟು ಹೆಣ್ಣು ಮಕ್ಕಳು ತಮ್ಮ ಮೊದಲನೇ ಜನ್ಮದಿನೋ ತ್ಸವವನ್ನು ಆಚರಿಸುವ ಮುಂಚೆಯೇ ಮಣ್ಣು ಸೇರಿರುತ್ತಾರೆ. ಕೇವಲ 9 ಮಿಲಿಯನ್ ಹೆಣ್ಣು ಮಕ್ಕಳು ಮಾತ್ರ ತಮ್ಮ 15ನೇ ಜನ್ಮ ದಿನೋತ್ಸವವನ್ನು ಆಚರಿಸಿಕೊಳ್ಳುವಷ್ಟು ಸುದೈವಿಗಳಾಗಿದ್ದಾರೆ.
ಹೆಣ್ಣು ಭ್ರೂಣ ಹತ್ಯೆಗೆ ನೇರ ಮತ್ತು ಮುಖ್ಯ ಕಾರಣವೆಂದರೆ, ಹೆಣ್ಣು ಮಗುವನ್ನು ಕುಟುಂಬದಲ್ಲಿ ಒಂದು ಹೊರೆಯೆಂದೇ ಪರಿಗಣಿಸುತ್ತಿರುವುದು. “ಹೆಣ್ಣು ಸಂಸಾರದ ಕಣ್ಣು’ ಎಂಬ ಮಾತನ್ನು ಅರ್ಥಮಾಡಿಕೊಂಡವರು ಕಡಿಮೆ. ವರದಕ್ಷಿಣೆ, ಕುಟುಂಬದ ಮರ್ಯಾದೆ, ಅವಳನ್ನು ಮದುವೆ ಮಾಡಿಕೊಡುವ ದೊಡ್ಡ ತಾಪತ್ರಯ ಮುಂತಾದ ಸಂಗತಿಗಳು ಕುಟುಂಬದ ಹಿರಿಯರನ್ನು ಸದಾ ಕಾಡುತ್ತವೆ.
ಒಟ್ಟಿನಲ್ಲಿ ಹೆಣ್ಣು ಮಗುವೇ ಬೇಡ ಎಂಬ ತೀರ್ಮಾನಕ್ಕೆ ಬರುವಂತೆ ಮಾಡುತ್ತಿದೆ. ಕುಟುಂಬದಲ್ಲಿ ಒಂದು ಗಂಡು ಮಗು ಜನಿಸಿದರೆ ಅದು ಸುದೈವ ಎಂದೇ ಪರಿಗಣಿಸಲಾಗುತ್ತದೆ. ಇದಕ್ಕೆ ವ್ಯತಿರಿಕ್ತವಾಗಿ ಹೆಣ್ಣು ಮಗುವಿನ ಹುಟ್ಟು ದುರ್ದೈವದ ಸಂಕೇತವೆನಿಸುತ್ತದೆ. ಈ ಎಲ್ಲ ಕಾರಣಗಳಿಂದಾಗಿ ಸರಕಾರ ಯಾವುದೇ ಯೋಜನೆಗಳನ್ನು ತರಲಿ, ಎಷ್ಟೇ ಜಾಗೃತಿ ಮೂಡಿಸಲಿ, ಹೆಣ್ಣು ಭ್ರೂಣ ಹತ್ಯೆ ದೇಶದಲ್ಲಿ ಅವ್ಯಾಹತವಾಗಿ ಸಾಗುತ್ತಲೇ ಇದೆ.
–ಆಶಾ ಎ.ಆರ್.
ಮಂಗಳೂರು ವಿವಿ