ನೌಪಾರಾ (ಒಡಿಸ್ಸಾ): ಲಾಕ್ ಡೌನ್ ಸಂದರ್ಭದಲ್ಲಿ ದೇಶದಲ್ಲಿನ ಮಹಿಳಾ ಜನ ಧನ ಖಾತೆದಾರರ ಸಹಾಯಕ್ಕಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಮೂರು ಕಂತುಗಳಲ್ಲಿ ಘೋಷಿಸಿದ್ದ 1500 ರೂಪಾಯಿಗಳನ್ನು ಪಡೆದುಕೊಳ್ಳಲು ಮಹಿಳೆಯೊಬ್ಬರು ತನ್ನ ಶತಾಯುಷಿ ತಾಯಿಯನ್ನು ಮಂಚದ ಸಹಿತ ಬ್ಯಾಂಕಿಗೆ ಕರೆತಂದಿರುವ ಘಟನೆ ಒಡಿಸ್ಸಾ ರಾಜ್ಯದಲ್ಲಿ ನಡೆದಿರುವುದಾಗಿ ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.
ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಯೋಜನೆಯಡಿಯಲ್ಲಿ ಮೂರು ತಿಂಗಳಿಗೆ ತಲಾ 500 ರೂಪಾಯಿಗಳಂತೆ ನೀಡುತ್ತಿದ್ದ ಕಂತಿನ ಹಣವನ್ನು ಪಡೆಯಲು ಸಾಧ್ಯವಾಗದ ಕಾರಣ ಮಹಿಳೆ ತನ್ನ ತಾಯಿಯನ್ನು ಆಕೆ ಮಲಗಿದ್ದ ಮಂಚದ ಸಹಿತ ಬ್ಯಾಂಕಿಗೆ ಕರೆತರುವ ಪ್ರಮೇಯ ಸೃಷ್ಟಿಯಾಗಿದೆ.
ಶತಾಯುಷಿ ಮಹಿಳೆಯ ಖಾತೆಯಿದ್ದ ಬ್ಯಾಂಕಿನ ಮ್ಯಾನೇಜರ್, ಹಣವನ್ನು ನೀಡಬೇಕಾದರೆ ಖಾತೆದಾರರು ಬ್ಯಾಂಕಿಗೆ ಬರುವುದು ಅನಿವಾರ್ಯವೆಂದು ತಾಕೀತು ಮಾಡಿರುವುದೇ ಈ ಘಟನೆಗೆ ಕಾರಣ ಎಂದು ಶತಾಯುಷಿ ಮಹಿಳೆಯ ಮಗಳು ದೂರಿದ್ದಾರೆ. ಆದರೆ ಜಿಲ್ಲಾಡಳಿತ ಈ ಮಹಿಳೆಯ ಆರೋಪವನ್ನು ಅಲ್ಲಗಳೆದಿದೆ.
ಒಡಿಸ್ಸಾದ ನೌಪಾರ ಜಿಲ್ಲೆಯಲ್ಲಿನ ಬರ್ಗಾಂವ್ ಗ್ರಾಮದಲ್ಲಿನ 60 ವರ್ಷದ ಪುಂಜಿಮಾಟಿ ದೇಯಿ ಎಂಬ ಮಹಿಳೆ ತನ್ನ ಶತಾಯುಷಿ ಅಮ್ಮನನ್ನು ಮಂಚದ ಸಹಿತ ಬ್ಯಾಂಕಿಗೆ ಎಳೆದುಕೊಂಡು ಹೋಗುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬಳಿಕ ಈ ಘಟನೆ ಬೆಳಕಿಗೆ ಬಂದಿದೆ.
ತನ್ನ ಶತಾಯುಷಿ ಅಮ್ಮ ಲಭೇ ಬಘೇಲ್ ಅವರ ಜನಧನ ಖಾತೆಯಿಂದ 1500 ರೂಪಾಯಿಗಳನ್ನು ತೆಗೆಯಲೆಂದು ಮಗಳು ಜೂನ್ 9ರಂದು ಇಲ್ಲಿನ ಉತ್ಕಲ್ ಗ್ರಾಮೀಣ ಬ್ಯಾಂಕಿಗೆ ತೆರಳಿದ್ದರು. ಆದರೆ ಈ ಬ್ಯಾಂಕಿನ ಮ್ಯಾನೇಜರ್ ಅಜಿತ್ ಪ್ರಧಾನ್ ಅವರು, ಈ ಬ್ಯಾಂಕ್ ಖಾತೆ ತಾಯಿಯ ಹೆಸರಲ್ಲಿರುವುದರಿಂದ ಆಕೆಯನ್ನು ಕರೆತಂದರೆ ಮಾತ್ರವೇ ಹಣ ನೀಡುವುದಾಗಿ ಹೇಳಿದ್ದಾರೆ. ಆದರೆ ತನ್ನ ತಾಯಿ ಅನಾರೋಗ್ಯದಿಂದ ಹಾಸಿಗೆ ಹಿಡಿದಿರುವ ಕಾರಣ ಆಕೆಯನ್ನು ಬ್ಯಾಂಕಿಗೆ ಮಂಚದ ಸಹಿತವೇ ಕರೆತರುವ ಅನಿವಾರ್ಯತೆ ಆಕೆಯ ಮಗಳಿಗೆ ಉಂಟಾಗಿದೆ ಎಂದು ಗ್ರಾಮಸ್ಥರು ಈ ಘಟನೆಯ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಆದರೆ ನೌಪಾರಾದ ಜಿಲ್ಲಾಧಿಕಾರಿ ಮಧುಸ್ಮಿತ ಸಾಹೂ ಅವರು ಹೇಳುವುದೇ ಬೇರೆ, ಖಾತೆದಾರರ ಗುರುತು ಖಾತ್ರಿಗಾಗಿ ಮ್ಯಾನೇಜರ್ ಆಕೆಯ ಮನೆಗೇ ಬರುತ್ತೇನೆಂದು ಹೇಳಿದ್ದರೂ ಖಾತೆದಾರ ಮಹಿಳೆಯ ಮಗಳು ತಾಳ್ಮೆ ವಹಿಸದೇ ಅವಸರ ಮಾಡಿರುವ ಕಾರಣ ಈ ಘಟನೆ ಸಂಭವಿಸಿದೆ ಎಂದು ಅವರು ಹೇಳಿಕೊಂಡಿದ್ದಾರೆ.
‘ಆ ಬ್ಯಾಂಕಿನಲ್ಲಿ ಅವರೊಬ್ಬರೇ ಸಿಬ್ಬಂದಿ ಇದ್ದ ಕಾರಣ ಅದೇ ದಿನ ಅವರಿಗೆ ಮಹಿಳೆಯ ಮನೆ ಪರಿಶೀಲನೆಗೆ ತೆರಳುವುದು ಕಷ್ಟಸಾಧ್ಯವಾಗಿತ್ತು. ಆದರೆ ಮರುದಿನ ತಾನೆ ಮನೆಗೆ ಬಂದು ಪರಿಶೀಲನೆ ನಡೆಸುವುದಾಗಿ ಮ್ಯಾನೇಜರ್ ಮಹಿಳೆಗೆ ಭರವಸೆ ನೀಡಿದ್ದರು. ಆದರೆ ಈ ನಡುವೆ ಮಹಿಳೆ ಅದೇ ದಿನದಂದು ತನ್ನ ತಾಯಿಯನ್ನು ಆಕೆ ಮಲಗಿದ್ದ ಮಂಚವನ್ನು ಎಳೆದುಕೊಂಡೇ ಬ್ಯಾಂಕಿಗೆ ಬಂದಿದ್ದಾರೆ’ ಎಂದು ಜಿಲ್ಲಾಧಿಕಾರಿ ಸಾಹೂ ಸ್ಪಷ್ಟಪಡಿಸಿದ್ದಾರೆ.